ಕುರುಕ್ಷೇತ್ರ: ನೆನಪಲ್ಲಿ ಉಳಿಯುವುದು ಯುದ್ಧ ಮಾತ್ರ..!

Update: 2019-08-10 18:36 GMT

ದುರ್ಯೋಧನನ ಸಭಾಪ್ರವೇಶದೊಂದಿಗೆ ‘ಮುನಿರತ್ನ ಕುರುಕ್ಷೇತ್ರ’ ಚಿತ್ರ ಆರಂಭವಾಗುತ್ತದೆ. ಅದು ಮಹಾಭಾರತದ ಸಭಾಪರ್ವ. ವಂದಿಮಾಗಧರ ಬಹುಪರಾಕ್ ಗೀತೆಯೊಂದಿಗೆ ದುರ್ಯೋಧನ ಬಂದರೂ ಚಿತ್ರದ ಪ್ರಥಮ ಸಂಭಾಷಣೆ ಆರಂಭವಾಗುವುದು ಭೀಷ್ಮನ ಮಾತುಗಳ ಮೂಲಕ. ಚಿತ್ರದಲ್ಲಿ ದುರ್ಯೋಧನನ ಜತೆಗೆ ಪ್ರಧಾನ್ಯತೆ ನೀಡಲಾಗಿರುವ ಪಾತ್ರಗಳು ಐದು. ಅವುಗಳು ಭೀಷ್ಮ, ಶ್ರೀಕೃಷ್ಣ, ಶಕುನಿ, ಕರ್ಣ ಮತ್ತು ಅಭಿಮನ್ಯು. ಹಾಗಾಗಿ ಆ ಪಾತ್ರಗಳ ಪ್ರಮುಖ ದೃಶ್ಯಗಳಿಗೆ ಅನುಗುಣವಾಗಿ ಮಹಾಭಾರತದ ವಿವಿಧ ಪರ್ವಗಳಿಂದ ದೃಶ್ಯಗಳನ್ನು ಆಯ್ದುಕೊಳ್ಳಲಾಗಿದೆ. ಭಾರತೀಯರು ಬಾಲ್ಯದಿಂದಲೇ ಕೇಳಿ ಬೆಳೆದಿರುವ ಕತೆಯಾದ ಕಾರಣ ಚಿತ್ರದ ಬಗ್ಗೆ ಗೊಂದಲಗಳೇನೂ ಉಂಟಾಗುವುದಿಲ್ಲ. ಆದರೆ ಈ ಹಿಂದೆ ಧಾರಾವಾಹಿಗಳಲ್ಲಿ ಕಂಡ ಮತ್ತು ಪುರಾಣ ಕೇಳಿ ಕಲ್ಪಿಸಿಕೊಂಡ ನಿರೀಕ್ಷೆಗಳನ್ನು ಚಿತ್ರ ತೃಪ್ತಿಗೊಳಿಸಿದೆಯಾ ಎಂದರೆ ಇಲ್ಲ ಎಂದೇ ಹೇಳಬೇಕಾಗುತ್ತದೆ! ಅದಕ್ಕೆ ಪ್ರಮುಖ ಕಾರಣ ಚಿತ್ರದ ವೆಚ್ಚವೂ ಆಗಿರಬಹುದು ಎಂದು ಹೇಳಲೇಬೇಕು.

