370ನೆ ವಿಧಿ ರದ್ದು: ರಾಷ್ಟ್ರಪ್ರಶಸ್ತಿ ವಿಜೇತ ಕಾಶ್ಮೀರಿ ಬಾಲಕನಿಗೆ ಪ್ರಶಸ್ತಿಯ ಮಾಹಿತಿಯೇ ಇಲ್ಲ!

Update: 2019-08-11 09:37 GMT

ಹೊಸದಿಲ್ಲಿ, ಆ.11: ‘ಹಮೀದ್’ ಎಂಬ ರಾಷ್ಟ್ರಪ್ರಶಸ್ತಿ ವಿಜೇತ ಹಿಂದಿ ಚಿತ್ರದಲ್ಲಿ ನಟಿಸಿ, ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ಉತ್ತಮ ಬಾಲನಟ ಪ್ರಶಸ್ತಿ ಪಡೆದ ತಲ್ಹಾ ಅರ್ಷದ್ ರೇಶಿ ಎಂಬ ಎಂಟು ವರ್ಷದ ಕಾಶ್ಮೀರಿ ಬಾಲಕನಿಗೆ ತನಗೆ ಪ್ರಶಸ್ತಿ ಬಂದ ಮಾಹಿತಿಯೇ ಬಹುಶಃ ಇನ್ನೂ ಸಿಕ್ಕಿಲ್ಲ.

ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿಯನ್ನು ಕೇಂದ್ರ ಸರ್ಕಾರ ರದ್ದುಪಡಿಸಿದ ಹಿನ್ನೆಲೆಯಲ್ಲಿ ಇಡೀ ರಾಜ್ಯದಲ್ಲಿ ಸಂಪರ್ಕ ಸಾಧನಗಳಿಗೆ ತಡೆ ವಿಧಿಸಲಾಗಿದ್ದು, ಚಿತ್ರಪ್ರಶಸ್ತಿಯ ಬಗೆಗಿನ ಮಾಹಿತಿಯನ್ನು ಬಾಲಕನಿಗೆ ತಲುಪಿಸಲು ಸಾಧ್ಯವಾಗಿಲ್ಲ.

ಅಮೀನ್ ಭಟ್ ಅವರ "ಫೋನ್‍ ನಂಬರ್ 786" ನಾಟಕದ ರೂಪಾಂತರವಾಗಿರುವ ಈ ಚಿತ್ರ, ತಂದೆ ನಾಪತ್ತೆಯಾದ ಬಾಲಕನ ಸುತ್ತ ಹೆಣೆಯಲ್ಪಟ್ಟಿದೆ. ಪುಟ್ಟ ಹುಡುಗ 786 ಸಂಖ್ಯೆಗೆ ಕರೆ ಮಾಡಿದಾಗ ಅದು ಸಿಆರ್‍ಪಿಎಫ್ ಜವಾನ್ ಅಭಯ್‍ಗೆ ಸಂಪರ್ಕಿಸುತ್ತದೆ. ಆತನನ್ನೇ ಬಾಲಕ ದೇವರು ಎಂದು ನಂಬುತ್ತಾನೆ. ಕಣಿವೆ ರಾಜ್ಯದಲ್ಲಿ ನಿಯೋಜಿಸಲ್ಪಟ್ಟ ಸೈನಿಕರು ಹಾಗೂ ಸ್ಥಳೀಯ ನಿವಾಸಿಗಳ ನಡುವಿನ ಭಾವನಾತ್ಮಕ ಬಂಧ ಹಾಗೂ ಎದುರಾಗುವ ಕಷ್ಟಕೋಟಲೆಗಳನ್ನು ಈ ಚಿತ್ರ ಸೆರೆ ಹಿಡಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News