ಜಾರುತ್ತಿರುವ ಸ್ಥಾನಮಾನ

Update: 2019-08-10 18:45 GMT

ಸಚಿವಾಲಯ ಮತ್ತು ಸರಕಾರಿ ಕಚೇರಿಗಳಲ್ಲಿ ಮುಕ್ತ ಪ್ರವೇಶದ ಸ್ವಾತಂತ್ರ್ಯ ಹೊಂದಿರುವ ಪತ್ರತಕರ್ತರಿಗೆ ಅರ್ಥ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪ್ರತಿಬಂಧಕಾಜ್ಞೆಯಿಂದ ಆಘಾತವಾಗಿದ್ದರೆ ಆಶ್ಚರ್ಯವಿಲ್ಲ. ಈ ಪ್ರತಿಬಂಧಕಾಜ್ಞೆ ಪ್ರಕಾರ, ಮಾನ್ಯತೆ ಪಡೆದ ವರದಿಗಾರರೂ ಪೂರ್ವಾನುಮತಿ ಪಡೆದು ಸಚಿವರು/ಅಧಿಕಾರಿಗಳನ್ನು ಭೇಟಿಮಾಡಬೇಕಾಗುತ್ತದೆ. ಅಂದರೆ ಪತ್ರಕರ್ತರ ಮುಕ್ತ ಸುದ್ದಿಮೂಲಗಳನ್ನು ಮುಚ್ಚುವುದೇ ಇದರ ಹಿಂದಿನ ಉದ್ದೇಶ.


ಸೇವೆ ಪತ್ರಿಕಾ ವ್ಯವಸಾಯದ ಏಕಮೇವ ಗುರಿ ಎಂದಿದ್ದಾರೆ ಮಹಾತ್ಮಾ ಗಾಂಧಿ. ಸತ್ಯವನ್ನು, ಸಂಗತಿಯ ಸತ್ಯತೆಯನ್ನು ವರದಿ ಮಾಡುವುದು ಈ ಸೇವೆಯ ಪರಮ ಆದರ್ಶ. ಇಂತಹ ಸೇವೆಗೆ ತೊಡಕು, ತೊಂದರೆಗಳು ಮೊದಲಿನಿಂದಲೂ ಇವೆ. ಪತ್ರಕರ್ತರು ಈ ತೊಡಕು ತೊಂದರೆಗಳ ವಿರುದ್ಧ ಹೋರಾಡುತ್ತಲೇ ವೃತ್ತಿಯ ನೀತಿನಿಯತ್ತುಗಳಿಂದ ತಮ್ಮ ಕರ್ತವ್ಯವನ್ನು ನೆರವೇರಿಸುತ್ತಲಿದ್ದಾರೆ. ಕರ್ತವ್ಯನಿರತ ಪತ್ರಕರ್ತರು ಪ್ರಾಣ ಬೆದರಿಕೆಯಂತಹ ಅಪಾಯಕಾರಿ ಸ್ಥಿತಿ, ಸನ್ನಿವೇಶಗಳಲ್ಲಿ ಕೆಲಸಮಾಡಬೇಕಾದ ವಿದ್ಯಮಾನವೂ ಇವತ್ತು ನಿನ್ನೆಯದಲ್ಲ. ಪ್ರಪಂಚದಾದ್ಯಂತ ಇಂದು ಪತ್ರಕರ್ತರು ಗಂಡಾಂತರಕಾರಿಯಾದ ಬೆದರಿಕೆಗಳನ್ನು ಎದುರಿಸುತ್ತಿದ್ದಾರೆಂದು ‘ರಿಪೋರ್ಟರ್ಸ್‌ ವಿತೌಟ್ ಬಾರ್ಡರ್ಸ್‌’ (ಆರ್‌ಎಸ್‌ಎಫ್)ಅಂತರ್‌ರಾಷ್ಟ್ರೀಯ ಸಂಸ್ಥೆ ಸಂಕಲಿಸಿ ರುವ 2019ರ ವಿಶ್ವ ಪತ್ರಿಕಾ ಸ್ವಾತಂತ್ರ್ಯದ ಸೂಚ್ಯಂಕ ತಿಳಿಸುತ್ತದೆ.