ಚಿತ್ರದ ಮೊದಲ ನಿರೀಕ್ಷೆ ಎಂದರೆ ಕೇಂದ್ರ ಪಾತ್ರಧಾರಿ ಎಂದು ಬಿಂಬಿತವಾಗಿರುವ ದರ್ಶನ್. ಅವರು ಪಾತ್ರದ ನಿಭಾಯಿಸುವಿಕೆಯಲ್ಲಿ ಖಂಡಿತವಾಗಿ ಗೆದ್ದಿದ್ದಾರೆ. ಆದರೆ ಛಲದಂಕ ಮಲ್ಲ ಎಂದು ಗುರುತಿಸಲ್ಪಡುವ ದುರ್ಯೋಧನನ ಪಾತ್ರದ ಅಗಾಧತೆಯೊಂದಿಗೆ ಚಿತ್ರ ಸಾಗುವುದಿಲ್ಲ. ಹಾಗಾಗಿ ಇದು ದರ್ಶನ್ ಸಿನೆಮಾ ಎನ್ನುವುದಕ್ಕಿಂತ ‘ಮುನಿರತ್ನ ಕುರುಕ್ಷೇತ್ರ’ ಎನ್ನುವುದನ್ನು ಮತ್ತೊಮ್ಮೆ ಗಣನೆಯಲ್ಲಿರಿಸಿಕೊಂಡೇ ದರ್ಶನ್ ಅಭಿಮಾನಿಗಳು ಚಿತ್ರ ನೋಡಬೇಕಾಗಿದೆ. ಭೀಷ್ಮನಾಗಿ ನಟಿಸಿರುವ ಅಂಬರೀಷ್ ಅವರ ಕೊನೆಯ ಚಿತ್ರ ಎನ್ನುವ ಕಾರಣಕ್ಕಾಗಿ ಇದು ಪ್ರಮುಖವಾಗುತ್ತದೆ. ಆದರೆ ಅಭಿಮನ್ಯು ಪಾತ್ರದಲ್ಲಿ ನಿಖಿಲ್ ಕುಮಾರ್ ಸ್ವಾಮಿ ನಟಿಸಿದ್ದಾರೆ ಎನ್ನುವ ಕಾರಣಕ್ಕೆ ನೀಡಲಾಗಿರುವ ಅಂಬರೀಷ್ ಜತೆಗಿನ ಮಾತುಕತೆಯ ಸನ್ನಿವೇಶವನ್ನು ಕ್ಷಮಿಸುವುದು ಕಷ್ಟ. ಯಾಕೆಂದರೆ ಆ ಮಾತುಕತೆಗಳಲ್ಲಿ ಮಂಡ್ಯ ಚುನಾವಣೆಯ ಹಿನ್ನೆಲೆ ಕಾಣಿಸಿರುವುದು ಕಾಕಾತಾಳೀಯವಾಗಿ ಏನೂ ಅನ್ನಿಸುವುದಿಲ್ಲ. ಕರಾವಳಿಯಲ್ಲಿ ಪೌರಾಣಿಕ ಯಕ್ಷಗಾನದೊಳಗೆ ಪ್ರಸ್ತುತ ರಾಜಕೀಯದ ಒಂದು ಪಕ್ಷದ ಪರವಾಗಿ ಸಂಭಾಷಣೆಗಳನ್ನು ತುರುಕುವ ಕೆಟ್ಟ ಸಂಪ್ರದಾಯ ಶುರುವಾಗಿರುವುದನ್ನು ನೋಡಿದ್ದೇವೆ. ಅಂಥ ಪ್ರಯತ್ನ ಇಲ್ಲಿಯೂ ನಡೆದಿರುವುದು ದುರಂತ.

ಜತೆಗೆ ಅಭಿಮನ್ಯುವಿಗೆ ನೀಡಲಾಗಿರುವ ಹಾಡು ಕೂಡ ಆಧುನಿಕ ಚಿತ್ರಗೀತೆಯಂತೆ ಮೂಡಿ ಬಂದಿದೆ. ಅದಕ್ಕೆ ತಕ್ಕಂತೆ ನಿಖಿಲ್ ಅವರಿಗೆ ಶಾರುಕ್ ಶೈಲಿಯಲ್ಲಿ ಭುಜವಗಲಿಸಿ ಕುಣಿದಾಡುವ ನೃತ್ಯ ನಿರ್ದೇಶನವನ್ನು ಕೂಡ ನೀಡಲಾಗಿದೆ! ಆದರೆ ಈ ಎಲ್ಲ ಕೊರತೆಗಳನ್ನು ನೀಗುವ ರೀತಿಯಲ್ಲಿ ರಣರಂಗದಲ್ಲಿ ನಿಖಿಲ್ ನೀಡಿರುವ ಅಭಿನಯ ಮಾತ್ರ ಮೆಚ್ಚಲೇಬೇಕು. ಶ್ರೀಕೃಷ್ಣನಾಗಿ ರವಿಚಂದ್ರನ್ ಅವರು ತಮ್ಮ ಮುಖ ಲಕ್ಷಣದಿಂದ ಆಕರ್ಷಿಸುತ್ತಾರೆ. ಉಳಿದಂತೆ ಗೀತೋಪದೇಶ ದೃಶ್ಯ ಚಿತ್ರದ ಹೈಲೈಟ್. ಕರ್ಣನಾಗಿ ಅರ್ಜುನ್ ಸರ್ಜಾ ಪಾತ್ರಕ್ಕೆ ನೀಡಿರುವ ಅವಕಾಶ ಚಿತ್ರದ ಪ್ರಮುಖ ಆಕರ್ಷಣೆ. ಅದರಲ್ಲಿಯೂ ಕುಂತಿ ಪಾತ್ರಧಾರಿ ಭಾರತಿಯವರ ಜತೆಗಿನ ದೃಶ್ಯವು ಪ್ರೇಕ್ಷಕರ ಚಿತ್ತ ಕಲಕುವುದರಲ್ಲಿ ಸಂದೇಹವಿಲ್ಲ. ಈ ಎಲ್ಲ ಪಾತ್ರಗಳ ನಡುವೆ ದುರ್ಯೋಧನನ ಕಾರಣಕ್ಕಾಗಿಯೇ ಹೈಲೈಟಾಗಿರುವಂತಹ ಪಾತ್ರ ಶಕುನಿಯದ್ದು. ಅದನ್ನು ರವಿಶಂಕರ್ ಸಮರ್ಥವಾಗಿ ನಿಭಾಯಿಸಿದ್ದಾರೆ. ಆದರೆ ದುರ್ಯೋಧನ, ಶಕುನಿ ಮೊದಲಾದವರ ಸಂಭಾಷಣೆಗಳಲ್ಲಿ ಒಂದಷ್ಟು ಹಳೆಗನ್ನಡದ ಪ್ರಾಸಬದ್ಧ ಪದಗಳನ್ನು ಡಿಕ್ಷನರಿಯಿಂದ ತೆಗೆದು ತುರುಕಿದ ಹಾಗಿದೆ.

