ಉದ್ಯೋಗ ಸೃಷ್ಟಿಸಲು ಉತ್ತರ ಪ್ರದೇಶವನ್ನೂ ಕೇಂದ್ರಾಡಳಿತ ಪ್ರದೇಶ ಮಾಡುತ್ತೀರಾ?

Update: 2019-08-06 08:14 GMT

ಕಾಶ್ಮೀರ ವಿಷಯವನ್ನು ನೆಹರೂ ನೋಡಿಕೊಳ್ಳುತ್ತಿದ್ದರು, ಸರ್ದಾರ್ ಪಟೇಲ್ ಅಲ್ಲ ಎಂದು ಸಂಸತ್ತಿನಲ್ಲಿ ಅಮಿತ್ ಶಾ ಹೇಳಿದ್ದಾರೆ. ಆದರೆ ಅದು ಇತಿಹಾಸ ಅಲ್ಲ. ಆದರೆ ಅಮಿತ್ ಶಾ ಹೇಳಿರುವುದರಿಂದ ಅದೇ ಇತಿಹಾಸವಾಗಲಿದೆ. ಅವರಷ್ಟು ದೊಡ್ಡ ಇತಿಹಾಸಕಾರ ಯಾರೂ ಇಲ್ಲ.  

ಕಾಶ್ಮೀರಕ್ಕೆ ಬೀಗ ಜಡಿಯಲಾಗಿದೆ. ಅಲ್ಲಿಂದ ಯಾವುದೇ ಸುದ್ದಿ ಬರುತ್ತಿಲ್ಲ. ಆದರೆ ಭಾರತದ ಉದ್ದಗಲಗಳಲ್ಲಿ ಕಾಶ್ಮೀರದ ಬಗ್ಗೆ ಸಂಭ್ರಮಾಚರಣೆ ನಡೆಯುತ್ತಿದೆ. ಭಾರತದ ಬೇರೆ ಭಾಗಗಳ ಜನರು ಕಾಶ್ಮೀರದ ಸುದ್ದಿ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಕಾಶ್ಮೀರದ ಬಾಗಿಲು ಮುಚ್ಚಲಾಗಿದೆ, ಉಳಿದ ಕಡೆಗಳ ಜನರು ತಮ್ಮ ಬಾಗಿಲನ್ನು ತಾವೇ ಮುಚ್ಚಿಕೊಂಡಿದ್ದಾರೆ.

ಜಮ್ಮು ಕಾಶ್ಮೀರ ಹಾಗು ಲಡಾಕ್ ನ ಪುನರ್ವಿಂಗಡಣೆ ಮಸೂದೆ ಜಾರಿಯಾಗಿದೆ. ಇದು ಮಹತ್ವಪೂರ್ಣ ಹಾಗು ಐತಿಹಾಸಿಕವೂ ಹೌದು. ಈ ಮಸೂದೆ ರಾಜ್ಯಸಭೆಯಲ್ಲಿ ಮೊದಲು ಬಂತು , ಅಲ್ಲಿ ಚರ್ಚೆಗೂ ಅವಕಾಶ ನೀಡಲಾಗಿಲ್ಲ. ಕಾಶ್ಮೀರ ಹೇಗೆ ಬಂದ್ ಆಗಿದೆಯೋ ಹಾಗೆ ಈ ವಿಷಯದಲ್ಲಿ ನಿನ್ನೆ ಸಂಸತ್ತು ಕೂಡ ಬಂದ್ ಆಗಿತ್ತು. ಆದರೆ ಈ ಹಿಂದೆ ಕಾಂಗ್ರೆಸ್ ಕೂಡ ಹೀಗೇ ಮಾಡಿತ್ತು. ಹಾಗಾಗಿ ಎಲ್ಲರೂ ನಿರಾಳವಾಗಿ ನಿಟ್ಟುಸಿರು ಬಿಟ್ಟರು. ಹಾಗೆ ನೋಡಿದರೆ ಕಾಂಗ್ರೆಸ್ ಬಿಜೆಪಿಗೆ ಬಹಳಷ್ಟು ಉಪಕಾರ ಮಾಡಿದೆ.