  ಜಗತ್ತಿನ 180 ರಾಷ್ರಗಳಲ್ಲಿನ ಪತ್ರಿಕಾ ಸ್ವಾತಂತ್ರ್ಯದ ಪಾಲನೆ, ಪೋಷಣೆ ಮತ್ತು ರಕ್ಷಣೆಗಳ ಸ್ಥಿತಿಗತಿಯ ಅಧ್ಯಯನ ನಡೆಸಿ ಆರ್‌ಎಸ್‌ಎಫ್ ಈ ಸೂಚಿಯನ್ನು ಸಂಕಲಿಸಿದೆ. ಜಗತ್ತಿನಲ್ಲಿ ಪತ್ರಿಕಾ ಸ್ವಾತಂತ್ರ್ಯ ಸುರಕ್ಷಿತ ಎನ್ನಬಹುದಾದ ದೇಶಗಳ ಸಂಖ್ಯೆ ಇಳಿಮುಖವಾಗುತ್ತಿದೆಯೆಂಬುದು ಆರ್‌ಎಸ್‌ಎಫ್ ಅಧ್ಯಯನದಲ್ಲಿ ಕಂಡುಬಂದಿರುವ ಮತ್ತೊಂದು ಪ್ರಮುಖ ಅಂಶ. ಕಳವಳಕಾರಿಯಾದ ಈ ಬೆಳವಣಿಗೆ ಬಗ್ಗೆ ನಾವೆಲ್ಲ ಎಚ್ಚೆತ್ತುಕೊಳ್ಳಬೇಕಿದೆ. ಪತ್ರಕರ್ತರ ಮೇಲಣ ದ್ವೇಷ, ಹಗೆತನಗಳು ಅನೇಕ ದೇಶಗಳಲ್ಲಿ ಹಿಂಸಾಚಾರಗಳ ರೂಪದಲ್ಲಿ ಪ್ರಕಟಗೊಳ್ಳುತ್ತಿವೆ. ಅಹಿಂಸೆಯ ನಾಡಾದ ಭಾರತವೂ ಇದಕ್ಕೆ ಹೊರತಾಗಿಲ್ಲ. 2018ರಲ್ಲಿ ಭಾರತದಲ್ಲಿ ಕನಿಷ್ಠ ಆರು ಮಂದಿ ಕಾರ್ಯನಿರತ ಪತ್ರಕರ್ತರ ಹತ್ಯೆಯಾಗಿದೆಯೆಂದು ಈ ವರದಿ ದಾಖಲಿಸಿದೆ. ಆರ್‌ಎಸ್‌ಎಫ್ ಸೂಚ್ಯಂಕದ ಪ್ರಕಾರ ಪತ್ರಿಕಾ ಸ್ವಾತಂತ್ರ್ಯದ ವಿಶ್ವ ಶ್ರೇಣಿಯಲ್ಲಿ ಭಾರತದ ಸ್ಥಾನಮಾನ 2018ರಲ್ಲಿ 138 ಆಗಿದ್ದು ಈ ವರ್ಷ ಅದು 140ಕ್ಕೆ ಕುಸಿದಿದೆ. 2016ರಲ್ಲಿ ಭಾರತದ ಸ್ಥಾನಮಾನ 133 ಆಗಿತ್ತು, 2017ರಲ್ಲಿ 136 ಹಾಗೂ 2014ರಲ್ಲಿ 140 ಆಗಿತ್ತು. ಈ ವರ್ಷ ಮತ್ತೆ ಸ್ಥಾನಮಾನದಲ್ಲಿ ಎರಡಂಕಿ ಕುಸಿತವಾಗಿರುವುದು ಒಂದು ಹಿನ್ನಡೆಯೇ ಸರಿ. ಈ ಹಿನ್ನಡೆಗೆ ವಿಶೇಷ ಕಾರಣಗಳಿವೆ. ‘ರಾಷ್ಟ್ರವಿರೋಧಿ ಆಲೋಚನೆಯ’ ಎಲ್ಲ ಲಕ್ಷಣಗಳನ್ನು ‘ರಾಷ್ಟ್ರೀಯ ಚರ್ಚೆ-ಸಂವಾದಗಳಿಂದ ಮೂಲೋತ್ಪಾಟಗೊಳಿಸುವಂತೆ ಹಿಂದುತ್ವ ಬೆಂಬಲಿಗರು ಸಂಘಟಿತ ಪ್ರಚಾರ ನಡೆಸಿರುವುದೇ’ ಈ ಹಿನ್ನಡೆಗೆ ಕಾರಣವೆಂದೂ, ಇದು ಭಾರತದಲ್ಲಿ ಪತ್ರಕರ್ತರನ್ನು ಅಪಾಯಕ್ಕೆ ಈಡು ಮಾಡಿದೆಯೆಂದೂ ವರದಿ ಹೇಳಿದೆ. ವಿಶೇಷವಾಗಿ ಮಹಿಳಾ ಪತ್ರಕರ್ತರು ಹೆಚ್ಚಾಗಿ ಇಂತಹ ಅಪಾಯದ ಅಂಚಿಗೆ ದೂಡಲ್ಪಟ್ಟಿದ್ದಾರೆ ಎನ್ನುವ ವರದಿಯ ಮಾತಂತೂ ನಮ್ಮ ದೇಶಕ್ಕೆ ಮಾನತರುವಂಥದ್ದಲ್ಲ. ಭಾರತದಲ್ಲಿ ಇಂದು ಜಮ್ಮು ಕಾಶ್ಮೀರ ಪರಿಸ್ಥಿತಿ, ಮಾವೋವಾದಿಗಳ ದಂಗೆಯಂಥ ಪ್ರಕರಣಗಳನ್ನು ವರದಿಮಾಡುವುದು ಪತ್ರಕರ್ತರಿಗೆ ಕಷ್ಟದ ಕೆಲಸವಾಗಿದೆ. ಇಂತಹ ಕಷ್ಟಸಾಧ್ಯವಾದ ಕೆಲಸದಲ್ಲಿ ತೊಡಗುವ ಪತ್ರಕರ್ತರು ಉಗ್ರಗಾಮಿಗಳು ಮತ್ತು ಅಪರಾಧ ಪ್ರವೃತ್ತಿಯ ಪಟಾಲಮ್ಮುಗಳ ಕಡುಕೋಪಕ್ಕೆ ಗುರಿಯಾಗುವುದರ ಜೊತೆಗೆ ವ್ಯವಸ್ಥೆಯ ಕೆಂಗಣ್ಣಿಗೂ ಈಡಾಗುತ್ತಾರೆ. ಅಧಿಕಾರಿಗಳು ಇವರ ಮೇಲೆ ಓಬೀರಾಯನ ಕಾಲದ ದೇಶದ್ರೋಹದ ಕಾನೂನಿನ ಅಸ್ತ್ರವನ್ನು ಪ್ರಯೋಗಿಸುತ್ತಾರೆ.

