ಮೋದಿ ಸರಕಾರದಲ್ಲಿರುವ 89 ಕಾರ್ಯದರ್ಶಿಗಳ ಪೈಕಿ ಕೇವಲ ಮೂವರು ಎಸ್ಟಿ, ಓರ್ವ ದಲಿತ

Update: 2019-08-05 07:47 GMT

ಹೊಸದಿಲ್ಲಿ, ಆ.5: ಕೇಂದ್ರದ ಮೋದಿ ಸರಕಾರದಲ್ಲಿ ಸೇವೆ ಸಲ್ಲಿಸುತ್ತಿರುವ 89 ಕಾರ್ಯದರ್ಶಿಗಳ ಪೈಕಿ ಕೇವಲ ಒಬ್ಬರು ಮಾತ್ರ ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದಾರೆ. ಉಳಿದಂತೆ ಇತರ ಮೂವರು ಪರಿಶಿಷ್ಟ ಪಂಗಡಗಳಿಗೆ ಸೇರಿದ್ದಾರೆಂದು ಕೇಂದ್ರ ಸರಕಾರ ಸಂಸತ್ತಿಗೆ ನೀಡಿದ ಮಾಹಿತಿ ತಿಳಿಸಿದೆ. ಆದರೆ ಯಾವೊಬ್ಬ ಕಾರ್ಯದರ್ಶಿಯೂ ಇತರ ಹಿಂದುಳಿದ ವರ್ಗಗಳಿಗೆ ಸೇರಿದವರಾಗಿಲ್ಲ ಎಂದು ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಹಾಗೂ ಪಿಂಚಣಿ ಸಚಿವಾಲಯದ ಮಾಹಿತಿ ತಿಳಿಸಿದೆ. ಹೆಚ್ಚಿನ ಕಾರ್ಯದರ್ಶಿಗಳು ಐಎಎಸ್ ಅಧಿಕಾರಿಗಳಾಗಿದ್ದಾರೆ.

ವಿವಿಧ ಕೇಂದ್ರ ಸಚಿವಾಲಯ ಹಾಗೂ ಇಲಾಖೆಗಳಲ್ಲೂ ಹೆಚ್ಚುವರಿ ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ ಹಾಗೂ ನಿರ್ದೇಶಕ ಹುದ್ದೆಗಳಲ್ಲೂ ಪರಿಶಿಷ್ಟ ಜಾತಿ/ಪಂಗಡ, ಒಬಿಸಿ ಅಧಿಕಾರಿಗಳು ಅತ್ಯಂತ ಕಡಿಮೆ ಸಂಖ್ಯೆಯಲ್ಲಿದ್ದಾರೆ. ಉದಾಹರಣೆಗೆ ಕೇಂದ್ರ ಸರಕಾರದ ಸಚಿವಾಲಯಗಳಲ್ಲಿ ಸೇವೆ ಸಲ್ಲಿಸುವ 93 ಹೆಚ್ಚುವರಿ ಕಾರ್ಯದರ್ಶಿಗಳ ಪೈಕಿ ಆರು ಮಂದಿ ಪರಿಶಿಷ್ಟ ಜಾತಿಗೆ ಸೇರಿದವರು ಹಾಗೂ ಐವರು ಪರಿಶಿಷ್ಟ ಪಂಗಡಗಳಿಗೆ ಸೇರಿದವರಾಗಿದ್ದಾರೆ. ಇತರ ಹಿಂದುಳಿದ ವರ್ಗದ ಯಾವೊಬ್ಬ ಹೆಚ್ಚುವರಿ ಕಾರ್ಯದರ್ಶಿಯ ಇಲ್ಲ.

ಒಟ್ಟು 275 ಜಂಟಿ ಕಾಂರ್ದರ್ಶಿಗಳ ಪೈಕಿ 13 ಮಂದಿ ಪರಿಶಿಷ್ಟ ಜಾತಿಗೆ ಸೇರಿದವರು, ಒಂಬತ್ತು ಮಂದಿ ಪರಿಶಿಷ್ಟ ಪಂಗಡಗಳಿಗೆ ಸೇರಿದವರು ಹಾಗೂ 19 ಮಂದಿ ಒಬಿಸಿ ವಿಭಾಗಕ್ಕೆ ಸೇರಿದವರಾಗಿದ್ದಾರೆ. ಮಂಡಲ ಆಯೋಗ ಶಿಫಾರಸು ಮಾಡಿದ ನಂತರ ಸರಕಾರಿ ಉದ್ಯೋಗಗಳಲ್ಲಿ ಶೇ 27.5 ಮೀಸಲಾತಿ ಇತರ ಹಿಂದುಳಿದ ವರ್ಗಗಳಿಗೆ, ಶೇ 15 ಮೀಸಲಾತಿ ಪರಿಶಿಷ್ಟ ಜಾತಿ ಹಾಗೂ ಶೇ 7.5 ಮೀಸಲಾತಿ ಪರಿಶಿಷ್ಟ ವರ್ಗಗಳಿಗೆ ಒದಗಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News