ರಾ.ಯಾ.ಧಾರವಾಡಕರ-ಜನ್ಮ ಶತಾಬ್ದಿ ಸ್ಮರಣೆ

Update: 2019-08-03 18:48 GMT

ಧಾರವಾಡಕರರ ಅಧ್ಯಯನ, ಆಸಕ್ತಿ ಮತ್ತು ಅಭಿರುಚಿಗಳು ಬಹುಮುಖವಾದುದು. ಅವರು ಬಹುಶ್ರುತರು. ಅವರದು ಬಹುಮುಖ ಪ್ರತಿಭೆ. ಇದಕ್ಕೆ ಅವರ ಕೃತಿ ಶ್ರೇಣಿಗಿಂತ ಮಿಗಿಲಾದ ಸಾಕ್ಷಿ ಇನ್ನೊಂದಿರಲಾರದು. ಅವರು ಸಂಶೋಧಕರು, ಸೃಜನಶೀಲ ಬರಹಗಾರರು. ಸಾಹಿತ್ಯ ಚರಿತ್ರೆ, ಭಾಷಾ ಶಾಸ್ತ್ರ, ಲಲಿತ ಪ್ರಬಂಧಗಳಲ್ಲದೆ ಅವರು ಸಣ್ಣ ಕತೆಗಳನ್ನೂ ಬರೆದಿರುವುದುಂಟು. ಅಲ್ಲದೆ ಪತ್ರಿಕಾ ವ್ಯವಸಾಯ, ಅರ್ಥ ಶಾಸ್ತ್ರ, ಸಮಾಜ ಶಾಸ್ತ್ರ ಕುರಿತು ಗ್ರಂಥಗಳನ್ನು ರಚಿಸಿದ್ದಾರೆ.

ಸೃಜನಶೀಲ ಪ್ರತಿಭೆ, ಪಾಂಡಿತ್ಯ, ಶಿಕ್ಷಣ ಪ್ರೀತಿ ಮತ್ತು ಮೋಹಕ ವಾಗ್ಮಿತೆಗಳ ಸಾಕಾರವಾಗಿದ್ದ ಪ್ರೊಫೆಸರ್ ರಾ.ಯಾ.ಧಾರವಾಡಕರ ಅವರ ಜನ್ಮಶತಾಬ್ದಿಯ ವರ್ಷವಿದು. ಯಾರು ಈ ಧಾರವಾಡಕರ ಎಂದು ಇಂದಿನ ಪೀಳಿಗೆಯ ಕನ್ನಡಿಗರು

ಸೋಜಿಗಪಡಬಹುದಾದರೂ ಕನ್ನಡ ಸಾಹಿತ್ಯದ ವಿದ್ಯಾರ್ಥಿಗಳಿಗೆ ಅವರು ಚಿರಪರಿಚಿತರು. ಅವರ ‘ಕನ್ನಡ ಭಾಷಾ ಶಾಸ್ತ್ರ’ವನ್ನು ಓದದೇ ಇರುವ ಕನ್ನಡ ವಿದ್ಯಾರ್ಥಿಗಳು ಇರಲಾರರು, ಅದನ್ನು ಪಾಠ ಮಾಡದೆ ಇರುವ ಭಾಷಾ ವಿಜ್ಞಾನದ ಅಧ್ಯಾಪಕರು ಇರಲಾರರು.

