ಮಹಾರಾಷ್ಟ್ರ: ಜೂನಿಯರ್ ಕಾಲೇಜುಗಳಲ್ಲಿ ‘ಯುವ ಸಂಸದ್’; ಕಾಂಗ್ರೆಸ್ ಆಕ್ಷೇಪ

Update: 2019-08-04 17:47 GMT

ಮುಂಬೈ, ಆ. 5: ರಾಜ್ಯಾದ್ಯಂತ ಜೂನಿಯರ್ ಕಾಲೇಜುಗಳಲ್ಲಿ ‘ಯುವ ಸಂಸದ್’ ಭಾಷಣ ಸ್ಪರ್ಧೆ ಏರ್ಪಡಿಸಬೇಕೆನ್ನುವ ಮಹಾರಾಷ್ಟ್ರ ಸರಕಾರದ ಆದೇಶಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್, ಇದು ಯುವ ಮನಸ್ಸುಗಳಲ್ಲಿ ಪ್ರಭಾವ ಬೀರುವ ಪ್ರಯತ್ನ ಎಂದು ಆರೋಪಿಸಿದೆ.

9,700 ಜೂನಿಯರ್ ಕಾಲೇಜುಗಳಲ್ಲಿ ಭಾಷಣ ಸ್ಪರ್ಧೆ ಆಯೋಜಿಸುವಂತೆ ಹಾಗೂ ಅಂತಹ ಕಾರ್ಯಕ್ರಮಗಳ ಉಸ್ತುವಾರಿಯನ್ನು ಜಿಲ್ಲಾ ಶಿಕ್ಷಣ ಅಧಿಕಾರಿ ವಹಿಸುವಂತೆ ರಾಜ್ಯ ಸರಕಾರದ ಜುಲೈ 24ರ ನಿರ್ಣಯ ಹೇಳಿದೆ.

ಭಾಷಣ ಸ್ಪರ್ಧೆ ಯುವ ಜನಾಂಗದ ಸಬಲೀಕರಣದ ಉದ್ದೇಶವನ್ನು ಹೊಂದಿದೆ ಎಂದು ಸರಕಾರದ ನಿರ್ಣಯ ಹೇಳಿದೆ.

ಹೊಸ ಚಿಂತನಗಳನ್ನು ಸೃಷ್ಟಿಸುವುದು, ಸರಕಾರಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸಲಹೆಗಳನ್ನು ಕೋರುವುದು ಹಾಗೂ ಸರಕಾರದಿಂದ ಅವರ ನಿರೀಕ್ಷೆಗಳು ಏನೆಂದು ತಿಳಿದುಕೊಳ್ಳುವ ಬಗ್ಗೆ 15ರಿಂದ 19 ವರ್ಷ ವಯಸ್ಸಿನ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಉದ್ದೇಶವನ್ನು ಇದು ಹೊಂದಿದೆ ಎಂದು ಸರಕಾರಿ ನಿರ್ಣಯ ಹೇಳಿದೆ.

 ಸ್ಪರ್ಧೆ ಸಂದರ್ಭ ವಿದ್ಯಾರ್ಥಿಗಳು ಜನಧನ್ ಯೋಜನೆ, ಸ್ವಚ್ಚ ಭಾರತ್ ಅಭಿಯಾನ, ಉಜ್ವಲ ಯೋಜನೆ, ಆಯುಷ್ಮಾನ್ ಭಾರತ್ ಯೋಜನೆಗಳಂತಹ ವಿವಿಧ ಕಲ್ಯಾಣ ಯೋಜನೆಗಳ ಕುರಿತು ಭಾಷಣ ಮಾಡುವ ನಿರೀಕ್ಷೆ ಇದೆ.

ಆದರೆ, ಮಹಾರಾಷ್ಟ್ರ ಕಾಂಗ್ರೆಸ್ ಅಭಿಯಾನ ಸಮಿತಿ ಅಧ್ಯಕ್ಷ ನಾನಾ ಪಾಟೋಲೆ, ಭಾಷಣದ ವಿಷಯಕ್ಕೂ ವಿದ್ಯಾರ್ಥಿಗಳ ಪಠ್ಯ ಕ್ರಮಕ್ಕೂ ಯಾವುದೇ ಸಂಬಂಧ ಇಲ್ಲ ಎಂದಿದ್ದಾರೆ.

ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಈ ಯೋಜನೆಯನ್ನು ಪರಿಕಲ್ಪನಾತ್ಮಕಗೊಳಿಸಲಾಗಿದೆ. ಬಿಜೆಪಿ ಅಜೆಂಡಾವನ್ನು ಯುವ ಮನಸ್ಸಿನಲ್ಲಿ ತುಂಬುವ ಪ್ರಯತ್ನ ಇದಾಗಿದೆ. ವಿದ್ಯಾರ್ಥಿಗಳನ್ನು ಬಿಜೆಪಿಯ ಚುನಾವಣಾ ಪ್ರಚಾರದಲ್ಲಿ ಸೇರಿಸುವ ಪ್ರಯತ್ನ ಇದಾಗಿದೆ ಎಂದು ಪಾಟೋಲೆ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News