ಬೀದಿ ಬೀದಿಗಳಲ್ಲಿ ಡೋಲು, ನಗಾರಿ ಬಾರಿಸಲಾಗುತ್ತಿದೆ. ಯಾರಿಗೂ ಏನಾಗಿದೆ, ಹೇಗಾಗಿದೆ ಹಾಗು ಯಾಕಾಗಿದೆ ಎಂದು ಗೊತ್ತಿಲ್ಲ. ಹಲವು ವರ್ಷಗಳಿಂದ ಹೇಳಲಾಗುತ್ತಿರುವ ಒಂದು ವಾಕ್ಯ ಮಾತ್ರ ಗೊತ್ತಿದೆ.

ರಾಷ್ಟ್ರಪತಿಗಳು ರಾಜ್ಯಪಾಲರ ಒಪ್ಪಿಗೆ ಇತ್ತು ಎಂದು ಹೇಳುತ್ತಾರೆ. ಎರಡು ದಿನಗಳ ಹಿಂದಿನವರೆಗೂ ತನಗೇನೂ ಗೊತ್ತಿಲ್ಲ, ನಾಳೆ ಏನಾಗಲಿದೆ ಎಂದು ಗೊತ್ತಿಲ್ಲ ಎಂದು ರಾಜ್ಯಪಾಲರು ಹೇಳುತ್ತಿದ್ದರು.ರಾಜ್ಯಪಾಲರು ಕೇಂದ್ರದ ಪ್ರತಿನಿಧಿ. ರಾಷ್ಟ್ರಪತಿಗಳು ಕೇಂದ್ರದ ನಿರ್ಧಾರವನ್ನೇ ರಾಜ್ಯದ ನಿರ್ಧಾರ ಎಂದು ಹೇಳಿಬಿಟ್ಟಿದ್ದಾರೆ. ಹಾಗೇ ಸಹಿ ಮಾಡಿದ್ದಾರೆ.

ಜಮ್ಮು ಕಾಶ್ಮೀರ ಹಾಗು ಲಡಾಕ್ ಇನ್ನು ರಾಜ್ಯವಾಗಿ ಉಳಿದಿಲ್ಲ. ಅದು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ  ವಿಭಜನೆಯಾಗಿದೆ. ರಾಜ್ಯಪಾಲ ಹಾಗು ಮುಖ್ಯಮಂತ್ರಿಗಳ ಹುದ್ದೆ ಇನ್ನಿಲ್ಲ. ರಾಜಕೀಯ ಅಧಿಕಾರ ಮತ್ತು ಗುರುತನ್ನು ಮೊಟಕುಗೊಳಿಸಲಾಗಿದೆ.  ಹೊಸ ಇತಿಹಾಸ ನಿರ್ಮಾಣವಾಗಿದೆ.  

ಭಾರತದ ಉಳಿದೆಡೆ ಅದರಲ್ಲೂ ವಿಶೇಷವಾಗಿ ಉತ್ತರ ಭಾರತದಲ್ಲಿ 370ನೇ ವಿಧಿ ಬಗ್ಗೆ ಅದರದ್ದೇ ಆದ ಒಂದು ತಿಳುವಳಿಕೆ ಇದೆ. ಅದು ಏನು, ಎತ್ತ ಎಂಬ ಚರ್ಚೆ ಇಲ್ಲಿಲ್ಲ. ಅದು ರದ್ದಾಗಿದೆ ಎಂದು ಸಂಭ್ರಮ ಇದೆ ಅಷ್ಟೇ. ಈ ವಿಧಿಯ ಎರಡು ಅಂಶಗಳು ರದ್ದಾಗಿವೆ, ಒಂದು ಉಳಿದುಕೊಂಡಿದೆ. ಅದೂ ರದ್ದಾಗಬಹುದು, ಆದರೆ ಈಗ ಅದು ಅಪ್ರಸ್ತುತ.