 ಹಳೆಯ ತಲೆಮಾರಿನ ವಿದ್ವತ್ತು ಮತ್ತು ವಿದ್ಯಾ ವಿನಯ ಸಂಪನ್ನತೆಗಳ ಸಂಕೇತದಂತೆ ಇದ್ದ ಧಾರವಾಡಕರ ಹುಟ್ಟಿದ್ದು 1919ರ ಜುಲೈ 15ರಂದು. ಪೂರ್ಣ ಹೆಸರು ರಾಜೇಂದ್ರ ಯಲಗುರ್ದ ರಾವ್ ಧಾರವಾಡಕರ. ರಾ.ಯ.ಧಾರವಾಡಕರ ಎಂದೇ ಸುಪ್ರಸಿದ್ಧರಾಗಿದ್ದ ಅವರ ಮನೆತನ ಮೂಲತ: ಧಾರವಾಡದ್ದೇ ಆದರೂ, ಅವರು ಹುಟ್ಟಿದ್ದು ವಿಜಯಪುರ ಜಿಲ್ಲೆಯ ಬಾಗಲಕೋಟೆ ಸಮೀಪದ ಯಲಗೂರಿನಲ್ಲಿ. ಈ ಊರಿನ ಪ್ರಾಣದೇವರು ಸುತ್ತಮುತ್ತ ತುಂಬ ಪ್ರಸಿದ್ಧವಾದ ದೇವರಂತೆ. ಆದ್ದರಿಂದ ತಂದೆಯವರಿಗೆ ದೇವರ ಹೆಸರೇ ಅಂಟಿಕೊಂಡಿತು. ತಂದೆ ಯಲಗುರ್ದ ರಾವ್ ವೃತ್ತಿಯಿಂದ ವಕೀಲರಾಗಿದ್ದರು. ಅವರದು ವಕೀಲರ ಮನೆತನ. ಮಗ ರಾಜೇಂದ್ರನೂ ಮನೆತನದ ವಕೀಲಿ ವೃತ್ತಿ ಮುಂದುವರಿಸಬೇಕೆಂಬುದು ತಂದೆಯ ಅಪೇಕ್ಷೆಯಾಗಿತ್ತಾದರೂ ಮಗ ಹಿಡಿದ ದಾರಿ ಬೇರೆ. ‘ಅಡ್ಡದಾರಿ ಹಿಡಿದು ಮಾಸ್ತರನಾದೆ’ ಎಂದು ಸ್ವತ: ಧಾರವಾಡಕರ ಅವರೇ ಹೇಳಿಕೊಳ್ಳುತ್ತಿದ್ದರಂತೆ! ವಕೀಲಿ ವೃತ್ತಿಗಾದ ನಷ್ಟದಿಂದ ಕನ್ನಡ ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಲಾಭವಾಯಿತು.

 ಧಾರವಾಡಕರರ ಪ್ರಾಥಮಿಕದಿಂದ ಹೈಸ್ಕೂಲ್ ವರೆಗಿನ ಶಿಕ್ಷಣ ಬಾಗಲಕೋಟೆಯಲ್ಲೇ ನಡೆಯಿತು. 1936ರಲ್ಲಿ ಆಗಿನ ಮೆಟ್ರಿಕ್ಯುಲೇಷನ್ ಮುಗಿಸಿದ ಧಾರವಾಡಕರ ಮುಂದಿನ ಶಿಕ್ಷಣಕ್ಕಾಗಿ ಸಾಂಗ್ಲಿಗೆ ಹೋಗಿ ಅಲ್ಲಿನ ವೆಲ್ಲಿಂಗ್ಡನ್ ಕಾಲೇಜಿನಲ್ಲಿ ಉನ್ನತ ಶಿಕ್ಷಣ ಮುಂದುವರಿಸಿದರು. ಆ ವೇಳೆಗಾಗಲೇ ಮುಂಬೈ ವಿಶ್ವವಿದ್ಯಾನಿಲಯ ಕನ್ನಡ ಆನರ್ಸ್ ತರಗತಿಗಳನ್ನು ಪ್ರಾರಂಭಿಸಿ ಹಲವು ವರ್ಷಗಳಾಗಿದ್ದವು. ಧಾರವಾಡಕರರು ಕನ್ನಡವನ್ನು ಪ್ರಧಾನ ವಿಷಯವನ್ನಾಗಿ, ಇಂಗ್ಲಿಷನ್ನು ಐಚ್ಛಿಕ ವಿಷಯವನ್ನಾಗಿ ಆರಿಸಿಕೊಂಡು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದರು. ಅದೇ ಕಾಲೇಜಿನಲ್ಲಿ ಫೆಲೋ ಆಗಿ ನೇಮಕಗೊಂಡು ಪಾಠ ಹೇಳಿದರು. ಒಂದೇ ವರ್ಷದಲ್ಲಿ ಇಂಗ್ಲಿಷ್ ಟ್ಯೂಟರ್ ಅಗಿ ಭಡ್ತಿ ಪಡೆದರು. ಆದರೆ ಮನಸ್ಸು ಧಾರವಾಡದತ್ತ ಎಳೆಯುತ್ತಿತ್ತು. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಕೆಲಸಕ್ಕೆ ಪ್ರಯತ್ನಿಸಿದರಾದರೂ ಅದು ಫಲಪ್ರದವಾಗಲಿಲ್ಲ. ಉದ್ಯೋಗ ಅರಸುತ್ತ ಮುಂಬೈಗೆ ಹೋದರು. ಅಲ್ಲಿನ ಸೆಕ್ರಟೇರಿಯಟ್‌ನಲ್ಲಿ ಉದ್ಯೋಗಸ್ಥರಾದರು. ಧಾರವಾಡದ ಹಂಬಲ ಮಾತ್ರ ಹೋಗಿರಲಿಲ್ಲ. ಸುಮಾರು ಎರಡು ವರ್ಷ ಕಳೆಯುವಷ್ಟರಲ್ಲಿ ಅರಸುತ್ತಿದ್ದ ಬಳ್ಳಿ ಕಾಲಿಗೆ ತೊಡರಿದಂತೆ ಅವಕಾಶವೊಂದು ಧಾರವಾಡಕರರಿಗೆ ಒದಗಿ ಬಂತು. 1944ರಲ್ಲಿ ಧಾರವಾಡದಲ್ಲಿ ಕೆ.ಇ.ಬೋರ್ಡ್ ಆರ್ಟ್ಸ್ ಕಾಲೇಜು ಪ್ರಾರಂಭವಾಗಿ ಆಚಾರ್ಯ ಬಿ.ಎಂ.ಶ್ರೀ. ಅದರ ಪ್ರಾಂಶುಪಾಲರಾಗಿ ನೇಮಕಗೊಂಡಿದ್ದರು.

‘ಶ್ರೀ’ ಅಭಿಮಾನಿಗಳಾದ ಧಾರವಾಡಕರರು ಮುಂಬೈಯ 300 ರೂಪಾಯಿ ಸಂಬಳ ಬಿಟ್ಟು 125 ರೂಪಾಯಿ ಪಗಾರಕ್ಕೆ ಓಡಿಬಂದರು. ಕೆ.ಇ. ಬೋರ್ಡ್ ಕಾಲೇಜಿನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ನೇಮಕಗೊಂಡಿದ್ದರು. ‘ಶ್ರೀ’ ಅವರ ಜೊತೆ ಕೆಲಸ ಮಾಡುವ ಸುಯೋಗದ ಮುಂದೆ ಸಂಬಳದಲ್ಲಿ ಆದ ನಷ್ಟ ಏನೂ ಅಲ್ಲ ಎನ್ನಿಸಿರಬೇಕು.