ಉಳಿದಂತೆ ದ್ರೌಪದಿಯಾಗಿ ಸ್ನೇಹ ಗಮನ ಸೆಳೆಯುತ್ತಾರೆ. ವಿಚಿತ್ರ ಎಂದರೆ ಬಾಲಿವುಡ್‌ನಿಂದ ಬಂದರೂ ಅರ್ಜುನನಾಗಿ ಸೋನು ಸೂದ್ ಸಪ್ಪೆಯಾಗಿ ಕಾಣುತ್ತಾರೆ. ಭೀಮನಾಗಿ ಡ್ಯಾನಿಶ್ ಅಖ್ತರ್ ಸೈಫಿ ಆಕಾರದಲ್ಲಿ ದರ್ಶನ್‌ಗೆ ಸರಿಯಾದ ಸ್ಪರ್ಧಿಯಂತೆ ಕಾಣಿಸಿದರೂ ಅವರ ಅಭಿನಯದ ಪ್ರದರ್ಶನಕ್ಕೆ ಸರಿಯಾದ ಅವಕಾಶ ಸಿಕ್ಕಿಲ್ಲ ಎನ್ನುವುದು ಸತ್ಯ. ಚಿತ್ರದ ಮೇಕಿಂಗ್ ವಿಚಾರಕ್ಕೆ ಬಂದರೂ ಆರಂಭದಲ್ಲಿನ ಸಭಾದೃಶ್ಯವೇ ಪೇಲವವಾಗಿದೆ. ಅದಕ್ಕೆ ನಿರೀಕ್ಷಿತ ಗ್ರಾಫಿಕ್ಸ್ ವೈಭವ ಇಲ್ಲದಿರುವುದು ಕಾರಣ ಎನ್ನಬಹುದು. ಆದರೆ ಚಿತ್ರ ಮುಂದುವರಿದ ಹಾಗೇ ಅರಮನೆಯ ದೃಶ್ಯ, ವಿಶ್ವರೂಪ, ಯುದ್ಧಭೂಮಿ ದೃಶ್ಯಗಳು ಆಕರ್ಷಣೀಯವಾಗಿದೆ. ಅದೇ ವೇಳೆ ಕತೆಯ ವಿಚಾರಕ್ಕೆ ಬಂದರೆ ಅಶ್ವತ್ಥಾಮ ಸತ್ತನೆಂದು ಧರ್ಮರಾಯ ಕೂಗಿ ಹೇಳುವ ದೃಶ್ಯ, ಕೌರವನ ತೊಡೆ ಮುರಿಯಲು ಭೀಮನಿಗೆ ಕೃಷ್ಣ ಹೇಳುವ ದೃಶ್ಯಗಳು ಪರಿಣಾಮಕಾರಿಯಾಗಿಲ್ಲ. ಯಾಕೆಂದರೆ ಮಹಾಭಾರತದಲ್ಲಿ ವರ್ಣಿಸಿರುವ ರೀತಿ ಇಲ್ಲಿ ತೆರೆಗೆ ತರಲಾಗಿಲ್ಲ.

ಒಟ್ಟಿನಲ್ಲಿ ಮಹಾಭಾರತ ಎನ್ನುವ ದೇಶದ ಮಹಾಕಾವ್ಯದ ಭಾಗವನ್ನು ಚಿತ್ರವಾಗಿಸಿರುವ ಕಾರಣ ಇದು ಪ್ರತಿಯೊಬ್ಬರೂ ನೋಡಬಹುದಾದ ಚಿತ್ರ. ಆದರೆ ಮಕ್ಕಳು ಚಿತ್ರಮಂದಿರಕ್ಕೆ ಬರುವ ಮುನ್ನ ಮಹಾಭಾರತದ ಬಗ್ಗೆ ಒಂದು ಪ್ರಾಥಮಿಕ ಜ್ಞಾನವನ್ನು ತಿಳಿಸಿ ಕರೆ ತರುವುದು ಉತ್ತಮ. ಯಾಕೆಂದರೆ ಹಿನ್ನೆಲೆಯೇ ತಿಳಿಯದೆ ಚಿತ್ರ ನೋಡಿ ಪ್ರಯೋಜನವಿಲ್ಲ. ಅದೇ ರೀತಿ ಸಾಮಾನ್ಯ ಚಿತ್ರಕ್ಕಿಂತ ತ್ರಿಡಿಯಲ್ಲಿನ ಪ್ರದರ್ಶನ ನೋಡುವುದು ಮನರಂಜನೆಗೆ ಸಹಕಾರಿಯಾದೀತು.

ತಾರಾಗಣ: ದರ್ಶನ್, ಅಂಬರೀಷ್, ಸ್ನೇಹಾ ಇನ್ನಿತರರು
ನಿರ್ದೇಶನ: ನಾಗಣ್ಣ
ನಿರ್ಮಾಣ: ಮುನಿರತ್ನ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News