ಈ ಸಂಭ್ರಮಾಚರಿಸುತ್ತಿರುವವರಲ್ಲಿ ಒಂದು ವಿಷಯ ಸ್ಪಷ್ಟವಿದೆ. ಅವರಿಗೆ ಈಗ ಸಂಸದೀಯ ಪ್ರಕ್ರಿಯೆಗಳ ನಿಯಮಾವಳಿಗಳ ಬಗ್ಗೆ ಯಾವುದೇ ಆಸಕ್ತಿ ಇಲ್ಲ. ನ್ಯಾಯಾಂಗ, ಕಾರ್ಯಾಂಗ ಹಾಗು ನೀತಿ ನಿಯಮಗಳು ಅವರಿಗೆ ಲೆಕ್ಕಕ್ಕಿಲ್ಲ. ಸಾಂವಿಧಾನಿಕ ಸಂಸ್ಥೆಗಳ ಯೋಚನೆಗೆ ಈಗಾಗಲೇ ಶೃದ್ಧಾಂಜಲಿ ಸಲ್ಲಿಸಲಾಗಿದೆ. ಜನರು ಅಮರತ್ವ ಪ್ರಾಪ್ತಿ ಮಾಡಿದ್ದಾರೆ.

ಇದು ಕತ್ತಲೆಯ ಕಾಲ ಅಲ್ಲ. ಇದು ಅತಿ ಬೆಳಕಿನ ಕಾಲ. ಈಗ ಹೆಚ್ಚು ಕೇಳಿಸುತ್ತದೆ, ಕಡಿಮೆ ಕಾಣುತ್ತದೆ. ಈಗ ಪ್ರಜಾಪ್ರಭುತ್ವವನ್ನು ಪ್ರಜೆಗಳು ವಜಾ ಮಾಡಿಬಿಟ್ಟಿದ್ದಾರೆ. ಚಿಂತಿಸಬೇಕಾದ ಅಗತ್ಯವಿಲ್ಲ. ಜನರಿಗೆ ಈಗ ತಮ್ಮ ನಡುವೆಯೇ ಶತ್ರು ಸಿಕ್ಕಿಬಿಟ್ಟಿದ್ದಾರೆ. ಆ ಶತ್ರು ಒಮ್ಮೆ ಮುಸಲ್ಮಾನನಾದರೆ ಇನ್ನೊಮ್ಮೆ ಕಶ್ಮೀರಿ ಆಗಿಬಿಡುತ್ತಾನೆ. ದ್ವೇಷದ ಹಲವು ಕೋಡ್ ಗಳನ್ನು ಬಳಸಿ ಜನರನ್ನು ಪ್ರೋಗ್ರಾಮಿಂಗ್ ಮಾಡಲಾಗಿದೆ. ಈಗಾಗಲೇ ಅವರ ಮನಸ್ಸಿನೊಳಗೆ ಪ್ರೋಗ್ರಾಮಿಂಗ್ ಮಾಡಲಾಗಿರುವ ಈ ಪದಗಳು ಸಿಕ್ಕಿಬಿಟ್ಟರೆ ಸಾಕು, ಅವರ ಪ್ರತಿಕ್ರಿಯೆ ಎಲ್ಲೆಡೆ ಒಂದೇ ರೀತಿ ಹೊರಹೊಮ್ಮುತ್ತದೆ.

370ನೇ ವಿಧಿ ಬಗ್ಗೆ ಎಲ್ಲರೂ ರಾಜಕೀಯ ಮಾಡಿದ್ದಾರೆ. ಬಿಜೆಪಿಗಿಂತ ಮೊದಲು ಕಾಂಗ್ರೆಸ್ ಅದನ್ನು ದುರುಪಯೋಗ ಮಾಡಿತ್ತು. 370ನೇ ವಿಧಿ ಇದ್ದರೂ ತನ್ನದೇ ಮರ್ಜಿ ಚಲಾಯಿಸಿತು. ಆ ವಿಧಿಯನ್ನು ನಿಷ್ಪ್ರಯೋಜಕ ಮಾಡಿತು. ಈ ಆಟದಲ್ಲಿ ಆ ರಾಜ್ಯದ ರಾಜಕೀಯ ಪಕ್ಷಗಳ ಪಾತ್ರವೂ ಇದೆ. ಅಥವಾ ಅವರ ವೈಫಲ್ಯವನ್ನೇ 370ನೇ ವಿಧಿಯ ವೈಫಲ್ಯ ಎಂಬಂತೆ ತೋರಿಸಲಾಯಿತು. ಕಾಶ್ಮೀರ ಸಮಸ್ಯೆಯನ್ನು ಸಾಕಷ್ಟು ಸಮಯ ಎಳೆದಾಡಲಾಯಿತು, ನೇತಾಡಿಸಿಡಲಾಯಿತು. ಇದರಲ್ಲಿ ಬಹುತೇಕ ಎಳೆದಾಟ ಬಿಜೆಪಿ ಬರುವ ಮೊದಲೇ ಆಯಿತು.

ಬಿಜೆಪಿ ಕೂಡ ಇದರಲ್ಲಿ ರಾಜಕೀಯ ಮಾಡಿತು. ಆದರೆ ನಾವದನ್ನು ರದ್ದು ಮಾಡುತ್ತೇವೆ ಎಂದು ಬಹಿರಂಗವಾಗಿಯೇ ಹೇಳಿತು, ಮತ್ತು ರದ್ದು ಮಾಡಿಬಿಟ್ಟಿತು. 35-A ಯನ್ನು ರದ್ದು ಮಾಡಿದರು. ಆದರೆ 370ನ್ನು ರದ್ದು ಮಾಡುವಾಗ ರಾಜ್ಯ ಸ್ಥಾನಮಾನವನ್ನೇ ತೆಗೆದುಬಿಡುತ್ತೇವೆ ಎಂದು ಯಾವಾಗ ಹೇಳಿದ್ದರು ?, ಈ ಪ್ರಶ್ನೆ ಇದೆ. ಆದರೆ ಪ್ರಶ್ನೆ ಯಾರಿಗಿದೆಯೋ ಅವರು ಅದನ್ನು ಲೆಕ್ಕಕ್ಕೇ ತೆಗೆದುಕೊಂಡಿಲ್ಲ.

ನೋಟು ರದ್ದತಿ ಮಾಡುವಾಗ ಅದರಿಂದ ಭಯೋತ್ಪಾದನೆಯ ಸೊಂಟ ಮುರಿದು ಬೀಳುತ್ತದೆ ಎಂದು ಹೇಳಲಾಗಿತ್ತು. ಆದರೆ ಹಾಗಾಗಲಿಲ್ಲ. ಈ ಬಾರಿಯಾದರೂ ಕಾಶ್ಮೀರದ ಪರಿಸ್ಥಿತಿ ಸಾಮಾನ್ಯವಾಗುತ್ತದೆ ಎಂಬ ನಿರೀಕ್ಷೆ ಇದೆ. ಈಗ ಅಲ್ಲಿನ ಜನರೊಂದಿಗೆ ಮಾತುಕತೆಯ ಪ್ರಶ್ನೆಯೇ ಇಲ್ಲ. ಎಲ್ಲರಿಗೂ ಒಂದೇ ಅಳತೆಯ ಸ್ವೇಟರ್ ಹೋಲಿಸಲಾಗಿದೆ. ಹಾಗಾಗಿ ಅದನ್ನು ಈಗ ಅವರಿಗೆ ಹಾಕಿಸಲೇಬೇಕು. ರಾಜ್ಯದ ಕುರಿತು ತೀರ್ಮಾನ ಮಾಡಿ ಆಗಿದೆ, ಆದರೆ ರಾಜ್ಯಕ್ಕೆ ವಿಷಯವೇ ಗೊತ್ತಿಲ್ಲ. 

ಕಾಶ್ಮೀರಿ ಪಂಡಿತರ ಹತ್ಯೆ ಹಾಗು ವಲಸೆಯ ಸೂಜಿ ಇವತ್ತಿಗೂ ಚುಚ್ಚುತ್ತಲೇ ಇದೆ. ಈಗಿನ ಕ್ರಮದಲ್ಲಿ ಅವರ ವಾಪಸಾತಿಗೆ ಯಾವ ಯೋಜನೆ ಇದೆ ಎಂದು ಯಾರಿಗೂ ಗೊತ್ತಿಲ್ಲ. ಯಾವುದೇ ಯೋಜನೆ ಇಲ್ಲ ಎಂದು ನೀವು ಹೇಳುವಂತಿಲ್ಲ. ಏಕೆಂದರೆ ಯಾರಿಗೂ ಏನೂ ಗೊತ್ತಿಲ್ಲ. ಇದು ಎಲ್ಲರನ್ನೂ ನಿರುತ್ತರರಾಗಿಸುವ ಪ್ರಶ್ನೆ. ಹಾಗಾಗಿ ಕಾಶ್ಮೀರಿ ಪಂಡಿತರೂ ಖುಷಿಯಾಗಿದ್ದಾರೆ ಎಂದುಕೊಳ್ಳೋಣ.

ಅಲ್ಲಿ ಇವತ್ತಿಗೂ ಸಾವಿರಾರು ಕಾಶ್ಮೀರಿ ಪಂಡಿತರು ಇದ್ದಾರೆ. ದೊಡ್ಡ ಸಂಖ್ಯೆಯ ಸಿಖ್ಖರೂ ಇದ್ದಾರೆ. ಅವರು ಹೇಗೆ ಅಲ್ಲಿದ್ದಾರೆ, ಅವರ ಅನುಭವವೇನು ? ಕಾಶ್ಮೀರಿಗಳ ಕುರಿತ ವಿಮರ್ಶೆಯಲ್ಲಿ ಇವರ ಯಾವುದೇ ಪಾತ್ರ ಇಲ್ಲ . ನಮಗದು ಗೊತ್ತೂ ಇಲ್ಲ. 

370ನೆ ವಿಧಿ ಕಾಶ್ಮೀರದ ಎಲ್ಲ ಸಮಸ್ಯೆಗಳ ಮೂಲ ಎಂದು ಅಮಿತ್ ಶಾ ಹೇಳಿದ್ದಾರೆ. ಅಲ್ಲಿನ ಬಡತನದಿಂದ ಭ್ರಷ್ಟಾಚಾರದವರೆಗೆ ಎಲ್ಲಕ್ಕೂ ಅದೇ ಕಾರಣವಂತೆ. ಭಯೋತ್ಪಾದನೆಗೂ ಅದೇ ಕಾರಣ. ಇನ್ನು ಅಲ್ಲಿ ಉದ್ಯೋಗ ಸಿಗಲಿದೆ. ಕಾರ್ಖಾನೆಗಳು ಬರಲಿವೆ. 1990ರ ಆರ್ಥಿಕ ಉದಾರೀಕರಣ ಜಾರಿಯಾದ ಹಾಗೆ ಕಾಣುತ್ತಿದೆ. ಹಾಗೆ ನೋಡಿದರೆ ಉತ್ತರ ಪ್ರದೇಶದಲ್ಲಿ ದೊಡ್ಡ ಮಟ್ಟದಲ್ಲಿ ನಿರುದ್ಯೋಗ ಸಮಸ್ಯೆ ಇದೆ. ಇನ್ನು ಉದ್ಯೋಗ ಹಾಗು ಕಾರ್ಖಾನೆಗಳ ಹೆಸರಲ್ಲಿ ಐದು ಕೇಂದ್ರಾಡಳಿತ ಪ್ರದೇಶಗಳಾಗಿ ಘೋಷಣೆ ಮಾಡದಿದ್ದರೆ ಸಾಕು. 

ಈಗ ಒಂದು ತಾತ್ಕಾಲಿಕ ವಿಧಿ ರದ್ದು ಮಾಡಿ ಇನ್ನೊಂದು ತಾತ್ಕಾಲಿಕ ವಿಧಿ ಜಾರಿಗೊಳಿಸಲಾಗಿದೆ. ಪರಿಸ್ಥಿತಿ ಸಾಮಾನ್ಯಗೊಂಡರೆ ಮತ್ತೆ ರಾಜ್ಯ ಮಾಡುತ್ತೇವೆ ಎಂದು ಅಮಿತ್ ಶಾ ಹೇಳಿದ್ದಾರೆ. ಅಂದರೆ ಈ ಎರಡು ಕೇಂದ್ರಾಡಳಿತ ಪ್ರದೇಶಗಳು ಶಾಶ್ವತವಲ್ಲ. ಪರಿಸ್ಥಿತಿ ಸಾಮಾನ್ಯವಾದರೆ ಮೂರು ಭಾಗಗಳು ಮತ್ತೆ ರಾಜ್ಯದೊಳಗೆ ಬರುವುದೇ ಅಥವಾ ಕೇವಲ ಜಮ್ಮು ಕಾಶ್ಮೀರ ಮಾತ್ರ ರಾಜ್ಯವಾಗುವುದೇ ಎಂದು ಸ್ಪಷ್ಟಗೊಳಿಸಿಲ್ಲ. ರಾಜ್ಯದ ಸ್ಥಾನಮಾನವನ್ನೇ ರದ್ದು ಪಡಿಸುವಂತಹ ಪರಿಸ್ಥಿತಿ ಈಗ ಅಲ್ಲಿ ಏನಿತ್ತು ಎಂಬುದೇ ಅರ್ಥವಾಗುತ್ತಿಲ್ಲ. 