 ಬಿ.ಎಂ.ಶ್ರೀ. 1946ರಲ್ಲಿ ನಿಧನರಾದಾಗ ಕಾಲೇಜಿನ ಆಡಳಿತ ಮಂಡಳಿ ಅವರ ಜಾಗಕ್ಕೆ ತಾತ್ಕಾಲಿಕವಾಗಿ ಧಾರವಾಡಕರರನ್ನು ನೇಮಿಸಿತು. ಕೆಲವು ವರ್ಷಗಳ ನಂತರ ಆಡಳಿತ ಮಂಡಳಿ ಅವರನ್ನು ಪ್ರಾಂಶುಪಾಲರ ಹುದ್ದೆಯಲ್ಲಿ ಖಾಯಂಗೊಳಿಸಿತು. ಸುಮಾರು ಇಪ್ಪತ್ಮೂರು ವರ್ಷಗಳ ಕಾಲ ಪ್ರಾಂಶುಪಾಲರಾಗಿ ಆ ಕಾಲೇಜನ್ನು ಬಹುಮುಖವಾಗಿ ಬೆಳೆಸಿದ ಕೀರ್ತಿ ಧಾರವಾಡಕರರದು.ಮುಂದೆ ಕೆ.ಇ.ಬೋರ್ಡ್ ಕಾಲೇಜು ಜನತಾ ಶಿಕ್ಷಣ ಸಮಿತಿಯ ಕಾಲೇಜಾಗಿ ಬದಲಾಯಿತು. ಕನ್ನಡ ಭಾಷೆ, ಸಾಹಿತ್ಯ, ವ್ಯಾಕರಣಗಳಷ್ಟೇ ಸೊಗಸಾಗಿ ಇಂಗ್ಲಿಷ್ ಸಾಹಿತ್ಯವನ್ನು ಬೋಧಿಸುವ ಸಾಮರ್ಥ್ಯ ಹೊಂದಿದ್ದ ಧಾರವಾಡಕರರು ವಿದ್ಯಾರ್ಥಿಪ್ರಿಯ ಅಧ್ಯಾಪಕರಾಗಿದ್ದರು. ಪ್ರಾಂಶುಪಾಲರಾಗಿ ದಕ್ಷ ಆಡಳಿತಗಾರರಾಗಿದ್ದರು. ಶೈಕ್ಷಣಿಕ ಗುಣಮಟ್ಟ ಮತ್ತು ಆಡಳಿತ ಗುಣಮಟ್ಟಗಳಿಂದ ಕಾಲೇಜನ್ನು ಕಟ್ಟಿಬೆಳೆಸಿದ ಧಾರವಾಡಕರರು ಕಾಲೇಜಿನೊಟ್ಟಿಗೆ ಶಿಕ್ಷಣ ಕ್ಷೇತ್ರದಲ್ಲಿ ಪ್ರಭಾವಶಾಲೀ ವ್ಯಕ್ತಿಯಾಗಿ ತಾವೂ ಬೆಳೆದರು.

ಧಾರವಾಡಕರರ ಅಧ್ಯಯನ, ಆಸಕ್ತಿ ಮತ್ತು ಅಭಿರುಚಿಗಳು ಬಹುಮುಖವಾದುದು. ಅವರು ಬಹುಶ್ರುತರು. ಅವರದು ಬಹುಮುಖ ಪ್ರತಿಭೆ. ಇದಕ್ಕೆ ಅವರ ಕೃತಿ ಶ್ರೇಣಿಗಿಂತ ಮಿಗಿಲಾದ ಸಾಕ್ಷಿ ಇನ್ನೊಂದಿರಲಾರದು. ಅವರು ಸಂಶೋಧಕರು, ಸೃಜನಶೀಲ ಬರಹಗಾರರು. ಸಾಹಿತ್ಯ ಚರಿತ್ರೆ, ಭಾಷಾ ಶಾಸ್ತ್ರ, ಲಲಿತ ಪ್ರಬಂಧಗಳಲ್ಲದೆ ಅವರು ಸಣ್ಣ ಕತೆಗಳನ್ನೂ ಬರೆದಿರುವುದುಂಟು. ಅಲ್ಲದೆ ಪತ್ರಿಕಾ ವ್ಯವಸಾಯ, ಅರ್ಥ ಶಾಸ್ತ್ರ, ಸಮಾಜ ಶಾಸ್ತ್ರ ಕುರಿತು ಗ್ರಂಥಗಳನ್ನು ರಚಿಸಿದ್ದಾರೆ. ‘ತೆರೆಯ ಹಿಂದೆ’ ಅವರ ಕಥಾ ಸಂಕಲನ.