ಅಭಿವ್ಯಕ್ತಿ ಸ್ವಾತಂತ್ರ್ಯ, ಪತ್ರಿಕಾ ಸ್ವಾತಂತ್ರ್ಯ ಇಂದು ನಮ್ಮ ದೇಶದಲ್ಲಿ ಎಷ್ಟು ಸೂಕ್ಷ್ಮದ, ನಾಜೂಕಿನ ಸಂಗತಿಯಾಗಿದೆಯೆಂದರೆ, ಬಿಜೆಪಿ ಸರಕಾರದ ಮತ್ತು ಆರೆಸ್ಸೆಸ್‌ನ ಕಾರ್ಯಸೂಚಿಗಳು ಮತ್ತು ಚಿಂತನೆಗಳನ್ನು ಇಷ್ಟಪಡದ ಮನಸ್ಸುಗಳ ವಿಭಿನ್ನ ದನಿಯನ್ನು, ವಿಚಾರಲಹರಿಯನ್ನು ರಾಷ್ಟ್ರದ್ರೋಹ ಎಂದೇ ಬಿಂಬಿಸಲಾಗುತ್ತದೆ.ಅಂತಹವರ ವಿರುದ್ಧ ಹರಿಹಾಯಲಾಗುತ್ತದೆ. ಇವತ್ತಿನ ಕಾಶ್ಮೀರದ ವಿದ್ಯಮಾನವನ್ನೇ ತೆಗೆದುಕೊಳ್ಳಿ. ಸಂಸತ್ತಿನಲ್ಲಿ 370 ಮತ್ತು 35-ಎ ವಿಧಿಗಳ ರದ್ದು ಹಾಗೂ ಜಮ್ಮು ಕಾಶ್ಮೀರದ ವಿಭಜನೆಯ ಮಸೂದೆಗಳ ಮೇಲೆ ಚರ್ಚೆ ನಡೆಯುತ್ತಿದ್ದಾಗ ಶ್ರೀನಗರ ಮತ್ತಿತರ ಸ್ಥಳಗಳಲ್ಲಿ ಲೋಕ ಸಭೆ ಸದಸ್ಯ ಫಾರೂಕ್ ಅಬ್ದುಲ್ಲಾ ಸೇರಿದಂತೆ ಎಲ್ಲ ಕಾಶ್ಮೀರಿಗಳೂ ಗೃಹಬಂಧನದಲ್ಲಿದ್ದರು. ಟೆಲಿಫೋನ್ ಆದಿಯಾಗಿ ಆ ರಾಜ್ಯಕ್ಕೆ ಹೊರಜಗತ್ತಿನೊಂದಿಗೆ ಎಲ್ಲ ಬಗೆಯ ಸಂಪರ್ಕವನ್ನು ಕಡಿದುಹಾಕಲಾಗಿತ್ತು. ಅಲ್ಲಿನ ಈ ‘ಕರ್ಫ್ಯೂ’ ಸ್ಥಿತಿಯನ್ನು ವರದಿ ಮಾಡುವುದು ಯಾವ ಪತ್ರಿಕೆಗೂ ಸಾಧ್ಯವಾಗಲಿಲ್ಲ. ಕೇಂದ್ರ ಗೃಹ ಸಚಿವರೇನೋ ಮೂರು ತಿಂಗಳಿಗೆ ಸಾಕಾಗುವಷ್ಟು ಆಹಾರ ದಾಸ್ತಾನು ಅಲ್ಲಿದೆ ಎಂದು ಹೇಳಿದರು. ಆದರೆ ಇದನ್ನು ಪಡೆದುಕೊಳ್ಳುವುದು ಜನರಿಗೆ ಸಾಧ್ಯವಾಯಿತೇ? ಜನರಿಗೆ ಎಟಿಎಂಗಳಿಂದ ಹಣ ತೆಗೆಯುವುದು ಸಾಧ್ಯವಾಯಿತೇ? ದಿನಗೂಲಿ ಸಂಪಾದನೆಯ ಮೇಲೆ ಬದುಕುವವರ ಗೋಳು ಏನಾಗಿರಬಹುದು? ಕೇಂದ್ರ ಸರಕಾರದ ಈ ಕ್ರಮಗಳ ಬಗ್ಗೆ ಕಾಶ್ಮೀರಿಗಳ ಪ್ರತಿಕ್ರಿಯ ಏನಿದ್ದೀತು? ಇದಾವುದನ್ನೂ ವರದಿ ಮಾಡುವುದು ಮಾಧ್ಯಮಗಳಿಗೆ ಸಾಧ್ಯವಾಗದಂತೆ ಸಂಪರ್ಕ ಸಾಧನಗಳನ್ನು ಕಡಿದುಹಾಕಿ ಪ್ರತಿಬಂಧಕಗಳನ್ನು ಹೇರಲಾಗಿದೆ. ಯಾರಾದರೂ ಪ್ರಾಣ ಒತ್ತೆ ಇಟ್ಟು ವರದಿಮಾಡುವ ಸಾಹಸಕ್ಕೆ ಪ್ರಯತ್ನಿಸಿದರೆ ಅವರು ಅರೆಸೇನಾ ಪಡೆಗಳ ಕೈಯಿಂದ ಪ್ರಾಣಾಪಾಯದ ಜೊತೆಗೆ ದೇಶದ್ರೋಹದ ಆಪಾದನೆಯನ್ನೂ ಎದುರಿಸಬೇಕಾಗುತ್ತದೆ.

