ಜನರಲ್ಲಿ ವಿಶ್ವಾಸ ಮೂಡಿಸಬೇಕೇ ಹೊರತು, ಭೀತಿ ಸೃಷ್ಟಿಸಬೇಡಿ: ಕೇಂದ್ರಕ್ಕೆ ಮಮತಾ ಬ್ಯಾನರ್ಜಿ ತರಾಟೆ
ಹೊಸದಿಲ್ಲಿ, ಆ.6: ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿಗಳಾದ ಒಮರ್ ಅಬ್ದುಲ್ಲಾ ಮತ್ತು ಮೆಹಬೂಬ ಮುಫ್ತಿ ಅವರನ್ನು ಸೋಮವಾರ ರಾತ್ರಿ ಬಂಧಿಸಿರುವ ಕೇಂದ್ರದ ಕ್ರಮವನ್ನು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಹಾಗೂ ತೃಣಮೂಲ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ತರಾಟೆಗೆತ್ತಿಕೊಂಡಿದ್ದಾರೆ.
“ಅವರು ರಾಜಕೀಯ ನಾಯಕರಾಗಿದ್ದಾರೆ. ಅವರು ಭಯೋತ್ಪಾದಕರಲ್ಲ. ಅವರನ್ನು ತಕ್ಷಣವೇ ಬಿಡುಗಡೆಗೊಳಿಸಬೇಕು. ಕೇಂದ್ರವು ಜನರಲ್ಲಿ ವಿಶ್ವಾಸವನ್ನು ಮೂಡಿಸಬೇಕೇ ಹೊರತು ಭೀತಿಯನ್ನು ಸೃಷ್ಟಿಸಬಾರದು” ಎಂದರು.
ಮಂಗಳವಾರ ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್ ಅವರನ್ನು ಭೇಟಿಯಾಗಲು ಚೆನ್ನೈಗೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಬ್ಯಾನರ್ಜಿ, ಇತರ ರಾಜಕೀಯ ನಾಯಕರ ಅಭಿಪ್ರಾಯವನ್ನು ಪಡೆದುಕೊಳ್ಳದೆ ಅಥವಾ ಮತದಾನ ನಡೆಸದೆ ಪ್ರಜಾಪ್ರಭುತ್ವ ವಿರೋಧಿ ರೀತಿಯಲ್ಲಿ ಜಮ್ಮು-ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಿದ್ದಕ್ಕಾಗಿ ಕೇಂದ್ರವನ್ನು ಕಟುವಾಗಿ ಟೀಕಿಸಿದರು. ಇಂತಹ ಹೆಜ್ಜೆಯನ್ನಿರಿಸುವ ಮುನ್ನ ಅವರು ಸರ್ವಪಕ್ಷ ಸಭೆಯಲ್ಲಿ ಈ ವಿಷಯವನ್ನು ಚರ್ಚಿಸಬೇಕಿತ್ತು ಎಂದರು.