 ಸೃಜನಶೀಲ ಸಾಹಿತ್ಯದಲ್ಲಿ ಲಲಿತ ಪ್ರಬಂಧ ಧಾರವಾಡಕರರ ಹೆಗ್ಗಳಿಕೆ. ಗದ್ಯದಲ್ಲಿ ಭಾವಗೀತೆಗೆ ಹತ್ತಿರವಾದ ಲಲಿತ ಪ್ರಬಂಧ ಪ್ರಕಾರವನ್ನು ಬೆಳೆಸಿ ಶ್ರೀಮಂತಗೊಳಿಸಿದ ಎ.ಎನ್.ಮೂರ್ತಿರಾವ್, ರಾಕು, ತೀನಂಶ್ರೀ, ಪ್ರಭುಶಂಕರ, ಪುತಿನ, ಗೊರೂರು ರಾಮಸ್ವಾಮಿ ಅಯ್ಯಂಗಾರ್ ಇವರ ಸಾಲಿನಲ್ಲಿ ನಿಲ್ಲುವ ಯೋಗ್ಯತೆಯುಳ್ಳ ಪ್ರಬಂಧಕಾರರು. ಧಾರವಾಡಕರರ ಲಲಿತ ಪ್ರಬಂಧಗಳು ಮೂರು ಸಂಪುಟಗಳಲ್ಲಿ ಪ್ರಕಟವಾಗಿವೆ- ‘ಧೂಮ್ರವಲಯಗಳು’, ‘ನವಿಲುಗರಿ’, ‘ತೂರಿದ ಚಿಂತನಗಳು’. ಧಾರವಾಡಕರರ ಲಲಿತ ಪ್ರಬಂಧಗಳು-ಅನೇಕ ಸಂದರ್ಭಗಳಲ್ಲಿ ಲಲಿತವಾಗಿ ಉಳಿಯದೆ, ಹರಟೆಯ ಸ್ವರೂಪವನ್ನು ಪಡೆಯುತ್ತವೆ; ಚಿಂತನೆಯ ಭಾರವನ್ನು ಹೊರಿಸುತ್ತವೆ. ಜೀವನಾನುಭವ, ರಸಿಕತೆ, ನವುರಾದ ವ್ಯಂಗ್ಯ, ತಿಳಿಯಾದ ಹಾಸ್ಯ ಮೊದಲಾದ ಗುಣಗಳಿಂದ ಈ ಪ್ರಬಂಧಗಳು ಆಕರ್ಷಣೀಯವಾಗುತ್ತವೆ ಎನ್ನುತ್ತಾರೆ ವಿಮರ್ಶಕರು. ‘ಹೊಸಗನ್ನಡ ಸಾಹಿತ್ಯದ ಉದಯಕಾಲ’ ಮತ್ತು ಭಾಷಾ ಶಾಸ್ತ್ರ ಧಾರವಾಡಕರರ ಸಂಶೋಧನೆ ಮತ್ತು ವಿದ್ವತ್ತಿಗೆ ನಿದರ್ಶನವಾಗಿ ನಿಲ್ಲುವ ಮಹತ್ವದ ಕೃತಿಗಳು. ಧಾರವಾಡಕರರಿಗೆ ಡಾಕ್ಟರೆಟ್ ತಂದುಕೊಟ್ಟ ‘ಹೊಸಗನ್ನಡ ಸಾಹಿತ್ಯದ ಉದಯಕಾಲ’ 1860ರ ನಂತರದ ಉತ್ತರ ಕರ್ನಾಟಕದ ‘ಅಜ್ಞಾತ ಕಾಲಖಂಡ’ದ ಸಾಹಿತ್ಯ ಚರಿತ್ರೆ.