ಪಿ.ಚಿದಂಬರಂ, ಕಾರ್ತಿ ಬಂಧಿಸದಂತೆ ಆಗಸ್ಟ್ 23ರವರೆಗೆ ತಡೆಯಾಜ್ಞೆ

Update: 2019-08-09 18:07 GMT

ಹೊಸದಿಲ್ಲಿ,ಆ.23: ಏರ್‌ಸೆಲ್-ಮ್ಯಾಕ್ಸಿಸ್ ಹಗರಣದಲ್ಲಿ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಹಾಗೂ ಅವರ ಪುತ್ರ ಕಾರ್ತಿ ಚಿದಂಬರಂ ಅವರನ್ನು ಬಂಧಿಸುವುದರ ವಿರುದ್ಧ ನೀಡಿರುವ ಮಧ್ಯಂತರ ತಡೆಯಾಜ್ಞೆಯ ಅವಧಿಯನ್ನು ದಿಲ್ಲಿಯ ನ್ಯಾಯಾಲಯವು ಆಗಸ್ಟ್ 23ರವರೆಗೆ ವಿಸ್ತರಿಸಿದೆ. ಈ ಮೊದಲು ಇವರಿಬ್ಬರನ್ನೂ ಬಂಧಿಸುವುದರ ವಿರುದ್ಧ ಆಗಸ್ಟ್ 9ರವರೆಗೆ ತಡೆಯಾಜ್ಞೆ ನೀಡಲಾಗಿತ್ತು.

ಇಂದು ವಿಶೇಷ ನ್ಯಾಯಾಧೀಶ ಓ.ಪಿ. ಸೈನಿ ಅವರು ತಡೆಯಾಜ್ಞೆಯನ್ನು ಆಗಸ್ಟ್ 23ರವರೆಗೆ ವಿಸ್ತರಿಸಿದರು. ಹಾಗೂ ಈ ಅವಧಿಯಲ್ಲಿ ನ್ಯಾಯಾಲವು ವಾದಪ್ರತಿವಾದಗಳನ್ನು ಅಲಿಸಲಾರದು ಎಂದು ಅವರು ತಿಳಿಸಿದರು.

   ತಮಗೆ ನಿರೀಕ್ಷಣಾ ಜಾಮೀನನ್ನು ನಿರಾಕರಿಸುವುದಕ್ಕೆ ಯಾವುದೇ ಆಧಾರವಿಲ್ಲವೆಂದು ಚಿದಂಬರಂ ಅವರು ಆಗಸ್ಟ್ 1ರಂದು ನ್ಯಾಯಾಲಯದಲ್ಲಿ ವಾದಿಸಿದ್ದರು, 2006ರಲ್ಲಿ ಏರ್‌ಸೆಲ್ ಹಾಗೂ ಮಾಕ್ಸಿಸ್ ಸಂಸ್ಥೆಯ ನಡುವೆ ನಡೆದ ಹೂಡಿಕೆ ವ್ಯವಹಾರಕ್ಕೆ ವಿದೇಶಿ ಹೂಡಿಕೆ ಉತ್ತೇಜನಾ ಮಂಡಳಿಯಿಂದ ಅನುಮೋದನೆ ದೊರಕಿಸಲು ಲಂಚ ಸ್ವೀಕರಿಸಿದ ಆರೋಪವನ್ನು ಕಾರ್ತಿ ಚಿದಂಬರಂ ಎದುರಿಸುತ್ತಿದ್ದಾರೆ. ಆ ಸಮಯದಲ್ಲಿ ಅವರ ತಂದೆ ಪಿ.ಚಿದಂಬರಂ ಕೇಂದ್ರ ವಿತ್ತ ಸಚಿವರಾಗಿದ್ದರು. ಇಂತಹ ಒಡಂಬಡಿಕೆಗಳಿಗೆ ಅರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯ ಅನುಮೋದನೆ ದೊರೆಯಬೇಕಿದೆಯಾದರೂ, ಪಿ.ಚಿದಂಬರಂ ತಾನಾಗಿಯೇ ಈ ಏರ್‌ಸೆಲ್-ಮ್ಯಾಕ್ಸಿಸ್ ನಡುವಣ ಹೂಡಿಕೆ ಒಪ್ಪಂದಕ್ಕೆ ಹಸಿರುನಿಶಾನೆ ತೋರಿಸಿದರು ಎಂಬ ಆರೋಪಗಳ ಬಗ್ಗೆ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News