ಹೀಗಾಗಿ ಪತ್ರಿಕೆಗಳು ಸರಕಾರಿ ಮೂಲದ ಪ್ರಕಟನೆೆಗಳನ್ನು ಮಾತ್ರ ಪ್ರಜೆಗಳಿಗೆ ವರದಿಮಾಡುವಂತಾಗಿದೆ. ಮುದ್ರಣ ಮಾಧ್ಯಮ ಮತ್ತು ವಿದ್ಯುನ್ಮಾನ ಮಾಧ್ಯಮಗಳ ಪತ್ರಕರ್ತರ ವಿರುದ್ಧ ವ್ಯಕ್ತವಾಗುತ್ತಿರುವ ದ್ವೇಷ ಪ್ರವೃತ್ತಿಯು ಇವತ್ತು ಅನೇಕ ದೇಶಗಳಲ್ಲಿ ಅತಿರೇಕದ ರಾಷ್ಟ್ರೀಯತೆಯ ಸ್ಪಷ್ಟ ಲಕ್ಷಣವೇ ಆಗಿದೆ. ಭಾರತದಲ್ಲಿ, ಕೇಂದ್ರ ಮತ್ತು ಅನೇಕ ರಾಜ್ಯ ಸರಕಾರಗಳು ವಸ್ತುನಿಷ್ಠ ವರದಿಗಾರಿಕೆ, ಕಟುವಾದ ಪತ್ರಿಕಾ ವಿಮರ್ಶೆ, ಲೇಖನಗಳ ವಿರುದ್ಧ ತೀವ್ರವಾದ ಅಸಹನೆಯನ್ನು ತೋರುತ್ತಿವೆ ಹಾಗೂ ಪತ್ರಿಕಾ ವ್ಯವಸಾಯವನ್ನು ನಿರ್ಬಂಧಿಸಲು ಹಿಂದೆಂದೂ ಕಾಣದಂತಹ ಕ್ರಮಗಳನ್ನು ಕೈಗೊಳ್ಳುತ್ತಿವೆ. ಇದಕ್ಕೆ ಇತ್ತೀಚಿನ ನಿದರ್ಶನ, ಮಾನ್ಯತೆ ಪಡೆದ ವರದಿಗಾರರೂ ಪೂರ್ವಾನುಮತಿ ಇಲ್ಲದೆ ತಮ್ಮ ಸಚಿವಾಲಯವನ್ನು ಪ್ರವೇಶಿಸುವಂತಿಲ್ಲ ಎಂದು ಕೇಂದ್ರ ಅರ್ಥ ಸಚಿವರು ಹೊರಡಿಸಿರುವ ಫರ್ಮಾನು. ಇದೊಂದು ಮೂರ್ಖತನದ ಪರಾಕಾಷ್ಠೆ. ಪತ್ರಕರ್ತರು ಕುರ್ಚಿಯ ಮೇಲೆ ಸುಖಾಸೀನರಾಗಿ ಕೆಲಸಮಾಡುವ ಸಚಿವರು ಅಥವಾ ಸಚಿವಾಲಯದ ಸಿಬ್ಬಂದಿಯಲ್ಲ. ಅವರದು ದಂತಗೋಪುರದಲ್ಲಿ ಕುಳಿತು ಉದ್ಯೋಗ ಮಾಡುವ ವೃತ್ತಿಯಲ್ಲ.ಅವರು ಕಣ್ಣು-ಕಿವಿ-ಮೂಗು ಇತ್ಯಾದಿ ಇಂದ್ರಿಯಗಳನ್ನು ಜಾಗೃತವಾಗಿಟ್ಟುಕೊಂಡು ನಾರದ ಮುನಿಗಳಂತೆ ಲೋಕವಿಹಾರ ಮಾಡುತ್ತಾ ತಮ್ಮ ಇಂದ್ರಿಯಗಳು ಗ್ರಹಿಸಿದ್ದನ್ನು ಬುದ್ಧಿಯ ನಿಕಷಕ್ಕೆ ಒಡ್ಡಿ ಕಂಡುಕೊಂಡ ಸತ್ಯವನ್ನು ವರದಿ ಮಾಡುವವರು. ಅವರಿಗೆ ಸಚಿವಾಲಯಕ್ಕೆ ಹೋಗಕೂಡದು, ಪೊಲೀಸ್ ಸ್ಟೇಷನ್‌ಗೆ ಹೋಗಕೂಡದು, ಸರಕಾರಿ ಕಚೇರಿಗಳಿಗೆ ಹೋಗಕೂಡದು ಎಂದು ನಿರ್ಬಂಧ ವಿಧಿಸಿದರೆ ಹೇಗೆ? ಪತ್ರಕರ್ತರ ದೈನಂದಿನ ಈ ಸಂಚಾರ ಪಥದಲ್ಲಿ (ನ್ಯೂಸ್ ಬೀಟ್) ಹೆಜ್ಜೆಹೆಜ್ಜೆಗೂ ಸುದ್ದಿಮೂಲಗಳಿರುತ್ತವೆ. ವಿಧಾನ ಸೌಧದ ಲಿಫ್ಟ್ ಆಪರೇಟರುಗಳೋ, ಸಚಿವರ ಚಾಲಕರೋ, ಮುಖ್ಯ ಮಂತ್ರಿಯ ಡವಾಲಿಯೋ, ಸಚಿವರ ಅತಿಥಿಗಳಿಗೆ ಚಹಾ ಪೂರೈಸುವ ಸಿಬ್ಬಂದಿಯೋ ಹೀಗೆ. ಹೀಗೊಂದು ಮೂಲ ಮಹಾನ್ ಸುದ್ದಿ ಸ್ಫೋಟಕ್ಕೆ ಮಾರ್ಗವಾಗುತ್ತದೆ.

