ಅಯೋಧ್ಯೆ ಪ್ರಕರಣ ನಿತ್ಯ ವಿಚಾರಣೆ ಅಮಾನವೀಯ: ಮುಸ್ಲಿಂ ಕಕ್ಷಿದಾರ ಪರ ನ್ಯಾಯವಾದಿ ರಾಜೀವ್ ಧವನ್

Update: 2019-08-09 15:26 GMT

ಹೊಸದಿಲ್ಲಿ, ಆ. 9: ಅಯೋಧ್ಯೆಯ ವಿವಾದಾತ್ಮಕ ರಾಮಜನ್ಮಭೂಮಿ- ಬಾಬರಿ ಮಸೀದಿ ಪ್ರಕರಣದ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ನಿತ್ಯ ವಿಚಾರಣೆ ವಿರೋಧಿಸಿರುವ ಮುಸ್ಲಿಂ ಕಕ್ಷಿದಾರ ಪರ ಹಿರಿಯ ವಕೀಲ ರಾಜೀವ್ ಧವನ್, ‘ಇದು ಅಮಾನವೀಯ. ಈ ರೀತಿ ತ್ವರಿತ ಗತಿಯಲ್ಲಿ ವಿಚಾರಣೆ ನಡೆಯಬಾರದು’ ಎಂದಿದ್ದಾರೆ.

ಪ್ರಕರಣದ ವಿಚಾರಣೆಯನ್ನು ವಾರದಲ್ಲಿ ಐದು ದಿನಗಳ ಕಾಲ ನಡೆಸುವ ನಿರ್ಧಾರ ‘ಅಮಾನವೀಯ’ ಎಂದು ರಾಜೀವ್ ಧವನ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ನೇತೃತ್ವದ ಪೀಠಕ್ಕೆ ತಿಳಿಸಿದರು. ‘‘ಇದರಿಂದ ನಮಗೆ ನ್ಯಾಯಾಲಯಕ್ಕೆ ನೆರವು ನೀಡಲು ಸಾಧ್ಯವಾಗುವುದಿಲ್ಲ. ವಿಚಾರಣೆ ತ್ವರಿತಗತಿಯಲ್ಲಿ ಇರಬಾರದಿತ್ತು. ಇದು ನಾವು ಪ್ರಕರಣದಿಂದ ಹಿಂದೆ ಸರಿಯುವಂತೆ ಒತ್ತಡ ಹೇರುತ್ತದೆ’’ ಎಂದು ಅವರು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ರಂಜನ್ ಗೊಗೋಯಿ, ‘‘ನಾವು ನಿಮ್ಮ ಸಂಕಷ್ಟ ಆಲಿಸಿದ್ದೇವೆ. ಈ ಬಗ್ಗೆ ನಾವು ನಿಮಗೆ ಶೀಘ್ರ ಮಾಹಿತಿ ನೀಡಲಿದ್ದೇವೆ’’ ಎಂದರು.

ಅಯೋಧ್ಯೆ ಒಡೆತನ ವಿವಾದವನ್ನು ಸೋಮವಾರದಿಂದ ಶುಕ್ರವಾರದ ವರೆಗೆ ವಾರದಲ್ಲಿ ಐದು ದಿನಗಳ ಕಾಲ ವಿಚಾರಣೆ ನಡೆಸಲಾಗುವುದು ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಹಾಗೂ ನ್ಯಾಯಮೂರ್ತಿ ಗಳಾದ ಡಿ.ವೈ. ಚಂದ್ರಚೂಡ, ಎಸ್.ಎ. ಬೊಬ್ಡೆ, ಅಶೋಕ್ ಭೂಷಣ್ ಹಾಗೂ ಎಸ್.ಎ. ನಝೀರ್ ಅವರನ್ನು ಒಳಗೊಂಡ ಪೀಠ ಆಗಸ್ಟ್ 8ರಂದು ಹೇಳಿತ್ತು. ಪ್ರಕರಣದ ವಿಚಾರಣೆಯನ್ನು ಮಂಗಳವಾರದಿಂದ ಗುರುವಾರ ಮಾತ್ರ ನಡೆಸುವುದು ಸಾಮಾನ್ಯ ನಿಯಮ. ಆದರೆ, ಈ ನಿಯಮವನ್ನು ಪೀಠ ಬದಲಾವಣೆ ಮಾಡಿಕೊಂಡಿದೆ. ಹೊಸ ಹಾಗೂ ಬಹುಮಖಿ ಪ್ರಕರಣಗಳ ವಿಚಾರಣೆಯನ್ನು ಮಾತ್ರ ಸುಪ್ರೀಂ ಕೋರ್ಟ್ ಸೋಮವಾರದಿಂದ ಶುಕ್ರವಾರದ ವರೆಗೆ ನಡೆಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News