ತೇಜ್ ಪ್ರತಾಪ್ ಡ್ರಗ್ಸ್ ವ್ಯಸನಿ, ದೇವರ ವೇಷ ಧರಿಸುತ್ತಿದ್ದರು: ಪತ್ನಿಯ ಆರೋಪ
ಪಾಟ್ನಾ, ಆ.6: ಆರ್ ಜೆಡಿ ನಾಯಕ ಲಾಲೂ ಪ್ರಸಾದ್ ಯಾದವ್ ಪುತ್ರ ತೇಜ್ ಪ್ರತಾಪ್ ಯಾದವ್ ಡ್ರಗ್ಸ್ ವ್ಯಸನಿಯಾಗಿದ್ದಾರೆ ಹಾಗೂ ತನಗೆ ಕಿರುಕುಳ ನೀಡುತ್ತಿದ್ದರೆಂದು ವಿವಾಹ ವಿಚ್ಛೇದನ ಅರ್ಜಿಗೆ ಅವರ ಪತ್ನಿ ಐಶ್ವರ್ಯಾ ರೈ ಕೋರ್ಟಿಗೆ ಸಲ್ಲಿಸಿರುವ ಪ್ರತಿಕ್ರಿಯೆಯಲ್ಲಿ ಹೇಳಿದ್ದಾರೆ.
ಕೌಟುಂಬಿಕ ಹಿಂಸೆ ತಡೆ ಕಾಯಿದೆ 2005 ಇದರ ಸೆಕ್ಷನ್ 26 ಅನ್ವಯ ರಕ್ಷಣೆ ಕೋರಿ ಐಶ್ವರ್ಯಾ ಈಗಾಗಲೇ ಕುಟುಂಬ ನ್ಯಾಯಾಲಯಕ್ಕೆ ಅಪೀಲು ಸಲ್ಲಿಸಿದ್ದಾರೆ.
ತೇಜ್ ಪ್ರತಾಪ್ ಗಾಂಜಾ ಸೇವಿಸುತ್ತಿದ್ದರು ಹಾಗೂ ಆದರ ಪ್ರಭಾವದಿಂದಾಗಿ ತಮ್ಮನ್ನು ಶಿವನ ಅವತಾರವೆಂದು ಹೇಳಿಕೊಳ್ಳುತ್ತಿದ್ದರೆಂದು ಮದುವೆಯಾದ ಕೂಡಲೇ ತಮಗೆ ತಿಳಿದು ಬಂದಿತ್ತು ಎಂದು ಅವರು ದೂರಿನಲ್ಲಿ ಹೇಳಿದ್ದಾರೆ.
“ಆತ ರಾಧ ಮತ್ತು ಕೃಷ್ಣರಂತೆ ವೇಷ ಧರಿಸುತ್ತಿದ್ದರು. ಇಷ್ಟೇ ಅಲ್ಲ ಒಮ್ಮೆ ಡ್ರಗ್ಸ್ ಸೇವಿಸಿ ಘಾಗ್ರ ಚೋಲಿ ಕೂಡ ಧರಿಸಿ ರಾಧೆಯಂತೆ ಕಾಣಿಸಲು ಮೇಕ್-ಅಪ್ ಮತ್ತು ವಿಗ್ ಧರಿಸಿದ್ದರು'' ಎಂದು ಐಶ್ವರ್ಯಾ ದೂರಿದ್ದಾರೆ.
“ಈ ವಿಚಾರದ ಬಗ್ಗೆ ಅತ್ತೆ ಹಾಗೂ ನಾದಿನಿಯ ಬಳಿ ಹೇಳಿಕೊಂಡಾಗ ಆತ ಇನ್ನು ಮುಂದೆ ಆ ರೀತಿ ವರ್ತಿಸದಂತೆ ನೋಡಿಕೊಳ್ಳುವುದಾಗಿ ಹೇಳಿದರು ಹಾಗೂ ನನ್ನನ್ನು ಸಂತೈಸಿದರು. ಆದರೆ ಆತನ ವರ್ತನೆ ಬದಲಾಗಲಿಲ್ಲ'' ಎಂದು ಕೂಡ ಆಕೆ ಹೇಳಿದ್ದಾರೆ.
ತಾನೇ ತೇಜ್ ಪ್ರತಾಪ್ ನನ್ನು ಈ ಬಗ್ಗೆ ಪ್ರಶ್ನಿಸಿ ಗದರಿ ಡ್ರಗ್ಸ್ ಸೇವಿಸುವುದನ್ನು ಹಾಗೂ ದೇವರಂತೆ ಉಡುಗೆ ತೊಡುಗೆ ಧರಿಸುವುದನ್ನು ನಿಲ್ಲಿಸುವಂತೆ ಹೇಳಿದಾಗ ಆತ, “ಗಾಂಜಾ ಶಿವ ದೇವರ ಪ್ರಸಾದ. ಅದಕ್ಕೆ ಇಲ್ಲ ಎಂದು ಹೇಗೆ ಹೇಳಲಿ?'' ಎಂದಿದ್ದರು ಎಂದೂ ಐಶ್ವರ್ಯಾ ಹೇಳಿಕೊಂಡಿದ್ದಾರೆ. ಆತ “ಕೃಷ್ಣಾ ಹೀ ರಾಧಾ ಹೈ, ರಾಧಾ ಹೀ ಕೃಷ್ಣ ಹೈ'' ಎಂದೂ ಹೇಳುತ್ತಿದ್ದರು, ನನ್ನ ಶೈಕ್ಷಣಿಕ ಹಿನ್ನೆಲೆಯ ಬಗ್ಗೆ ಕೆಟ್ಟದ್ದಾಗಿ ಮಾತನಾಡುತ್ತಿದ್ದರು ಹಾಗೂ ನಾನು ಕೇವಲ ಅಡುಗೆ ಮಾಡಲು ಹಾಗೂ ಕುಟುಂಬ ನಡೆಸಲು ಸೂಕ್ತ ಎನ್ನುತ್ತಿದ್ದರು'' ಎಂದೂ ದೂರಲಾಗಿದೆ.
ಇಷ್ಡೆಲ್ಲಾ ಹಿಂಸೆಯಾದರೂ ಇನ್ನೂ ಐಶ್ವರ್ಯಾ ತನ್ನ ಅತ್ತೆ ಮನೆಯಲ್ಲಿಯೇ ವಾಸವಾಗಿದ್ದಾರೆ ಎಂದೂ ದೂರಿನಲ್ಲಿ ಹೇಳಲಾಗಿದೆ. ಮೇ 2018ರಲ್ಲಿ ಅವರಿಬ್ಬರಿಗೆ ವಿವಾಹವಾಗಿದ್ದರೆ, ಐದು ತಿಂಗಳ ನಂತರ ತೇಜ್ ಪ್ರತಾಪ್ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು.