370ನೇ ವಿಧಿ : ಸರಕಾರದ ನಿರ್ಧಾರಕ್ಕೆ ಮತ್ತಷ್ಟು ಕಾಂಗ್ರೆಸ್ ಮುಖಂಡರ ಬೆಂಬಲ

Update: 2019-08-06 13:34 GMT

ಹೊಸದಿಲ್ಲಿ, ಆ.6: ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸುವ ನಿರ್ಣಯವನ್ನು ಕೇಂದ್ರ ಸರಕಾರ ಮಂಡಿಸಿದ್ದು, ವಿಪಕ್ಷ ಕಾಂಗ್ರೆಸ್ ತೀವ್ರವಾಗಿ ವಿರೋಧಿಸಿತ್ತು. ಆದರೆ ಇದೀಗ ಈ ನಿರ್ಣಯವನ್ನು ಬೆಂಬಲಿಸಿ ಹಲವು ಕಾಂಗ್ರೆಸ್ ಸದಸ್ಯರು ಧ್ವನಿ ಎತ್ತಿರುವುದು ಪಕ್ಷಕ್ಕೆ ಮುಜುಗುರ ಉಂಟು ಮಾಡಿದೆ.

ಸೋಮವಾರ ನಿರ್ಣಯವನ್ನು ಕಾಂಗ್ರೆಸ್ ಮುಖಂಡರಾದ ಜನಾರ್ದನ ದ್ವಿವೇದಿ, ಭುವನೇಶ್ವರ್ ಕಲಿತಾ ಸ್ವಾಗತಿಸಿದ್ದರು. ಇದೀಗ ಮಂಗಳವಾರ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರ ಕ್ಷೇತ್ರವಾದ ರಾಯ್‌ಬರೇಲಿಯ ಸದರ್ ಕ್ಷೇತ್ರದ ಶಾಸಕಿ ಅದಿತಿ ಸಿಂಗ್ ಈ ನಿರ್ಧಾರಕ್ಕೆ ಬೆಂಬಲ ಸೂಚಿಸಿದ್ದಾರೆ. ಜಮ್ಮು ಕಾಶ್ಮೀರವನ್ನು ರಾಷ್ಟ್ರದ ಪ್ರಧಾನ ವಾಹಿನಿಯಲ್ಲಿ ಸೇರಿಸಲು ಇದು ಸಹಾಯವಾಗುತ್ತದೆ. ಇದನ್ನು ರಾಜಕೀಯಗೊಳಿಸಬಾರದು. ಇದೊಂದು ಐತಿಹಾಸಿಕ ನಿರ್ಧಾರ ಎಂದಿದ್ದಾರೆ.

ಕಾಂಗ್ರೆಸ್‌ನ ಮತ್ತೊಬ್ಬ ನಾಯಕ, ರಾಜಸ್ತಾನದ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವ ಅಶೋಕ್ ಚಾಂದ್ನ ನಿರ್ಣಯವನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ. “370 ವಿಧಿ ರದ್ದುಗೊಳಿಸುವುದನ್ನು ನಾನು ಸ್ವಾಗತಿಸುತ್ತೇನೆ. ಇದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ. ಆದರೆ ನಿರ್ಧಾರವನ್ನು ಶಾಂತರೀತಿಯಲ್ಲಿ ಜಾರಿಗೊಳಿಸಬೇಕು, ಬಲಪ್ರಯೋಗ ನಡೆಸಬಾರದು” ಎಂದವರು ಟ್ವೀಟ್ ಮಾಡಿದ್ದಾರೆ. ಮುಂಬೈಯ ಕಾಂಗ್ರೆಸ್ ಮುಖಂಡ ಮಿಲಿಂದ್ ದಿಯೋರ, ಈ ವಿಷಯದಲ್ಲಿ ರಾಜಕೀಯವನ್ನು ಬದಿಗೆ ಸರಿಸಬೇಕಿದೆ. ದುರದೃಷ್ಟವಶಾತ್ 370ನೇ ವಿಧಿಯ ಮೇಲಿನ ಚರ್ಚೆ ಉದಾರವಾದಿಗಳು ಹಾಗೂ ಸಂಪ್ರದಾಯವಾದಿಗಳ ನಡುವಿನ ಚರ್ಚೆ ಎಂಬಂತೆ ಬಿಂಬಿಸಲ್ಪಟ್ಟಿದೆ. ತಮ್ಮ ರಾಜಕೀಯ ಸಿದ್ಧಾಂತವನ್ನು ಬದಿಗಿಟ್ಟು, ಭಾರತದ ಸಮಗ್ರತೆಗೆ, ಏಕತೆಗೆ , ಕಾಶ್ಮೀರದಲ್ಲಿ ಶಾಂತಿ ನೆಲೆಸಲು, ಅಲ್ಲಿನ ಯುವಕರಿಗೆ ಉದ್ಯೋಗ, ಕಾಶ್ಮೀರಿ ಪಂಡಿತರಿಗೆ ನ್ಯಾಯ ಒದಗಿಸಲು ಯಾವುದು ಪೂರಕವೋ ಆ ವಿಷಯದ ಕುರಿತು ಚರ್ಚೆ ನಡೆಯಬೇಕು ಎಂದಿದ್ದಾರೆ.

ಮಾಜಿ ಕಾಂಗ್ರೆಸ್ ಸಂಸದ ದೀಪೇಂದರ್ ಹೂಡಾ ಅವರೂ ನಿರ್ಣಯಕ್ಕೆ ಬೆಂಬಲ ಸೂಚಿಸಿದ್ದಾರೆ. 21ನೇ ಶತಮಾನದಲ್ಲಿ 370ನೇ ವಿಧಿಯ ಅಗತ್ಯವಿಲ್ಲ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ. ಇದನ್ನು ರದ್ದುಪಡಿಸುವ ನಿರ್ಧಾರ ದೇಶದ ಹಿತಾಸಕ್ತಿಗೆ ಪೂರಕವಾಗಿದೆ. ಅಷ್ಟೇ ಅಲ್ಲ, ಭಾರತದ ಅವಿಭಾಜ್ಯ ಅಂಗವಾಗಿರುವ ಜಮ್ಮು ಕಾಶ್ಮೀರದ ಜನತೆಗೆ ಒಳಿತಾಗಲಿದೆ. ಇದನ್ನು ಶಾಂತರೀತಿಯಲ್ಲಿ ಅನುಷ್ಟಾನಗೊಳಿಸುವ ಜವಾಬ್ದಾರಿ ಸರಕಾರದ್ದಾಗಿದೆ ಎಂದವರು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News