ತೃತೀಯ ಲಿಂಗಿಗಳ ಮಸೂದೆ ಲೋಕಸಭೆಯಲ್ಲಿ ಅಂಗೀಕಾರ
ಹೊಸದಿಲ್ಲಿ, ಆ.6: ತೃತೀಯ ಲಿಂಗಿ ವ್ಯಕ್ತಿಗಳ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಬಲೀಕರಣದ ಉದ್ದೇಶವಿರುವ ‘ತೃತೀಯ ಲಿಂಗಿ ವ್ಯಕ್ತಿಗಳ (ಹಕ್ಕು ರಕ್ಷಣೆ) ಮಸೂದೆ 2019’ ಲೋಕಸಭೆಯಲ್ಲಿ ಕಾಂಗ್ರೆಸ್ ಸದಸ್ಯರ ಪ್ರತಿಭಟನೆ ಮಧ್ಯೆಯೇ ಧ್ವನಿಮತದಿಂದ ಅಂಗೀಕೃತವಾಗಿದೆ.
ನಿಲುವಳಿ ಸೂಚನೆಯ ಮೇಲೆ ಕಾಂಗ್ರೆಸ್ ಮುಖಂಡ ಅಧೀರ್ ರಂಜನ್ ಚೌಧರಿಗೆ ಮಾತನಾಡಲು ಬಿಡದಿರುವುದನ್ನು ವಿರೋಧಿಸಿ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸಿದ್ದರು. ಮಸೂದೆ ಮೇಲಿನ ಚರ್ಚೆಗೆ ಉತ್ತರಿಸಿದ ಸಾಮಾಜಿಕ ನ್ಯಾಯ ಇಲಾಖೆಯ ಸಹಾಯಕ ಸಚಿವ ರತ್ತನ್‌ಲಾಲ್ ಕಟಾರಿಯಾ, ತೃತೀಯಲಿಂಗಿಗಳ ಹಕ್ಕುಗಳ ರಕ್ಷಣೆಗಾಗಿ ರಾಷ್ಟ್ರೀಯ ಪ್ರಾಧಿಕಾರವನ್ನು ಸ್ಥಾಪಿಸಲು ಈ ಮಸೂದೆ ಅವಕಾಶ ನೀಡುತ್ತದೆ ಎಂದರು. 2011ರ ಜನಗಣತಿ ಪ್ರಕಾರ ದೇಶದಲ್ಲಿ 4.80 ಲಕ್ಷ ತೃತೀಯ ಲಿಂಗಿಗಳಿದ್ದಾರೆ. ತೃತೀಯ ಲಿಂಗಿ ವ್ಯಕ್ತಿಗಳ ವಿರುದ್ಧ ನಡೆಯುವ ದುಷ್ಕೃತ್ಯ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ದಂಡ ಮತ್ತು ಶಿಕ್ಷೆ ಒದಗಿಸಲು ಮಸೂದೆ ಅವಕಾಶ ನೀಡುತ್ತದೆ ಎಂದು ಸಚಿವರು ಹೇಳಿದ್ದಾರೆ.
ಮೋದಿ ನೇತೃತ್ವದ ಈ ಹಿಂದಿನ ಸರಕಾರದ ಅವಧಿಯಲ್ಲಿ ಈ ಮಸೂದೆಯನ್ನು ಮಂಡಿಸಿದ್ದಾಗ ಅದರಲ್ಲಿ ತೃತೀಯ ಲಿಂಗಿಗಳು ಭಿಕ್ಷೆ ಬೇಡುವುದು ಅಪರಾಧ ಎಂದು ತಿಳಿಸಲಾಗಿತ್ತು. ಆದರೆ ಲೋಕಸಭೆ ಸಮಾಪ್ತಿಯಾದೊಡನೆ ಮಸೂದೆ ರದ್ದಾಗಿತ್ತು. ಇದೀಗ , ಭಿಕ್ಷೆ ಬೇಡುವುದು ಅಪರಾಧ ಎಂಬ ಅಂಶವನ್ನು ಹೊಸದಾಗಿ ಮಂಡಿಸಿರುವ ಮಸೂದೆಯಲ್ಲಿ ತೆಗೆದು ಹಾಕಲಾಗಿದೆ. ತನ್ನನ್ನು ಪುರುಷ, ಮಹಿಳೆ ಅಥವಾ ತೃತೀಯ ಲಿಂಗಿ ಎಂದು ಗುರುತಿಸಿಕೊಳ್ಳುವ ಹಕ್ಕನ್ನು ವ್ಯಕ್ತಿ ಹೊಂದಿರುತ್ತಾನೆ ಎಂದು ಮಸೂದೆಯಲ್ಲಿ ತಿಳಿಸಲಾಗಿದೆ.