ಕಾಶ್ಮೀರ ಚರ್ಚೆಯಲ್ಲಿ ಕಾಂಗ್ರೆಸ್ಸಿಗೆ ಮುಜುಗರ ತಂದ ಅಧೀರ್ ರಂಜನ್ ಚೌಧುರಿ ಬಗ್ಗೆ ಸೋನಿಯಾ, ರಾಹುಲ್ ಅಸಮಾಧಾನ

Update: 2019-08-06 11:39 GMT

ಹೊಸದಿಲ್ಲಿ : ಜಮ್ಮು ಮತ್ತು ಕಾಶ್ಮೀರ ಭಾರತದ ಆಂತರಿಕ ವಿಚಾರವಲ್ಲವೆಂಬ ಅರ್ಥ ನೀಡುವ ಹೇಳಿಕೆಗಳನ್ನು ಸಂಸತ್ತಿನಲ್ಲಿ ಇಂದು ನೀಡಿ ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಮುಜುಗರ ಸೃಷ್ಟಿಸಿದ ಅಧೀರ್ ರಂಜನ್ ಚೌಧುರಿ ಬಗ್ಗೆ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಸಮಾಧಾನ ಹೊಂದಿದ್ದಾರೆಂದು ತಿಳಿದು ಬಂದಿದೆ.

''ನೀವು ಇದೊಂದು ಆಂತರಿಕ ವಿಚಾರವೆನ್ನುತ್ತೀರಿ. ಆದರೆ 1948ರಿಂದ ಈ ವಿಚಾರವನ್ನು ವಿಶ್ವ ಸಂಸ್ಥೆ ಗಮನಿಸುತ್ತಿದೆ. ಇದು ಆಂತರಿಕ ವಿಚಾರವೇ ? ನಾವು ಶಿಮ್ಲಾ ಒಪ್ಪಂದ ಹಾಗೂ ಲಾಹೋರ್ ಘೋಷಣೆಗೆ ಸಹಿ ಹಾಕಿದೆವು. ಇದು ಆಂತರಿಕ ಅಥವಾ ದ್ವಿಪಕ್ಷೀಯ ವಿಚಾರವೇ ? ಜಮ್ಮು ಕಾಶ್ಮೀರ ಈಗಲೂ ಆಂತರಿಕ ವಿಚಾರವಾಗಬಹುದೇ ? ನಮಗೆ ತಿಳಿಯಬೇಕು. ಇಡೀ ಕಾಂಗ್ರೆಸ್ ಪಕ್ಷ ಈ ಬಗ್ಗೆ ನಿಮ್ಮಿಂದ ವಿವರ ಕೇಳುತ್ತದೆ,'' ಎಂದು ಚೌಧುರಿ ಸಂಸತ್ತಿನಲ್ಲಿ ಹೇಳಿದಾಗ ಅವರ ಪಕ್ಕದಲ್ಲಿಯೇ ಕುಳಿತಿದ್ದ ಸೋನಿಯಾ ಗಾಂಧಿ ಹಿಂದೆ ತಿರುಗಿ ರಾಹುಲ್ ಅವರತ್ತ ನೋಡಿ ಆಘಾತ ವ್ಯಕ್ತಪಡಿಸಿದಂತಿತ್ತು. ರಾಹುಲ್ ಕೂಡ ತಮ್ಮ ತಲೆ ಅಲ್ಲಾಡಿಸಿದ್ದರು.

ಸಂಸತ್ತಿನಲ್ಲಿ ಇಂದು ಪಕ್ಷ ತನ್ನ ನಿಲುವನ್ನು ಹೇಗೆ ವ್ಯಕ್ತಪಡಿಸಬೇಕೆಂಬ ವಿಚಾರದಲ್ಲಿ ಅಧಿವೇಶನಕ್ಕಿಂತ ಮುಂಚೆ ನಡೆದ ಸಭೆಯಲ್ಲಿ ಕಾಂಗ್ರೆಸ್ ಸಂಸದರು ಚರ್ಚಿಸಿದ್ದರೂ ಚೌಧುರಿ ಅವರ ಮಾತುಗಳು ಬೇರೆ ಕಡೆ ಹೊರಳಿ ಕಾಂಗ್ರೆಸ್ ಪಕ್ಷವನ್ನು ಟೀಕಿಸಲು ಗೃಹ ಸಚಿವ ಶಾ ಕೈಗೆ ಅಸ್ತ್ರವೊದಗಿಸಿದಂತಾಯಿತು ಎಂದು ಕಾಂಗ್ರೆಸ್ ನಾಯಕರು ಅಭಿಪ್ರಾಯ ಪಟ್ಟಿದ್ದಾರೆನ್ನಲಾಗಿದೆ.

ಕಾಶ್ಮೀರ ವಿಚಾರದಲ್ಲಿ ಲೋಕಸಭೆಯಲ್ಲಿನ ಚರ್ಚೆಯಲ್ಲಿ ಮಾತನಾಡದೇ ಇರಲು ರಾಹುಲ್ ಈಗಾಗಲೇ ನಿರ್ಧರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News