ಹತ್ತೊಂಬತ್ತನೆಯ ಶತಮಾನದ ಕೊನೆಯ ಭಾಗ ಮತ್ತು ಇಪ್ಪತ್ತನೆಯ ಶತಮಾನದ ಪ್ರಾರಂಭ ಕಾಲವನ್ನು ಸಾಮಾನ್ಯವಾಗಿ ಅಜ್ಞಾತ ಕಾಲಖಂಡವೆಂದೂ ಅನುಕರಣ ಯುಗವೆಂದೂ ಸಾಹಿತ್ಯ ಚರಿತ್ರೆಕಾರರು ಹೇಳುತ್ತಾರೆ.ಹಳೆಗನ್ನಡ ಸಾಹಿತ್ಯ ಚರಿತ್ರೆ 1860ನೆಯ ಇಸವಿಗೆ ಬಂದು ನಿಲ್ಲುತ್ತದೆ. ಈ ಅಜ್ಞಾತ ಕಾಲಖಂಡದ ಉತ್ತರ ಕರ್ನಾಟಕವನ್ನು ಅನುಲಕ್ಷಸಿ ಬರೆದ ‘ಹೊಸಗನ್ನಡ ಸಾಹಿತ್ಯದ ಉದಯ’ ಚಾರಿತ್ರಿಕ ಮತ್ತು ಸಾಂಸ್ಕೃತಿಕ ಮಹತ್ವದ ಒಂದು ಸವಿಸ್ತಾರವಾದ ವಿಮರ್ಶಾತ್ಮಕ ಅಧ್ಯಯನ. ಆ ಕಾಲದ ಸಾಹಿತ್ಯ ರೂಪಗಳು, ಸಾಹಿತಿಗಳು, ಅನುಭಾವಿಗಳು, ಶೈಕ್ಷಣಿಕ ಆಡಳಿತಗಾರರು ಮೊದಲಾದವರ ಸಾಧನೆ, ಕೊಡುಗೆಗಳನ್ನು ಚಾರಿತ್ರಿಕ ದೃಷ್ಟಿಯಿಂದ ಕೂಲಂಕಷವಾಗಿ ಪರಾಮರ್ಶಿಸುತ್ತಲೇ ಆ ಕಾಲದ ಅಸ್ಮಿತೆಯನ್ನು ಗುರುತಿಸುವ ವಿಶಿಷ್ಟ ಕೃತಿ ಇದು. ಇದರಲ್ಲಿ ಹೊಸಗನ್ನಡ ಉದಯಕಾಲದ ಪೂರ್ವಸಮೀಕ್ಷೆಯೊಂದಿಗೆ, ಹಲವಾರು ಶೈಕ್ಷಣಿಕ ಆಡಳಿತಗಾರರ ಸಾಧನೆ/ಕೊಡುಗೆಗಳ ಕಥನವಿದೆ; ಹತ್ತೊಂಬತ್ತು ಅನುಭಾವಿ ಕವಿಗಳು ಮತ್ತು ಐವತ್ತೈದು ಸಾಹಿತ್ಯಕರ ಮುಖ್ಯ ರಚನೆಗಳ ವಿಸ್ತೃತ ಉಲ್ಲೇಖಗಳಿವೆ, ಅವರ ಕೃತಿಗಳ ವಿಮರ್ಶಾತ್ಮಕ ವಿಶ್ಲೇಷಣೆ ಇದೆ. ಆ ಕಾಲಘಟ್ಟದಲ್ಲಿ ಹನ್ನೊಂದು ಮಂದಿ ವಿದೇಶಿ ವಿದ್ವಾಂಸರು ಕನ್ನಡಕ್ಕೆ ನೀಡಿರುವ ಕೊಡುಗೆಯ ಪರಿಚಯವಿದೆ. ಹೀಗೆ ವಿಷಯ ಸಮೃದ್ಧಿ ಹಾಗೂ ಮಾಹಿತಿ ಸಮೃದ್ಧಿಯಿಂದ, ವಿಮರ್ಶೆಯ ವಿಚಕ್ಷಣೆಯಿಂದ ಸಂಪದ್ಯುಕ್ತವಾಗಿರುವ ಈ ಗ್ರಂಥ ಒಂದು ಅಪರೂಪದ ಕೃತಿ. ಧಾರವಾಡಕರರು ಉತ್ತಮ ಸಂಶೋಧಕರೂ ಹೌದು ಎಂಬುದನ್ನು ಸಾರುವ ಕೃತಿ ಇದು. ಅನೇಕ ಮುದ್ರಣಗಳನ್ನು ಕಂಡಿರುವ ಭಾಷಾ ಶಾಸ್ತ್ರ ಇಂದಿಗೂ ಭಾಷಾ ಶಾಸ್ತ್ರದ ವಿದ್ಯಾರ್ಥಿಳಷ್ಟೇ ಅಲ್ಲದೇ ಸಾಹಿತ್ಯಾಸಕ್ತರೆಲ್ಲರ ಆಸಕ್ತಿಯನ್ನೂ ಸೆಳೆಯುವಂಥ ಒಂದು ಉಪಯುಕ್ತ ಗ್ರಂಥ. ‘ಸಾಹಿತ್ಯ ಸಮೀಕ್ಷೆ’ ಮತ್ತು ‘ಆರು ಪ್ರಬಂಧಗಳು’ ಸಾಹಿತ್ಯ ಮತ್ತು ಸಂಸ್ಕೃತಿ ವಿಮರ್ಶೆಯ ಲೇಖನಗಳ ಸಂಕಲನಗಳು. ‘ನಾನು ಕಂಡ ಅಮೆರಿಕ’ ಪ್ರವಾಸ ಕಥನ. ಡಾ.ಎಂ.ಎಂ.ಕಲಬುರ್ಗಿ ಹೇಳುವಂತೆ ಇದು ಅಮೆರಿಕ ಕುರಿತ ಒಂದು ಜ್ಞಾನಕೋಶ. ‘ಅಮೆರಿಕನ್ ನೀಗ್ರೋ ಕಥೆಗಳು’ ಅನುವಾದಿತ ಕೃತಿ. ‘ವೆಂಕಟರಂಗೋ ಕಟ್ಟಿ’, ‘ಶ್ರೀ ನಮನ’, ‘ಡಾ.ನಂದೀಮಠ ನೆನಪು’-ಈ ಮಹನೀಯರ ಜೀವನ ಸಾಧನೆಗಳನ್ನು ಗುರುತಿಸುವ, ಗಂಭೀರವಾದ ಜೀವನ ಚರಿತ್ರೆಗೆ ಮಾದರಿ ಎನ್ನುವಂಥ ಕೃತಿಗಳು. ‘ಪತ್ರಿಕಾ ವ್ಯವಸಾಯ’, ‘ಕರ್ನಾಟಕದಲ್ಲಿ ವೃತ್ತ ಪತ್ರಿಕೆಗಳು’ ಪತ್ರಿಕೋದ್ಯಮವನ್ನು ಕುರಿತ ಪುಸ್ತಕಗಳಾದರೆ, ‘ನಮ್ಮ ದೇಶದ ಯೋಜನೆಗಳು’ ಆರ್ಥಿಕ ಅಭಿವೃದ್ಧಿ ಕುರಿತ ವಿವೇಚನೆ. ‘ಕನ್ನಡದಲ್ಲಿ ಕಾನೂನು ಸಾಹಿತ್ಯ’ ಕನ್ನಡದಲ್ಲಿನ ಕಾನೂನು ಸಾಹಿತ್ಯವನ್ನು ಸಮೀಕ್ಷಿಸುವ ಒಂದು ಉತ್ತಮ ಆಕರ ಗ್ರಂಥ. ಗ್ರಂಥ ಸಂಪಾದನೆಯಲ್ಲೂ ಧಾರವಾಡಕರರು ಗಮನಾರ್ಹವಾದ ಕೆಲಸವನ್ನು ಮಾಡಿದ್ದಾರೆ. ‘ಶಾಂತ ಕವಿಗಳ ಮೂರು ಕೀರ್ತನೆಗಳು’, ‘ಭೀಷ್ಮಪರ್ವ ಸಂಗ್ರಹ’, ‘ಬಾಪೂ ಕಾವ್ಯಾಂಜಲಿ’ ಅವರ ಸಂಪಾದಿತ ಕೃತಿಗಳು. ಸುಮಾರು ಇಪ್ಪತ್ತೈದಕ್ಕೂ ಹೆಚ್ಚು ಕೃತಿಗಳ ಲೇಖಕರಾದ ರಾ.