​ಮುಂದುವರಿಯಲಿದೆ ಮಹಾಮಳೆ: ಜನ ತತ್ತರ, ಬದುಕು ದುಸ್ತರ

Update: 2019-08-10 03:41 GMT

ಹೊಸದಿಲ್ಲಿ, ಆ.10: ಕೇರಳ, ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ಭೀಕರ ಮಳೆ ಮುಂದುವರಿದಿದ್ದು, ಶುಕ್ರವಾರ 39 ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ಮೂರು ರಾಜ್ಯಗಳಲ್ಲಿ ಕಳೆದ ಮೂರು ದಿನಗಳಲ್ಲಿ ಮಳೆ ಸಂಬಂಧಿ ದುರಂತಗಳಿಂದ ಮೃತಪಟ್ಟವರ ಸಂಖ್ಯೆ 86ಕ್ಕೇರಿದಿದೆ.
ಕೇರಳದಲ್ಲಿ ಕಳೆದ ವರ್ಷದ ಆಗಸ್ಟ್‌ನ ಕರಾಳ ನೆನಪು ಮರುಕಳಿಸುವಂತಾಗಿದ್ದು, ಶುಕ್ರವಾರ ವಿವಿಧೆಡೆ 20 ಮಂದಿ ಜೀವ ಕಳೆದುಕೊಂಡಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ನಿರೀಕ್ಷೆ ಇದ್ದು, ವಯನಾಡ್ ಹಾಗೂ ಮಲಪ್ಪುರಂ ಜಿಲ್ಲೆಗಳಲ್ಲಿ ಭೂಕುಸಿತದ ಅವಶೇಷಗಳೊಳಗೆ 40 ಮಂದಿ ಸಿಕ್ಕಿಹಾಕಿಕೊಂಡಿದ್ದಾರೆ.
ಪರಿಹಾರ ತಂಡಗಳು ವಯನಾಡ್‌ನಲ್ಲಿ ಎಂಟು ದೇಹಗಳನ್ನು ಹೊರ ತೆಗೆದಿವೆ. ಅಂತೆಯೇ ಮಲಪ್ಪುರಂನ ಬೆಟ್ಟ ಪ್ರದೇಶಗಳಲ್ಲಿ ಗುಡ್ಡ ಕುಸಿದು ಸಂಭವಿಸಿದ ದುರಂತದಲ್ಲಿ 10 ಮಂದಿ ಮೃತಪಟ್ಟಿದ್ದು, 30ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ಅವಶೇಷಗಳಡಿ ಸಿಲುಕಿಕೊಂಡಿರುವವರ ಬಗ್ಗೆ ಇನ್ನೂ ಖಚಿತ ಮಾಹಿತಿ ಸಿಕ್ಕಿಲ್ಲ; ಆದ್ದರಿಂದ ಜೀವಹಾನಿಯ ಸ್ಪಷ್ಟಚಿತ್ರಣ ಇನ್ನಷ್ಟೇ ದೊರಕಬೇಕಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸ್ಪಷ್ಟಪಡಿಸಿದ್ದಾರೆ.
ಪ್ರವಾಹ ನೀರು ನುಗ್ಗಿದ ಹಿನ್ನೆಲೆಯಲ್ಲಿ ರಾಜ್ಯದ ಅತ್ಯಧಿಕ ದಟ್ಟಣೆಯ ಕೊಚ್ಚಿ ವಿಮಾನ ನಿಲ್ದಾಣವನ್ನು ರವಿವಾರದ ವರೆಗೆ ಮುಚ್ಚಲಾಗಿದೆ. ಎರ್ನಾಕುಲಂ, ಇಡುಕ್ಕಿ, ಪಾಲಕ್ಕಾಡ್, ಮಲಪ್ಪುರಂ, ಕೋಳಿಕ್ಕೋಡ್, ವಯನಾಡ್ ಹಾಗೂ ಕಣ್ಣೂರು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. 13 ರಾಷ್ಟ್ರೀಯ ವಿಪತ್ತು ಪಡೆ ತಂಡಗಳು ಹಾಗೂ 180 ಸೇನಾ ಸಿಬ್ಬಂದಿ ಕೇರಳ ಪ್ರವಾಹ ಪರಿಹಾರಕ್ಕಾಗಿ ಆಗಮಿಸಿದ್ದಾರೆ. 64 ಸಾವಿರ ಮಂದಿಯನ್ನು ಸುರಕ್ಷಿತ ಜಾಗಗಳಿಗೆ ಸ್ಥಳಾಂತರಿಸಲಾಗಿದ್ದು, ರಾಜ್ಯದ ಬಹುತೇಕ ಕಡೆಗಳಲ್ಲಿ 20ರಿಂದ 40 ಸೆಂಟಿ ಮೀಟರ್‌ವರೆಗೂ ಮಳೆಬಿದ್ದಿದೆ.
ಕರ್ನಾಟಕದಲ್ಲಿ ಶುಕ್ರವಾರ 10 ಮಂದಿ ಸಾವನ್ನಪ್ಪಿದ್ದು, ರಾಜ್ಯದಲ್ಲಿ ಮಳೆಗೆ ಬಲಿಯಾದವರ ಸಂಖ್ಯೆ 22ಕ್ಕೇರಿದೆ. ಏಳು ಮಂದಿಯನ್ನು ಬಲಿ ಪಡೆದ ವಿರಾಜಪೇಟೆ ಭೂಕುಸಿತ ಘಟನೆಯಲ್ಲಿ ಇನ್ನೂ ಎಂಟು ಮಂದಿ ನಾಪತ್ತೆಯಾಗಿದ್ದಾರೆ. ದಕ್ಷಿಣ ಕನ್ನಡ ಸೇರಿದಂತೆ ಆರು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಮುಂದಿನ 48 ಗಂಟೆಗಳಲ್ಲಿ ಭಾರಿ ಮಳೆಯಾಗುವ ನಿರೀಕ್ಷೆ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News