Big Breaking News: ಮಾಜಿ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಇನ್ನಿಲ್ಲ

Update: 2019-08-06 18:43 GMT

ಹೊಸದಿಲ್ಲಿ, ಆ.6: ಕೇಂದ್ರದ ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಮಂಗಳವಾರ ರಾತ್ರಿ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ANI ವರದಿ ಮಾಡಿದೆ. 

ಅಸ್ವಸ್ಥರಾಗಿದ್ದ ಅವರನ್ನು ಹೊಸದಿಲ್ಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ತಡರಾತ್ರಿ ನಿಧನರಾಗಿದ್ದಾರೆ.

ಬಿಜೆಪಿಯ ಹಿರಿಯ ನಾಯಕಿಯಾಗಿದ್ದ ಸ್ವರಾಜ್ 2014,ಮೇ 26ರಿಂದ 2019,ಮೇ 30ರವರೆಗೆ ವಿದೇಶಾಂಗ ವ್ಯವಹಾರಗಳ ಸಚಿವೆಯಾಗಿ ಅಪಾರ ಮೆಚ್ಚುಗೆಗೆ ಪಾತ್ರರಾಗಿದ್ದರು. ಇಂದಿರಾ ಗಾಂಧಿಯವರ ಬಳಿಕ ಈ ಹೊಣೆಗಾರಿಕೆಯನ್ನು ನಿರ್ವಹಿಸಿದ್ದ ಎರಡನೇ ಮಹಿಳೆ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು. ಅಮೆರಿಕದ ವಾಲ್ ಸ್ಟ್ರೀಟ್ ಜರ್ನಲ್ ಅವರನ್ನು ಭಾರತದ ‘ಬೆಸ್ಟ್ ಲವ್ಡ್ ಪಾಲಿಟಿಷಿಯನ್’ ಎಂದು ಬಣ್ಣಿಸಿತ್ತು.

ಏಳು ಬಾರಿ ಸಂಸದೆಯಾಗಿ ಮತ್ತು ಮೂರು ಬಾರಿ ಶಾಸಕಿಯಾಗಿ ಆಯ್ಕೆಯಾಗಿದ್ದ ಅವರು 1977ರಲ್ಲಿ ತನ್ನ 25ನೇ ವಯಸ್ಸಿನಲ್ಲಿಯೇ ಹರ್ಯಾಣಾ ಸರಕಾರದಲ್ಲಿ ಅತ್ಯಂತ ಕಿರಿಯ ಸಚಿವೆಯಾಗಿದ್ದರು. 1998,ಅ.13ರಿಂದ 1998,ಡಿ.3ರವರೆಗೆ ದಿಲ್ಲಿಯ ಐದನೇ ಮುಖ್ಯಮಂತ್ರಿಯಾಗಿಯೂ ಅವರು ಕರ್ತವ್ಯ ನಿರ್ವಹಿಸಿದ್ದರು.

2014ರ ಲೋಕಸಭಾ ಚುನಾವಣೆಯಲ್ಲಿ ೆ ಮಧ್ಯಪ್ರದೇಶದ ವಿದಿಶಾ ಲೋಕಸಭಾ ಕ್ಷೇತ್ರದಿಂದ ಸತತ ಎರಡನೇ ಅವಧಿಗೆ ನಾಲ್ಕು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆದ್ದಿದ್ದ ಸ್ವರಾಜ್ ಆರೋಗ್ಯ ಕಾರಣಗಳಿಂದಾಗಿ 2019ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ. ಆಗಷ್ಟೇ ಅವರು ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿದ್ದರು. ಇದೇ ಕಾರಣದಿಂದ ಮೋದಿ 2.0 ಸರಕಾರಕ್ಕೂ ಅವರು ಸೇರಿರಲಿಲ್ಲ.

ಸ್ವರಾಜ್ 1953,ಫೆ.14ರಂದು ಹರ್ಯಾಣದ ಅಂಬಾಲಾ ಕಂಟೋನ್ಮೆಂಟ್‌ನಲ್ಲಿ ಹರದೇವ ಶರ್ಮಾ-ಲಕ್ಷ್ಮಿದೇವಿ ದಂಪತಿಯ ಪುತ್ರಿಯಾಗಿ ಜನಿಸಿದ್ದರು. ಹೆತ್ತವರು ಮೂಲತಃ ಪಾಕಿಸ್ತಾನದ ಲಾಹೋರಿನ ಧರಮ್‌ಪುರ ಪ್ರದೇಶಕ್ಕೆ ಸೇರಿದವರಾಗಿದ್ದರು. ಹರದೇವ ಪ್ರಮುಖ ಆರೆಸ್ಸೆಸ್ ಕಾರ್ಯಕರ್ತರಾಗಿದ್ದರು. ಅಂಬಾಲಾದ ಸನಾತನ ಧರ್ಮ ಕಾಲೇಜಿನಲ್ಲಿ ಪದವಿ ಶಿಕ್ಷಣ ಪೂರೈಸಿದ್ದ ಸ್ವರಾಜ್ ಚಂಡಿಗಡದ ಪಂಜಾಬ್ ವಿವಿಯಲ್ಲಿ ಕಾನೂನು ವ್ಯಾಸಂಗ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News