ಕಾಶ್ಮೀರದಲ್ಲಿ ಕರ್ಫ್ಯೂ ಅವಧಿ ಹೆಚ್ಚು ಇರಲಿಕ್ಕಿಲ್ಲ ಎಂದು ನಿರೀಕ್ಷಿಸೋಣ. ಅಲ್ಲಿ ಸ್ಥಿತಿ ಸಾಮಾನ್ಯವಾಗಲಿ. ಕಾಶ್ಮೀರದ ಜನರ ಪರಸ್ಪರ ಸಂವಹನ ಸ್ಥಗಿತಗೊಂಡಿದೆ. ಕಾಶ್ಮೀರದಿಂದ ಹೊರಗಿರುವವರು ತಮ್ಮ ಮನೆಯವರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ಈ ಸ್ಥಿತಿಯಲ್ಲಿ ಸಂಭ್ರಮ ಆಚರಿಸುವವರ ಮನಸ್ಸು ನಾವು ಎಲ್ಲಿಗೆ ತಲುಪಿದ್ದೇವೆ ಎಂಬುದನ್ನು ತೋರಿಸುತ್ತಿದೆ.

ನೀವು ಕೇಂದ್ರದ ಕ್ರಮವನ್ನು ಸ್ವಾಗತಿಸುತ್ತೀರೋ ಇಲ್ಲವೇ ಎಂದು ಒಂದು ಗುಂಪು ಕೇಳುತ್ತಿದೆ. ಸ್ವತಃ ಬಿಜೆಪಿಯೇ 370ನೇ ವಿಧಿ ರದ್ದತಿಯನ್ನು ವಿರೋಧಿಸುತ್ತಿರುವ ಜೆಡಿಯು ಪಕ್ಷದ ಜೊತೆ ಹೊಂದಾಣಿಕೆಯಲ್ಲಿದೆ. ಅದರ ವಿರೋಧದ ಹೊರತಾಗಿಯೂ ಅದರ ಜೊತೆ ಸರಕಾರದಲ್ಲಿದೆ. ಆದರೆ ನೀವು ಸರಕಾರದ ಪ್ರಕ್ರಿಯೆಯನ್ನು ಪ್ರಶ್ನಿಸಿದರೆ ಬಯ್ಗುಳ ಸುರಿಸುವ ದಂಡು ನಿಮ್ಮ ಮೇಲೆ ಮುಗಿಬೀಳುತ್ತದೆ. ಆದರೆ ಬಿಹಾರದಲ್ಲಿ ಮಾತ್ರ ಬಿಜೆಪಿ ಮಂತ್ರಿ ಪದವಿಯ ಸುಖ ಅನುಭವಿಸುತ್ತಿರುತ್ತದೆ. 

ಇನ್ನು ಕಾಶ್ಮೀರದಲ್ಲಿ ಜಮೀನು ಖರೀದಿಸಿಡಬಹುದು ಎಂಬ ಖುಷಿಯಿದೆ. ಇತರ ರಾಜ್ಯಗಳಲ್ಲೂ ಇಂತಹ ನಿರ್ಬಂಧ ರದ್ದುಗೊಳಿಸುವ ಬೇಡಿಕೆ ಬರಬಹುದು. ಆದಿವಾಸಿ ಪ್ರದೇಶಗಳಲ್ಲಿ ಸಂವಿಧಾನದ ಐದನೇ ಪರಿಚ್ಛೇದದ ಪ್ರಕಾರ ಜಮೀನು ಖರೀದಿಸಲು ಇರುವ ನಿರ್ಬಂಧವನ್ನು ರದ್ದು ಮಾಡುವವರೆಗೆ ಭಾರತ ಒಂದು ಒಗ್ಗಟ್ಟಿನ ರಾಷ್ಟ್ರವಾಗದು ಎಂಬ ಬೇಡಿಕೆ ಕೇಳಿಬರಬಹುದು. ಒಂದೇ ಭಾರತದ ಘೋಷಣೆ ಕೂಗುವವರು ಕಾಶ್ಮೀರಕ್ಕೆ ಸೀಮಿತವಾಗುವರೇ ಅಥವಾ ಈಶಾನ್ಯ ಭಾರತಕ್ಕೂ ಹೋಗುವರೇ ?