ಎಷ್ಟೋ ಸಚಿವಾಲಯದ ಪಡಸಾಲೆಗಳಲ್ಲಿ ಠಳಾಯಿಸುತ್ತಿರುವ ವರದಿಗಾರರನ್ನು ಸಚಿವರೇ ಲೋಕಾಭಿರಾಮದ ಮಾತುಕತೆಗೆ, ರಾಜಕೀಯ ಚರ್ಚೆಗೆ ಆಹ್ವಾನಿಸುವ ಸಂದರ್ಭಗಳುಂಟು. ಇಂತಹ ಲೋಕಾಭಿರಾಮದ ಮಾತುಕತೆ ವೇಳೆಯಲ್ಲೇ ವರದಿಗಾರರು ಚಾಕಚಕ್ಯತೆಯಿಂದ ಮಂತ್ರಿಮಹೋದಯರ ಬಾಯಿಬಿಡಿಸಿ ಸರಕಾರದ ರಹಸ್ಯ ನಿರ್ಧಾರಗಳನ್ನು, ರಾಜಕೀಯ ನಡೆಗಳನ್ನು ತಿಳಿದು ಜನಹಿತಕ್ಕಾಗಿ ಸ್ಕೂಪ್ ಸುದ್ದಿಗಳನ್ನು ಮಾಡಿರುವುದುಂಟು. ಸಚಿವರ ಆಪ್ತ ಕಾರ್ಯದರ್ಶಿಯೊಂದಿಗಿನ ಇಂಗಿತದ ಒಂದು ನೋಟ ಸಚಿವರೊಂದಿಗೆ ಸಂದರ್ಶನಕ್ಕೆ ದಾರಿ ಮಾಡಿಕೊಡುತ್ತದೆ. ಮಾನ್ಯತೆ ಪಡೆದ ಪತ್ರಕರ್ತರಿಗೆ ಸಚಿವಾಲಯದಲ್ಲಿ ಸುತ್ತು ಹಾಕುವುದರಿಂದ ಆಗುವ ದೊಡ್ಡ ಲಾಭವೆಂದರೆ ಸಚಿವಾಲಯದ ಅಧಿಕಾರಗಳು ಮತ್ತು ಸಿಬ್ಬಂದಿಯೊಂದಿಗೆ ಸಂಪರ್ಕ. ಈ ಸ್ನೇಹ ಸಂಪರ್ಕದಿಂದಾಗಿ ತಮ್ಮ ಹೆಸರನ್ನು ಬಹಿರಂಗ ಪಡಿಸಬಾರದೆಂಬ ಶರತ್ತಿನ ಮೇಲೆ ಅಧಿಕಾರಿಗಳು ಸರಕಾರದ ರಹಸ್ಯ ನಿರ್ಧಾರಗಳನ್ನು, ನೀತಿನಿಲುವುಗಳನ್ನು ಜನಹಿತದ ದೃಷ್ಟಿಯಿಂದ ತಿಳಿಸುವುದುಂಟು. ಹೀಗಿರುವಾಗ ಪತ್ರಕರ್ತರ ಪ್ರವೇಶಕ್ಕೆ, ಚಲನವಲನಕ್ಕೆ ನಿರ್ಬಂಧ ವಿಧಿಸುವುದು ಅವರ ಮೂಲಭೂತ ಸ್ವಾತಂತ್ರ್ಯ ಮತ್ತು ಹಕ್ಕುಗಳಿಗೆ ಸಂಚಕಾರ ತಂದಂತೆಯೇ. ಸಚಿವಾಲಯ ಮತ್ತು ಸರಕಾರಿ ಕಚೇರಿಗಳಲ್ಲಿ ಮುಕ್ತ ಪ್ರವೇಶದ ಸ್ವಾತಂತ್ರ್ಯ ಹೊಂದಿರುವ ಪತ್ರಕರ್ತರಿಗೆ ಅರ್ಥ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪ್ರತಿಬಂಧಕಾಜ್ಞೆಯಿಂದ ಆಘಾತವಾಗಿದ್ದರೆ ಆಶ್ಚರ್ಯವಿಲ್ಲ. ಈ ಪ್ರತಿಬಂಧಕಾಜ್ಞೆ ಪ್ರಕಾರ, ಮಾನ್ಯತೆ ಪಡೆದ ವರದಿಗಾರರೂ ಪೂರ್ವಾನುಮತಿ ಪಡೆದು ಸಚಿವರು/ಅಧಿಕಾರಿಗಳನ್ನು ಭೇಟಿಮಾಡಬೇಕಾಗುತ್ತದೆ. ಅಂದರೆ ಪತ್ರಕರ್ತರ ಮುಕ್ತ ಸುದ್ದಿಮೂಲಗಳನ್ನು ಮುಚ್ಚುವುದೇ ಇದರ ಹಿಂದಿನ ಉದ್ದೇಶ. ಪತ್ರಕರ್ತರು ಪೂರ್ವಾನುಮತಿ ಪಡೆದು ಸಚಿವರು ಅಥವಾ ಅಧಿಕಾರಿಗಳು ನೀಡುವ ‘ಅಧಿಕೃತ ಮಾಹಿತಿ’ಗಳಿಂದಲೇ ತೃಪ್ತಿಪಟ್ಟುಕೊಳ್ಳಬೇಕಾಗುತ್ತದೆ. ಪತ್ರಕರ್ತರು ಇನ್ನು ಮುಂದೆ ‘‘ಅರ್ಥ ಸಚಿವಾಲಯದ ವಿಶ್ವಸನೀಯ ಮೂಲಗಳು ತಿಳಿಸಿವೆ’’ ಎಂದು ವರದಿ ಮಾಡುವಂತಿಲ್ಲ.

