ಕೇಂದ್ರ ಸರಕಾರದ ಸರ್ವಾಧಿಕಾರದ ಕ್ರಮ: ದಿಲ್ಲಿಯಲ್ಲಿರುವ ಕಾಶ್ಮೀರಿ ವಿದ್ಯಾರ್ಥಿಗಳ ಆರೋಪ
ಹೊಸದಿಲ್ಲಿ, ಆ. 5: ಆರ್ಟಿಕಲ್ 370ನನ್ನು ರದ್ದುಗೊಳಿಸುವ ಕೇಂದ್ರ ಸರಕಾರದ ಕ್ರಮವನ್ನು ‘ಸರ್ವಾಧಿಕಾರ’ ಎಂದು ದಿಲ್ಲಿಯಲ್ಲಿರುವ ಕಾಶ್ಮೀರಿ ವಿದ್ಯಾರ್ಥಿಗಳ ವ್ಯಾಖ್ಯಾನಿಸಿದ್ದಾರೆ ಹಾಗೂ ಜಮ್ಮುಕಾಶ್ಮೀರದಲ್ಲಿರುವ ತಮ್ಮ ಕುಟುಂಬದ ಸದಸ್ಯರ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಆರ್ಟಿಕಲ್ 370ನ್ನು ರದ್ದುಗೊಳಿಸಿರುವುದರ ವಿರುದ್ಧ ಧ್ವನಿ ಎತ್ತಿರುವ ಜವಾಹರ್‌ಲಾಲ್ ನೆಹರೂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಒಕ್ಕೂಟದ ಸದಸ್ಯೆ ಶೆಹ್ಲಾ ರಶೀದ್, ಈ ವಿಷಯದ ಕುರಿತು ನಾವು ಸುಪ್ರೀಂ ಕೋರ್ಟ್ ಮೆಟ್ಟಿಲೇರಲಿದ್ದೇವೆ ಎಂದಿದ್ದಾರೆ. ಶೆಹ್ಲಾ ರಶೀದ್ ಅವರು ಮಾಜಿ ಐಎಎಸ್ ಅಧಿಕಾರಿ ಶಾಹ್ ಫೈಝಲ್ ಅವರ ರಾಜಕೀಯ ಸಂಘಟನೆ ಜಮ್ಮು ಹಾಗೂ ಕಾಶ್ಮೀರ ಪೀಪಲ್ಸ್ ಮೂವ್‌ಮೆಂಟ್ (ಜೆಕೆಪಿಎಂ)ನ ಸದಸ್ಯೆ.
‘‘ಇಂದು ನೀಡಿದ ಆದೇಶವನ್ನು ನಾವು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಿದ್ದೇವೆ. ಸರಕಾರದ ಸ್ಥಾನದಲ್ಲಿ ರಾಜ್ಯಪಾಲರ ಹಾಗೂ ವಿಧಾನಸಭೆ ಸ್ಥಾನದಲ್ಲಿ ಸಾಂವಿಧಾನಿಕ ಸಭೆ ಅಸ್ತಿತ್ವಕ್ಕೆ ತರುವುದು ಸಂವಿಧಾನಕ್ಕೆ ಮಾಡುವ ಅಪಚಾರ. ಸಂಘಟಿತರಾಗಲು ಪ್ರಗತಿಪರ ಶಕ್ತಿಗಳಲ್ಲಿ ಮನವಿ ಮಾಡಿ. ದಿಲ್ಲಿ ಹಾಗೂ ಬೆಂಗಳೂರಿನಲ್ಲಿ ಇಂದು ಪ್ರತಿಭಟನೆ ನಡೆಸಿ’’ ಎಂದು ಶೆಹ್ಲಾ ರಶೀದ್ ಟ್ವೀಟ್ ಮಾಡಿದ್ದಾರೆ.
ಕಾಶ್ಮೀರಿಗಳ ಮೊಬೈಲ್ ಫೋನ್ ಸಂಖ್ಯೆಯ ಡಾಟಾ ವೇಗವನ್ನು ನಿರ್ಬಂಧ ಗೊಳಿಸಲಾಗಿದೆ ಎಂದು ಕೂಡ ಅವರು ಆರೋಪಿಸಿದ್ದಾರೆ. ‘‘ಡಾಟಾ ಲಭ್ಯತೆ ನಿರ್ಬಂಧಗೊಳಿಸಿರುವುದರಿಂದ ರಾಜ್ಯದಿಂದ ಹೊರಗಿರುವ ಕಾಶ್ಮೀರಿಗಳಿಗೆ ನಾನು ವೈಫೈ ಮೂಲಕ ಟ್ವೀಟ್ ಅನ್ನು ಮಾತ್ರ ಪೋಸ್ಟ್ ಮಾಡಲು ಸಾಧ್ಯವಾಯಿತು’’ ಎಂದು ಶೆಹ್ಲಾ ರಶೀದ್ ಟ್ವೀಟ್ ಮಾಡಿದ್ದಾರೆ.