ಅಮಿತ್ ಶಾ ಸುಳ್ಳು ಹೇಳುತ್ತಿದ್ದಾರೆ, ನನ್ನನ್ನು ಗೃಹಬಂಧನದಲ್ಲಿ ಇರಿಸಲಾಗಿದೆ: ಫಾರೂಕ್ ಅಬ್ದುಲ್ಲಾ

Update: 2019-08-06 14:17 GMT

ಹೊಸದಿಲ್ಲಿ, ಆ.6: ತನ್ನನ್ನು ಬಂಧಿಸಲಾಗಿಲ್ಲ ಎಂದು ಗೃಹಸಚಿವ ಅಮಿತ್ ಶಾ ಅವರು ಸುಳ್ಳು ಹೇಳಿದ್ದಾರೆ ಎಂದು ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರು ಆರೋಪಿಸಿದ್ದಾರೆ.

ತನ್ನನ್ನು ಬಂಧಿಸಲಾಗಿಲ್ಲ ಎಂದು ಭಾರತದ ಗೃಹ ಸಚಿವರು ಸುಳ್ಳು ನುಡಿದಿರುವುದು ತನಗೆ ವಿಷಾದವನ್ನುಂಟು ಮಾಡಿದೆ. ತನ್ನನ್ನು ಗೃಹಬಂಧನದಲ್ಲಿಡಲಾಗಿತ್ತು ’ಎಂದು ಮಂಗಳವಾರ ಸುದ್ದಿವಾಹಿನಿಗೆ ನೀಡಿದ ಸಂದರ್ಶನಲ್ಲಿ ಅಬ್ದುಲ್ಲಾ ಹೇಳಿದರು.

‘ಕಳೆದ 70 ವರ್ಷಗಳಿಂದಲೂ ನಾವು ದೇಶದ ಹೋರಾಟದಲ್ಲಿ ಕೈಜೋಡಿಸಿದ್ದೇವೆ ಮತ್ತು ಇಂದು ನಮ್ಮನ್ನು ಅಪರಾಧಿಗಳಂತೆ ಭಾವಿಸಲಾಗುತ್ತಿದೆ. ರಾಜ್ಯಕ್ಕೆ ವಿಶೇಷ ಸ್ಥಾನಮಾನ ಒದಗಿಸಿದ್ದ ವಿಧಿ 370 ಮತ್ತು 35ಎ ಭಾರತ ಸರಕಾರವು ನೀಡಿದ್ದ ಖಾತರಿಯಾಗಿತ್ತು ’ಎಂದರು.

‘ಈ ದೇಶದೊಂದಿಗೆ ನಿಂತಿದ್ದ ಜನರ ಭಾವನೆಗಳು ನಿಮಗೆ ಅರ್ಥವಾಗುತ್ತವೆಯೇ? ನಮ್ಮನ್ನು ವಂಚಿಸಲಾಗಿದೆ,ರಾಜ್ಯವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಲಾಗಿದೆ. ಅದನ್ನು ಒಡೆಯಲಾಗಿದೆ ’ ಎಂದು ಭಾವೋದ್ವೇಗದಲ್ಲಿದ್ದ ಅಬ್ದುಲ್ಲಾ ಹೇಳಿದರು.

‘ಅವರು ಜನರ ಹೃದಯಗಳನ್ನೂ ವಿಭಜಿಸಲಿದ್ದಾರಾ? ಅವರು ಹಿಂದುಗಳನ್ನು ಒಂದೆಡೆ,ಮುಸ್ಲಿಮರನ್ನು ಒಂದೆಡೆ ಮತ್ತು ಬೌದ್ಧರನ್ನು ಒಂದೆಡೆ ಮಾಡಲಿದ್ದಾರೆ ಎಂದು ನಾನು ಭಾವಿಸಿದ್ದೇನೆ. ಇದೇ ಅಲ್ಲವೇ ಅವರಿಗೆ ಬೇಕಿರುವುದು? ಜಾತ್ಯತೀತ ದೇಶದಲ್ಲಿ ಮತ್ತು ದೇಶದ ಏಕತೆಯಲ್ಲಿ ನಂಬಿಕೆಯಿರುವ ಪ್ರತಿಯೊಬ್ಬರ ರಾಷ್ಟ್ರವಾದ,ನಾನು ತಿಳಿದುಕೊಂಡಿದ್ದ ಭಾರತ ಇದಲ್ಲ ’ ಎಂದ ಅವರು,‘ನಾವು ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ಪ್ರಜಾಪ್ರಭುತ್ವ ಮತ್ತು ಜಾತ್ಯತೀತತೆಯಲ್ಲಿ ನಂಬಿಕೆ ಇರುವವರ ಜೊತೆ ಸೇರಿಕೊಂಡು ನಮ್ಮ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೊಯ್ಯುತ್ತೇವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News