ಏಕಪಕ್ಷೀಯ ಕ್ರಮಗಳಿಂದ ಜಮ್ಮು-ಕಾಶ್ಮೀರದ ಸ್ಥಾನಮಾನ ಬದಲಾಗದು
ಇಸ್ಲಾಮಾಬಾದ್, ಆ. 5: ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸುವ ಭಾರತ ಸರಕಾರದ ಕ್ರಮವನ್ನು ಪಾಕಿಸ್ತಾನ ಸೋಮವಾರ ತಿರಸ್ಕರಿಸಿದೆ. ಯಾವುದೇ ಏಕಪಕ್ಷೀಯ ಕ್ರಮಗಳು ‘ವಿವಾದಾಸ್ಪದ ಭೂಭಾಗ ಎಂಬ ರಾಜ್ಯದ ಅಂತರ್‌ರಾಷ್ಟ್ರೀಯ’ ಸ್ಥಾನಮಾನವನ್ನು ಬದಲಾಯಿಸದು ಎಂದು ಅದು ಹೇಳಿದೆ.
ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ಪರಿಚ್ಛೇದವನ್ನು ಭಾರತ ಇಂದು ರದ್ದುಪಡಿಸಿದೆ ಹಾಗೂ ರಾಜ್ಯವನ್ನು ಜಮ್ಮು ಮತ್ತು ಕಾಶ್ಮೀರ ಮತ್ತು ಲದಾಖ್ ಎಂಬ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದೆ.
‘‘ಭಾರತ ಸರಕಾರದ ಯಾವುದೇ ಏಕಪಕ್ಷೀಯ ಕ್ರಮಗಳು ರಾಜ್ಯದ ವಿವಾದಿತ ಸ್ವರೂಪವನ್ನು ಬದಲಾಯಿಸದು... ಈ ಅಂತರ್‌ರಾಷ್ಟ್ರೀಯ ವಿವಾದಕ್ಕೆ ಸಂಬಂಧಿತ ಪಕ್ಷವಾಗಿ ಪಾಕಿಸ್ತಾನವು ಈ ಕಾನೂನುಬಾಹಿರ ಕ್ರಮಗಳನ್ನು ವಿರೋಧಿಸಲು ಎಲ್ಲ ಲಭ್ಯವಿರುವ ಆಯ್ಕೆಗಳನ್ನು ಬಳಸಿಕೊಳ್ಳುವುದು’’ ಎಂದು ಪಾಕಿಸ್ತಾನದ ವಿದೇಶ ಸಚಿವಾಲಯ ಹೇಳಿಕೆಯೊಂದರಲ್ಲಿ ತಿಳಿಸಿದೆ.
► ಪ್ರತಿಪಕ್ಷ, ಆಡಳಿತ ಪಕ್ಷಗಳಿಂದ ಖಂಡನೆ
ಭಾರತದಲ್ಲಿ ನಡೆದಿರುವ ಬೆಳವಣಿಗೆಗಳನ್ನು ಪಾಕಿಸ್ತಾನದ ಆಡಳಿತಾರೂಢ ಮತ್ತು ಪ್ರತಿಪಕ್ಷಗಳ ನಾಯಕರೆಲ್ಲರೂ ಖಂಡಿಸಿದ್ದಾರೆ. 370ನೇ ವಿಧಿಯನ್ನು ರದ್ದುಪಡಿಸುವ ನಿರ್ಧಾರವನ್ನು ಪ್ರತಿಪಕ್ಷ ಪಿಎಂಎಲ್-ಎನ್ ಅಧ್ಯಕ್ಷ ಶೆಹ್ಬಾಝ್ ಶರೀಫ್ ಖಂಡಿಸಿದ್ದಾರೆ. ಇದು ‘ಅಸ್ವೀಕಾರಾರ್ಹ’ ಹಾಗೂ ವಿಶ್ವಸಂಸ್ಥೆಯ ವಿರುದ್ಧ ನಡೆಸಿದ ‘ದ್ರೋಹದ ಕೃತ್ಯ’ ಎಂದು ಅವರು ಬಣ್ಣಿಸಿದ್ದಾರೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ತುರ್ತು ಅಧಿವೇಶನಕ್ಕಾಗಿ ಒತ್ತಾಯಿಸುವಂತೆ ಹಾಗೂ ಈ ಬೆಳವಣಿಗೆಗಳ ಬಗ್ಗೆ ಚೀನಾ, ರಶ್ಯ, ಟರ್ಕಿ, ಸೌದಿ ಅರೇಬಿಯ ಮತ್ತು ಇತರ ಸ್ನೇಹಪರ ದೇಶಗಳೊಂದಿಗೆ ಸಮಾಲೋಚನೆ ನಡೆಸುವಂತೆ ಅವರು ಸರಕಾರವನ್ನು ಒತ್ತಾಯಿಸಿದ್ದಾರೆ.
ಪ್ರತಿಪಕ್ಷ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿಯ ಅಧ್ಯಕ್ಷ ಬಿಲಾವಲ್ ಭುಟ್ಟೊ ಕೂಡ ಜಮ್ಮು ಮತ್ತು ಕಾಶ್ಮೀರದ 370ನೇ ವಿಧಿ ರದ್ದತಿಯನ್ನು ಖಂಡಿಸಿದ್ದಾರೆ.