ವಿಧಾನಸಭೆ ವಿಸರ್ಜಿಸಲ್ಪಟ್ಟಿರುವುದರಿಂದ 370ನೇ ವಿಧಿ ರದ್ದತಿಗೆ ರಾಷ್ಟ್ರಪತಿಗೆ ಅಧಿಕಾರವಿದೆ: ಅಮಿತ್ ಶಾ

Update: 2019-08-05 15:21 GMT

ಹೊಸದಿಲ್ಲಿ, ಆ.5: ಸಂವಿಧಾನದ 370(3) ವಿಧಿಯು, ರಾಷ್ಟ್ರಪತಿಗೆ ಸಂವಿಧಾನದ 370 ನೇ ವಿಧಿಯನ್ನು ಅಸಿಂಧುಗೊಳಿಸಲು ಅಧಿಕಾರವಿದೆಯಂಬುದನ್ನು ವಿವರಿಸುತ್ತದೆಯೆಂದು ಶಾ ಸದನಕ್ಕೆ ತಿಳಿಸಿದರು.

 ಜಮ್ಮುಕಾಶ್ಮೀರದ ವಿಧಾನಸಭೆ ವಿಸರ್ಜಿಸಲ್ಪಟ್ಟಿದ್ದು, ರಾಜ್ಯವು ರಾಷ್ಟ್ರಪತಿಯವರ ಆಡಳಿತದಲ್ಲಿದೆ. ಹೀಗಾಗಿ ಆ ರಾಜ್ಯದ ವಿಧಾನಸಭೆಯ ಹಕ್ಕುಗಳನ್ನು ಸಂಸತ್‌ನ ಉಭಯಸದನಗಳು ಹೊಂದಿವೆ. ಹೀಗಾಗಿ ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸುವ ಅಧಿಕೃತ ಅಧಿಸೂಚನೆಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಸಹಿಹಾಕಿದ್ದಾರೆಂದು ಅವರು ಹೇಳಿದರು.

 ‘‘ಜಮ್ಮುಕಾಶ್ಮೀರದ ವಿಶೇಷ ಸ್ಥಾನಮಾನದ ರದ್ದತಿಗೆ ಸಂಬಂಧಿಸಿನಾವು ಅವಿರೋಧವಾಗಿ ಅಧ್ಯಕ್ಷೀಯ ಆದೇಶವನ್ನು ಜಾರಿಗೊಳಿಸಬಹುದಾಗಿದೆ. 1952 ಹಾಗೂ 1962ರಲ್ಲಿ ಕಾಂಗ್ರೆಸ್ ಪಕ್ಷವು ಇದೇ ನಿಯಮವನ್ನು ಬಳಸಿ, ಸಂವಿಧಾನದ 370 ವಿಧಿಗೆ ತಿದ್ದುಪಡಿ ಮಾಡಿತ್ತು. ನಾವೀಗ ಅದೇ ಮಾರ್ಗವನ್ನು ಅನುಸರಿಸಿದ್ದೇವೆ’’ ಎಂದು ಶಾ ತಿಳಿಸಿದರು.

 ಜಮ್ಮುಕಾಶ್ಮೀರದ ವಿಶೇಷ ಸ್ಥಾನಮಾನವನ್ನು ನೀಡುವ ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸುವ ನಿರ್ಧಾರವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ರಾಜ್ಯಸಭೆಯಲ್ಲಿ ಪ್ರಕಟಿಸುತ್ತಿದ್ದಂತೆಯೇ ಬಿಜೆಪಿ ಸಂಸದರು ಎದ್ದು ನಿಂತು ಚಪ್ಪಾಳೆತಟ್ಟುತ್ತಾ ಅಭಿನಂದನೆ ಸಲ್ಲಿಸಿದರು.

ಪ್ರತಿಪಕ್ಷ ಸದಸ್ಯರ ಪ್ರತಿಭಟನೆಯ ನಡುವೆಯೂ ಭಾಷಣ ಮುಂದುವರಿಸಿದ ಅಮಿತ್‌ಶಾ ಅವರು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸುವ ಹಕ್ಕನ್ನು ಕೇಂದ್ರ ಸರಕಾರ ಹೊಂದಿದೆ ಎಂದರು.

 ಇನ್ನು ಮುಂದೆ ಜಮ್ಮಕಾಶ್ಮೀರ ರಾಜ್ಯಕ್ಕೆ ಇಡೀ ಸಂವಿಧಾನವು ಅನ್ವಯವಾಗಲಿದೆ ಎಂದು ಅಮಿತ್‌ಶಾ ಅವರು ಕಾಂಗ್ರೆಸ್, ಟಿಎಂಸಿ, ಪಿಡಿಪಿ ಮತ್ತಿತರ ಪ್ರತಿಪಕ್ಷ ಸದಸ್ಯರ ಪ್ರತಿಭಟನೆಗಳ ನಡುವೆ ಹೇಳಿದರು.

ಕಳೆದ ವರ್ಷದ ನವೆಂಬರ್‌ನಲ್ಲಿ ಜಮ್ಮುಕಾಶ್ಮೀರ ವಿಧಾನಸಭೆಯನ್ನು ಅಮಾನತಿನಲ್ಲಿರಿಸಿ ರಾಜ್ಯಪಾಲರ ಆಳ್ವಿಕೆಯನ್ನು ಹೇರಲಾಗಿತ್ತು. ಹೀಗಾಗಿ ಸಂವಿಧಾನದ 370ನೇ ವಿಧಿಯಲ್ಲಿ ಯಾವುದಾದರೂ ಬದಲಾವಣೆ ಮಾಡಬೇಕಾದರೂ ರಾಜ್ಯವಿಧಾನಸಭೆಯ ಶಿಫಾರಸಿನ ಅಗತ್ಯವಿದೆಯೆಂಬ ನಿಬಂಧನೆಯನ್ನು ಅನುಸರಿಸುವ ಅಗತ್ಯವಿರುವುದಿಲ್ಲವೆಂದು ಶಾ ಹೇಳಿದರು.

 ಜಮ್ಮುಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶವಾಗಿ ವಿಭಜಿಸುವ ಪ್ರಸ್ತಾವಕ್ಕೆ ಸಂಸತ್‌ನ ಅನುಮೋದನೆಯನ್ನು ಬಯಸಿರುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಸಭೆಯಲ್ಲಿ ತಿಳಿಸಿದರು. ಗಡಿಯಾಚೆಗಿನ ಭಯೋತ್ಪಾದನೆಯಿಂದಾಗಿ ಜಮ್ಮುಕಾಶ್ಮೀರದಲ್ಲಿ ಉಂಟಾಗಿರುವ ಭದ್ರತಾ ಪರಿಸ್ಥಿತಿಯನ್ನು ಅಂದಾಜಿಸಿ, ಆ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸುವ ಪ್ರಸ್ತಾವನ್ನು ಕೇಂದ್ರ ಮಾಡಿದೆಯೆಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News