ಸಚಿವರಿಗೆ ಅಥವಾ ಅಧಿಕಾರಿಗಳಿಗೆ ಬೇಡವಾದ ಪತ್ರಕರ್ತರಿಗೆ ಪೂರ್ವಾನುಮತಿಯ ಭೇಟಿಯನ್ನೂ ನಿರಾಕರಿಸ ಬಹುದು. ಇದೊಂದು ದುರದೃಷ್ಟಕರ ಬೆಳವಣಿಗೆ. ಇವತ್ತು ಅರ್ಥ ಸಚಿವಾಲಯದಲ್ಲಿ ಶುರುವಾಗಿರುವ ಈ ಪಿಡುಗು ನಾಳೆ ಉಳಿದ ಸಚಿವಾಲಯಗಳಿಗೂ ವ್ಯಾಪಿಸಬಹುದು. ಪ್ರಪಂಚದ ಕಣ್ಣೆದುರು ಅಭಿವ್ಯಕ್ತಿ ಸ್ವಾತಂತ್ರ್ಯ ಕುರಿತಂತೆ ಭಾರತದ ಸ್ಥಾನಮಾನ ಕುಸಿಯುತ್ತಿರುವ ದಿನಗಳಲ್ಲಿ ಅರ್ಥ ಸಚಿವರು ಇಂತಹದೊಂದು ಪ್ರತಿಬಂಧಕಾಜ್ಞೆ ಹೊರಡಿಸಿರುವುದು ಒಂದು ಶೋಚನೀಯ ಬೆಳವಣಿಗೆ. ಅರ್ಥಸಚಿವಾಲಯಕ್ಕೆ ಮುಕ್ತ ಪ್ರವೇಶ ನಿರಾಕರಿಸುವ ಈ ವಿದ್ಯಮಾನ ವಿರಳವಾದ ಘಟನೆಯೇನಲ್ಲ. ಪತ್ರಕರ್ತರಿಗೆ ಪ್ರವೇಶ/ಭೇಟಿ ನಿರಾಕರಣೆ, ಸುದ್ದಿ/ಮಾಹಿತಿ ನಿರಾಕರಣೆ, ಪತ್ರಕರ್ತರ ವಿರುದ್ಧ ಅಧಿಕಾರಿಗಳು, ಸರಕಾರಿ ಸಂಸ್ಥೆಗಳು ಹಾಗೂ ಸರಕಾರಿ ಕೃಪಾಪೋಷಿತ ಸಂಘಟನೆಗಳು ತೋರುತ್ತಿರುವ ಆಕ್ರಮಣಕಾರಿ ಪ್ರವೃತ್ತಿ ಇವೆಲ್ಲವುಗಳ ಮೂಲಕ ಭಾರತದಲ್ಲಿ ಪತ್ರಿಕೆಗಳ ಧ್ಯೇಯ, ಕಾರ್ಯವ್ಯಾಪ್ತಿ ಮತ್ತು ಪ್ರಭಾವಗಳನ್ನು ಕುಗ್ಗಿಸುವ ವ್ಯವಸ್ಥಿತ ಹುನ್ನಾರ ನಡೆದಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಪತ್ರಿಕಾಗೋಷ್ಠಿ ನಡೆಸದಿರುವುದು, ಪತ್ರಕರ್ತರನ್ನು ಭೇಟಿ ಮಾಡದಿರುವುದು, ಭೇಟಿ ಮಾಡಿದ ಒಂದು ಸಂದರ್ಭದಲ್ಲೂ (ಚುನಾವಣಾ ಫಲಿತಾಂಶ ಪ್ರಕಟವಾದಾಗ) ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಕೊಡಲು ನಿರಾಕರಿಸಿರುವುದು ಮೇಲಿನ ಮಾತಿಗೆ ಸ್ಪಷ್ಟ ನಿದರ್ಶನವಾಗಬಲ್ಲದು. ಸರಕಾರಿ ಮಾಧ್ಯಮದ ಮೂಲಕವೇ ಪ್ರಜೆಗಳನ್ನು ತಲುಪುವ ಮೋದಿಯವರ ಧೋರಣೆ ಖಾಸಗಿ ಮಾಧ್ಯಮಗಳ ಬಗೆಗಿನ ದಿವ್ಯ ತಿರಸ್ಕಾರವಲ್ಲದೆ ಮತ್ತೇನು? ಪ್ರಸಕ್ತ ಪರಿಸ್ಥಿತಿ ಹೀಗಿರುವಾಗ ನರೇಂದ್ರ ಮೋದಿಯವರ ಸರಕಾರ ಆರ್‌ಎಸ್‌ಎಫ್ ವರದಿಯನ್ನು ಗಂಭೀರವಾಗಿ ಪರಿಗಣಿಸುತ್ತದೆ ಎಂದು ಯಾರಾದರೂ ಭಾವಿಸಿದ್ದರೆ ಅವರು ಕನಸು ಕಾಣುತ್ತಿದ್ದಾರೆ ಎಂದು ಹೇಳಬೇಕಾಗುತ್ತದೆ.