ಮಾಡಿದ ವಿಧಾನ ಚೆನ್ನಾಗಿರಲಿಲ್ಲ, ಆದರೆ ಫಲಿತಾಂಶ ಚೆನ್ನಾಗಿರಲಿ ಎಂದು ಪ್ರಾರ್ಥಿಸಿ. ಆದರೆ ಉದ್ದೇಶವೇ ಸರಿಯಿಲ್ಲದಿದ್ದರೆ ಫಲಿತಾಂಶ ಸರಿಯಾಗುವುದು ಹೇಗೆ?, ಕಾಶ್ಮೀರಕ್ಕೆ ಈವರೆಗೆ 370ನೇ ವಿಧಿಗಾಗಿ ಭಾರೀ ಬೆಲೆ ತೆರಬೇಕಾಗುತ್ತಿತ್ತು. ಬಹುಶ  ಉಳಿದ ಭಾರತೀಯರ ಅರೆಬರೆ ತಿಳುವಳಿಕೆಯ ಸಿಟ್ಟು ಇನ್ನು ಕಾಶ್ಮೀರಿಗಳಿಗೆ ಎದುರಿಸಬೇಕಾಗಿಲ್ಲ. ಹಾಗಾಗಬಹುದೇ?, ಯಾರಿಗೂ ಏನೂ ಗೊತ್ತಿಲ್ಲ.  ಈಗ ಕಾಶ್ಮೀರಿ ಜನರ ಬಗ್ಗೆ ಚಿಂತಿಸಬೇಕಾಗಿದೆ. ನೀವು ಜನತೆ. ನಿಮ್ಮ ನಡುವೆಯೇ ಕಾಶ್ಮೀರಿಗಳ ಹೆಣ್ಣು ಮಕ್ಕಳೊಂದಿಗೆ ಏನು ಮಾಡಬೇಕು ಎಂದು ಕೆಲವು ಮೆಸೇಜು ಕಳಿಸುತ್ತಿದ್ದಾರೆ. ನೀವು ನಿಮ್ಮ ಸಂಭ್ರಮದ ಬಗ್ಗೆ ಪ್ರಾಮಾಣಿಕರಾಗಿದ್ದರೆ ಇಂತಹ ಮನಸ್ಥಿತಿಯ ಜನರ ಜೊತೆ ನಿಮ್ಮ ಸಂಭ್ರಮ ಕಳೆಗಟ್ಟುವುದು ಹೇಗೆ ಎಂದು ಯೋಚಿಸಿ.

ಈ ಸಂಭ್ರಮಾಚರಣೆ ಮಾಡುತ್ತಿರುವ ಜನರ ಮನಸ್ಸು ಬಹಳ ದೊಡ್ಡದು. ಅವರಿಗೆ ಬಹಳಷ್ಟು ಸುಳ್ಳು ಹಾಗು ಅನ್ಯಾಯಗಳನ್ನು ನೋಡಿಯೂ ನೋಡದಂತೆ ಇರುವ ಧೈರ್ಯವಿದೆ. ಅವರಿಗೆ ಸತ್ಯ ಹಾಗು ನ್ಯಾಯ ಮುಖ್ಯ ಅಲ್ಲ. ಅವರಿಗೆ ಹೌದು ಅಥವಾ ಅಲ್ಲ ಎಂಬ ಉತ್ತರ ಮಾತ್ರ ಮುಖ್ಯ. ಜನರು ಏನನ್ನು ಕೇಳಬಯಸುತ್ತಾರೋ ಅದನ್ನೇ ಹೇಳಿ. ನನಗೂ ಹಲವರು ಈ  ಒಳ್ಳೆಯ ಸಲಹೆ ನೀಡಿದ್ದಾರೆ. ಕಾಶ್ಮೀರ ಜನರಲ್ಲಿ ಮಾಡಿರುವ ಪ್ರೋಗ್ರಾಮಿಂಗ್ ಅನ್ನು ಸ್ಫೋಟಿಸುವ ಟ್ರಿಗರ್ ಆಗಬಹುದು. ಹಾಗಾಗಿ ಸುಮ್ಮನಿರುವ ಸಲಹೆ ನೀಡಲಾಗಿದೆ. 