ಯ.ಧಾರವಾಡಕರ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಮೂರು ಸಾವಿರ ಮಠದ ಸಾಹಿತ್ಯ ಪುರಸ್ಕಾರ ಹೀಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಸಂದಿವೆ. ಧಾರವಾಡಕರರಿಗೆ ಎಪ್ಪತ್ತು ವರ್ಷ ತುಂಬಿದಾಗ ಅಭಿಮಾನಿಗಳು ಮತ್ತು ಶಿಷ್ಯರು ಸೇರಿ ‘ಪ್ರಬಂಧ ಪ್ರಪಂಚ’ ಅಭಿನಂದನ ಗ್ರಂಥವನ್ನು ಅರ್ಪಿಸಿದರು. ಅಲಕ್ಷ್ಯಕ್ಕೊಳಗಾಗಿದ್ದ ಲಲಿತ ಪ್ರಬಂಧ ಪ್ರಕಾರದಲ್ಲಿ ಗಣನೀಯ ಸಾಧನೆಗೈದ ಧಾರವಾಡಕರರಿಗೆ ಈ ಗೌರವ ಸಂದಿರುವುದು ಒಂದು ಮುಖ್ಯ ಸಂಗತಿಯೇ ಹೌದು. ಈಚೆಗೆ ಮರೆತು ಹೋದ ಮಹಾನುಭಾವರ ಸಾಲಿಗೆ ಸೇರಿಹೋಗಿರುವ ರಾ.ಯ.ಧಾರವಾಡಕಾರರನ್ನು ಕನ್ನಡ ಸಾಹಿತ್ಯ ಪರಿಷತ್ತು ಜನ್ಮ ಶತಾಬ್ದಿ ಸಂದರ್ಭದಲ್ಲಿ ನೆನಪಿಸಿಕೊಂಡು ಅವರ ಕೃತಿಗಳ ಬಗ್ಗೆ ವಿಚಾರ ಸಂಕಿರಣವೊಂದನ್ನು ಏರ್ಪಡಿಸಿದ್ದು ಸ್ತುತ್ಯಾರ್ಹ ಕಾರ್ಯ. ಕರ್ನಾಟಕ ಪುಸ್ತಕ ಪ್ರಾಧಿಕಾರ ಧಾರವಾಡಕರರ ಕೃತಿಗಳನ್ನು ಪುನರ್ ಮುದ್ರಿಸಿದಲ್ಲಿ ಇಂದಿನ ಪೀಳಿಗೆಯ ಸಾಹಿತ್ಯಾಸಕ್ತರಿಗೆ ಅನುಕೂಲವಾದೀತು.

Writer - ಜಿ.ಎನ್ ರಂಗನಾಥ್ ರಾವ್

contributor

Editor - ಜಿ.ಎನ್ ರಂಗನಾಥ್ ರಾವ್

contributor

Similar News