ಮಾನವ ಹಕ್ಕುಗಳು, ಕೋಮು ಹಿಂಸಾಚಾರ, ಧಾರ್ಮಿಕ ಅಸಹಿಷ್ಣುತೆ, ಅಭಿವ್ಯಕ್ತಿ ಸ್ವಾತಂತ್ರ್ಯ ಇಂತಹ ವಿಷಯಗಳಲ್ಲಿ ವಿದೇಶಗಳು ವ್ಯಕ್ತಪಡಿಸುವ ಕಳವಳಕಾರಿ ಅಭಿಪ್ರಾಯಗಳನ್ನು ಹಾಗೂ ಪ್ರಾಪಂಚಿಕ ಸಂಘ-ಸಂಸ್ಥೆಗಳ ವರದಿಗಳನ್ನು ಸಾಮಾನ್ಯವಾಗಿ ಭಾರತದ ಸಾರ್ವಭೌಮತ್ವದಲ್ಲಿ ಅನ್ಯರ ಹಸ್ತಕ್ಷೇಪ ಎಂದು ತಳ್ಳಿಹಾಕಲಾಗುತ್ತದೆ. ಇಂದಿನ ಅಖಂಡತೆಯ ಜಗತ್ತು ಇಂತಹ ಅಭಿಪ್ರಾಯ/ವರದಿಗಳಿಗೆ ಬೆಲೆ ಕೊಡುತ್ತದೆ, ಮಾನ್ಯ ಮಾಡುತ್ತದೆ, ಅದರಿಂದ ಭಾರತದ ಬಗ್ಗೆ ಪ್ರತಿಕೂಲಕರ ಪರಿಣಾಮಗಳಾಗುತ್ತವೆ ಎಂಬ ಸಂಗತಿ ಸರಕಾರಕ್ಕೆ ತಿಳಿಯದೇ ಇಲ್ಲ. ವಾಣಿಜ್ಯ-ಉದ್ಯಮ ವ್ಯವಹಾರಗಳಿಗೆ ಸಂಬಂಧಿಸಿದಂತೆ ವಿಶ್ವ ಬ್ಯಾಂಕಿನ ವಾರ್ಷಿಕ ವರದಿಯಲ್ಲಿ ಭಾರತ ಉನ್ನತ ಶ್ರೇಣಿಗಳಿಸಬೇಕೆಂಬ ಪ್ರಧಾನ ಮಂತ್ರಿಗಳ ತವಕ-ತಹತಹ, ದೃಢ ಸಂಕಲ್ಪಗಳ ಹಿಂದಿರುವುದು ಈ ಅರಿವೇ ಆಗಿದೆ. ವಾಣಿಜ್ಯ ವ್ಯವಹಾರ, ಬಂಡವಾಳ ಹೂಡಿಕೆಗೆ ಸಂಬಂಧಿಸಿದಂತೆ ಜಾಗತಿಕ ಮಟ್ಟದಲ್ಲಿ ಭಾರತದ ಕೀರ್ತಿಪ್ರತಿಷ್ಠೆಗಳು ವರ್ಧಿಸಬೇಕೆಂದು ಸರಕಾರ ಬಯಸುತ್ತದೆ. ಭಾರತ, ವಿಶ್ವ ನಾಯಕಮಣಿ ಆಗ ಬೇಕೆಂಬುದು ಮೋದಿಯವರ ಸರಕಾರದ ಮಹತ್ವಾಕಾಂಕ್ಷೆ.

