ತನ್ನನ್ನು ಪಾಕ್‌ನಿಂದ ವಾಪಸ್ ತಂದಿದ್ದ ಸುಶ್ಮಾ ಸ್ವರಾಜ್‌ಗೆ ಗೀತಾಳ ಅಂತಿಮ ನಮನ

Update: 2019-08-07 14:13 GMT

ಇಂದೋರ(ಮ.ಪ್ರ),ಆ.7: ಆಕಸ್ಮಿಕವಾಗಿ ಪಾಕಿಸ್ತಾನವನ್ನು ತಲುಪಿ,ಬಳಿಕ ಸುಶ್ಮಾ ಸ್ವರಾಜ್ ಅವರ ತೀವ್ರ ಪ್ರಯತ್ನಗಳಿಂದಾಗಿ ಸ್ವದೇಶಕ್ಕೆ ಮರಳಿದ್ದ ಕಿವುಡ ಮತ್ತು ಮೂಕಿ ಯುವತಿ ಗೀತಾ,ಸ್ವರಾಜ್ ನಿಧನದಿಂದಾಗಿ ತಾನು ‘ಪೋಷಕಿ’ ಮತ್ತು ‘ತಾಯಿ’ಯನ್ನು ಕಳೆದುಕೊಂಡಿದ್ದೇನೆ ಎಂದು ಶೋಕಿಸಿದ್ದಾರೆ.

ಸ್ವರಾಜ್ ಓರ್ವ ತಾಯಿಯಂತೆ ತನ್ನ ಯೋಗಕ್ಷೇಮದ ಬಗ್ಗೆ ಕಾಳಜಿಯನ್ನು ಹೊಂದಿದ್ದರು ಎಂದು ಗೀತಾ ರೋದಿಸುತ್ತಲೇ ತನ್ನ ಸನ್ನೆ ಭಾಷೆಯಲ್ಲಿ ತಿಳಿಸಿದರು.

ಮಂಗಳವಾರ ರಾತ್ರಿ ತೀವ್ರ ಹೃದಯಾಘಾತದಿಂದ ನಿಧನರಾದ ಸ್ವರಾಜ್ ಗೀತಾ, ಜೊತೆ ಗಾಢವಾದ ಭಾವನಾತ್ಮಕ ಸಂಬಂಧವನ್ನು ಹೊಂದಿದ್ದರು.

 ಗೀತಾರನ್ನು ‘ಹಿಂದುಸ್ಥಾನದ ಪುತ್ರಿ’ ಎಂದು ಕಳೆದ ವರ್ಷದ ನವೆಂಬರ್‌ನಲ್ಲಿ ಬಣ್ಣಿಸಿದ್ದ ಸ್ವರಾಜ್,ಆಕೆಗೆ ತನ್ನ ಕುಟುಂಬದ ಭೇಟಿ ಸಾಧ್ಯವಾಗದಿದ್ದರೂ ಆಕೆಯನ್ನೆಂದೂ ಪಾಕಿಸ್ತಾನಕ್ಕೆ ಮರಳಿ ಕಳುಹಿಸುವುದಿಲ್ಲ. ಭಾರತ ಸರಕಾರವೇ ಅವಳನ್ನು ಪೋಷಿಸಲಿದೆ ಎಂದು ಹೇಳಿದ್ದರು.

2015, ಅಕ್ಟೋಬರ್‌ನಲ್ಲಿ ಭಾರತಕ್ಕೆ ಮರಳಿದ ಬಳಿಕ ಗೀತಾ ಸಾಮಾಜಿಕ ನ್ಯಾಯ ಇಲಾಖೆಯ ಉಸ್ತುವಾರಿಯಲ್ಲಿ ಎನ್‌ಜಿಒವೊಂದು ಇಲ್ಲಿ ನಡೆಸುತ್ತಿರುವ ಸಂಸ್ಥೆಯಲ್ಲಿ ವಾಸವಾಗಿದ್ದುಕೊಂಡು ವ್ಯಾಸಂಗದಲ್ಲಿ ತೊಡಗಿದ್ದಾರೆ.

 ಸ್ವರಾಜ್ ನಿಧನದ ಬಗ್ಗೆ ಗೀತಾಗೆ ಬುಧವಾರ ಬೆಳಿಗ್ಗೆ ತಿಳಿಸಲಾಗಿದ್ದು,ಆಗಿನಿಂದಲೂ ಆಕೆ ದುಃಖಿಸುತ್ತಿದ್ದಾರೆ ಎಂದು ಹಾಸ್ಟೆಲ್‌ನ ವಾರ್ಡನ್ ಸಂದೀಪ್ ಪಂಡಿತ್ ತಿಳಿಸಿದರು.

ಗೀತಾ ಎಂಟು ವರ್ಷದ ಬಾಲಕಿಯಾಗಿದ್ದಾಗ ಒಂಟಿಯಾಗಿ ಲಾಹೋರ್ ನಿಲ್ದಾಣದಲ್ಲಿ ಸಂಬೋತಾ ಎಕ್ಸ್‌ಪ್ರೆಸ್‌ನಲ್ಲಿ ಪತ್ತೆಯಾಗಿದ್ದಳು. ಆಕೆಯನ್ನು ಪಾಕಿಸ್ತಾನದ ಎಧಿ ಫೌಂಡೇಷನ್ ನೋಡಿಕೊಳ್ಳುತ್ತಿತ್ತು. 2015ರಲ್ಲಿ ಭಾರತಕ್ಕೆ ಮರಳಿದ ಬಳಿಕ ಗೀತಾ ದಿಲ್ಲಿ ಮತ್ತು ಇಂದೋರ್ ನಲ್ಲಿ ಸ್ವರಾಜ್ ಅವರನ್ನು ಹಲವಾರು ಬಾರಿ ಭೇಟಿಯಾಗಿದ್ದರು.

ದೇಶಾದ್ಯಂತದ 10ಕ್ಕೂ ಅಧಿಕ ಕುಟುಂಬಗಳು ಗೀತಾ ತಮ್ಮ ನಾಪತ್ತೆಯಾಗಿದ್ದ ಪುತ್ರಿ ಎಂದು ಹಕ್ಕು ಮಂಡಿಸಿದ್ದವು. ಆದರೆ ಸರಕಾರದ ತನಿಖೆಯಲ್ಲಿ ಈ ಹಕ್ಕುಗಳು ದೃಢಪಟ್ಟಿರಲಿಲ್ಲ ಮತ್ತು ಆಕೆಯ ಕುಟುಂಬಕ್ಕಾಗಿ ಶೋಧ ಈಗಲೂ ಮುಂದುವರಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News