ಇತಿಹಾಸ ನಿರ್ಮಾಣವಾಗುತ್ತಿದೆ. ಒಂದು ಕಾರ್ಖಾನೆ ತೆರೆದಿದೆ. ಅಲ್ಲಿ ಯಾವಾಗ ಯಾವ ಇತಿಹಾಸ ನಿರ್ಮಾಣವಾಗಿ ಹೊರಬರುತ್ತದೆ ಎಂದು ಯಾರಿಗೂ ಏನೂ ಗೊತ್ತಾಗುವುದಿಲ್ಲ. ಇತಿಹಾಸ ಎಲ್ಲಿ ಆಗಿದೆಯೋ ಅಲ್ಲಿ ಸಂಪೂರ್ಣ ಮೌನವಿದೆ. ಸಂಭ್ರಮ ಇರುವಲ್ಲಿ ಇತಿಹಾಸದ ಪರಿವೆಯೇ ಇಲ್ಲ. ಅಗತ್ಯ ಬಿದ್ದರೂ ಇತಿಹಾಸವನ್ನು ತಮಗೆ ಬೇಕಾದಂತೆ ಮಾಡಿಕೊಳ್ಳುತ್ತಾರೆ. ಕಾಶ್ಮೀರ ವಿಷಯವನ್ನು ನೆಹರೂ ನೋಡಿಕೊಳ್ಳುತ್ತಿದ್ದರು, ಸರ್ದಾರ್ ಪಟೇಲ್ ಅಲ್ಲ ಎಂದು ಸಂಸತ್ತಿನಲ್ಲಿ ಅಮಿತ್ ಶಾ ಹೇಳಿದ್ದಾರೆ. ಆದರೆ ಅದು ಇತಿಹಾಸ ಅಲ್ಲ. ಆದರೆ ಅಮಿತ್ ಶಾ ಹೇಳಿರುವುದರಿಂದ ಅದೇ ಇತಿಹಾಸವಾಗಲಿದೆ. ಅವರಷ್ಟು ದೊಡ್ಡ ಇತಿಹಾಸಕಾರ ಯಾರೂ ಇಲ್ಲ.

ಟಿಪ್ಪಣಿ - ಕಾಶ್ಮೀರ ಬಹಳ ಗಂಭೀರ ವಿಷಯ ಎಂದು ಜೋಕು ತಯಾರಿಸುವವರಿಗೆ ಹೇಳಿ. ಅದು ಫ್ಯಾಶನ್ ವಿಷಯ ಅಲ್ಲ. ಇವರು ಹಾಗು ಅಶ್ಲೀಲ ಮೆಸೇಜು ಕಳಿಸುವವರ ನಡುವೆ ಯಾವುದೇ ವ್ಯತ್ಯಾಸ ಇಲ್ಲ. ಇವರಿಬ್ಬರಿಗೂ ಕಾಶ್ಮೀರದ ಜನರ ಬಗ್ಗೆ ಏನೂ ಭಾವನೆಗಳಿಲ್ಲ.

ನೆಹರೂ ತಂದ 370ನೇ ವಿಧಿಯನ್ನು ರದ್ದು ಮಾಡಬಹುದಾದರೆ ವಾಜಪೇಯಿ ಹೇರಿರುವ NPS ( ನ್ಯಾಷನಲ್ ಪೆನ್ಶನ್ ಸ್ಕೀಮ್ ) ಯಾಕೆ ರದ್ದು ಪಡಿಸಬಾರದು ?

Full View

Writer - ರವೀಶ್ ಕುಮಾರ್

contributor

Editor - ರವೀಶ್ ಕುಮಾರ್

contributor

Similar News