ಈ ಎಲ್ಲ ಆಕಾಂಕ್ಷೆ,ಕಾಳಜಿ-ಕಳಕಳಿಗಳೂ ಮೆಚ್ಚತಕ್ಕವೇ. ಆದರೆ ಇವು ವಾಣಿಜ್ಯ ವ್ಯವಹಾರ, ಉದ್ಯಮ, ಬಂಡವಾಳ ಹೂಡಿಕೆ, ಆರ್ಥಿಕ ಸ್ಥಾನಮಾನಗಳಿಗೆ ಮಾತ್ರ ಸೀಮಿತವಾಗಬಾರದು. ಪ್ರಜಾಪ್ರಭುತ್ವ, ಬಹುತ್ವ, ಬಹುಸಂಸ್ಕೃತಿ, ಜಾತ್ಯತೀತತೆ, ಅಭಿವ್ಯಕ್ತಿ ಸ್ವಾತಂತ್ರ್ಯ, ಮುಕ್ತವಾದ, ಕ್ರಿಯಾತ್ಮಕವಾದ ಪತ್ರಿಕೆಗಳು ಇವೇ ಮೊದಲಾದ ಬಾಬ್ತುಗಳಲ್ಲೂ ಭಾರತ ವಿಶ್ವ ಮಟ್ಟದ ಕೀರ್ತಿ, ಪ್ರಶಂಸೆಗಳಿಗೆ ಭಾಜನವಾಗಬೇಕು ಎಂಬುದರತ್ತವೂ ಮೋದಿಯವರ ಸರಕಾರ ಗಮನಹರಿಸಬೇಕಾಗಿದೆ. ವಾಣಿಜ್ಯ ವ್ಯಹಾರ ಮತ್ತು ಬಂಡವಾಳ ಹೂಡಿಕೆ ಬಗ್ಗೆ ತೋರುತ್ತಿರುವ ಪ್ರೀತಿ, ಮಮಕಾರ, ಕಾಳಜಿಗಳನ್ನು ಇವುಗಳ ಬಗ್ಗೆಯೂ ತೋರಬೇಕಾಗಿದೆ. ಪತ್ರಿಕಾ ಸ್ವಾತಂತ್ರ್ಯ, ಮಾನವ ಹಕ್ಕುಗಳು, ಸ್ತ್ರೀ ಸಮಾನತೆ, ಮಕ್ಕಳ ಶೋಷಣೆ,ಮಹಿಳೆಯರು ಮತ್ತು ಮಕ್ಕಳ ಪೌಷ್ಟಿಕತೆ ಇತ್ಯಾದಿ ಕ್ಷೇತ್ರಗಳಲ್ಲೂ ಪ್ರಪಂಚದ ಕಣ್ಣಿನಲ್ಲಿ ಭಾರತದ ಸ್ಥಾನಮಾನ ಇಳಿಜಾರಿನಲ್ಲಿದೆ. ಭಾರತ ಎಲ್ಲ ರಂಗಗಳಲ್ಲೂ ವಿಶ್ವದ ಮುಕುಟಮಣಿಯಾಗಬೇಕಿದೆ ಎಂಬುದನ್ನು ಸರಕಾರ ಮನಗಾಣಬೇಕು.

Writer - ಜಿ.ಎನ್.ರಂಗನಾಥ ರಾವ್

contributor

Editor - ಜಿ.ಎನ್.ರಂಗನಾಥ ರಾವ್

contributor

Similar News