ಕೇರಳದಲ್ಲಿ ಕಡಿಮೆಯಾದ ಮಳೆಯ ಅಬ್ಬರ: 60 ದಾಟಿದ ಸಾವಿನ ಸಂಖ್ಯೆ

Update: 2019-08-11 14:13 GMT

ತಿರುವನಂತಪುರ, ಆ.11: ಕೇರಳದ ಕೆಲವು ಪ್ರದೇಶಗಳಲ್ಲಿ ರವಿವಾರ ಮಳೆಯ ಅಬ್ಬರ ಕಡಿಮೆಯಾಗಿದ್ದು, ಕೋಝಿಕ್ಕೋಡ್ ಮತ್ತು ಅಳಪುಝಾ ಜಿಲ್ಲೆಗಳಲ್ಲಿ ಇನ್ನೆರಡು ಶವಗಳು ಪತ್ತೆಯಾಗುವುದರೊಂದಿಗೆ ಸತತ ಎರಡನೇ ವರ್ಷ ಮಳೆ ಮತ್ತು ನೆರೆಯ ಹಾವಳಿಗೆ ಬಲಿಯಾಗಿರುವವರ ಸಂಖ್ಯೆ 60ನ್ನು ದಾಟಿದೆ.

ರನ್‌ವೇ ಪ್ರದೇಶದಲ್ಲಿ ನೆರೆ ನೀರು ನಿಂತಿದ್ದರಿಂದ ಎರಡು ದಿನಗಳಿಂದ ಮುಚ್ಚಲಾಗಿದ್ದ ಕೊಚ್ಚಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ರವಿವಾರ ಮಧ್ಯಾಹ್ನ ತನ್ನ ಕಾರ್ಯಾಚರಣೆಗಳನ್ನು ಪುನರಾರಂಭಿಸಿದೆ.

 ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ರವಿವಾರ ಬೆಳಿಗ್ಗೆ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪರಿಸ್ಥಿತಿಯನ್ನು ಪುನರ್‌ ಪರಿಶೀಲಿಸಿದರು. ಇದೇ ವೇಳೆ ಕಾಂಗ್ರೆಸ್ ಸಂಸದ ರಾಜ್ಯಕ್ಕೆ ಎರಡು ದಿನಗಳ ಭೇಟಿಗಾಗಿ ಆಗಮಿಸಿದ್ದು,ಅವರ ಲೋಕಸಭಾ ಕ್ಷೇತ್ರವಾಗಿರುವ ವಯನಾಡ್ ತೀವ್ರ ಸಂಕಷ್ಟಕ್ಕೆ ಗುರಿಯಾಗಿದೆ. ಮಲಪ್ಪುರಂ ಜಿಲ್ಲೆಯ ನಿಲಂಬೂರಿನಲ್ಲಿ ಭೂಕುಸಿತದ ಅವಶೇಷಗಳಲ್ಲಿ ಇನ್ನೂ ಎರಡು ಶವಗಳು ಪತ್ತೆಯಾಗಿದ್ದು,ಇದರೊಂದಿಗೆ ಇಲ್ಲಿ ಸತ್ತವರ ಸಂಖ್ಯೆ 11ಕ್ಕೇರಿದೆ. ಕಳೆದ ನಾಲ್ಕು ದಿನಗಳಲ್ಲಿ ಮಲಪ್ಪುರಂ ಮತ್ತು ವಯನಾಡ್ ಜಿಲ್ಲೆಗಳಲ್ಲಿ ಸಂಭವಿಸಿದ ಎರಡು ಬೃಹತ್ ಭೂಕುಸಿತ ದುರಂತಗಳಲ್ಲಿ ಹಲವಾರು ಜನರು ಇನ್ನೂ ಮಣ್ಣಿನಡಿ ಸಿಲುಕಿದ್ದಾರೆ ಎಂಬ ಭೀತಿ ವ್ಯಕ್ತವಾಗಿದೆ. ರಾಜ್ಯದ ಎಂಟು ಜಿಲ್ಲೆಗಳಲ್ಲಿ 80 ಭೂಕುಸಿತಗಳು ಸಂಭವಿಸಿವೆ ಎಂದು ವಿಜಯನ್ ಶನಿವಾರ ಹೇಳಿದ್ದರು.

ಭೂಕುಸಿತದ ಅವಶೇಷಗಳಡಿ ಯಾರೊಬ್ಬರೂ ಬದುಕಿರುವ ಸಾಧ್ಯತೆ ತುಂಬ ಕಡಿಮೆ ಎಂದು ಪುನರ್‌ಪರಿಶೀಲನೆ ಸಭೆಯ ಬಳಿಕ ವಿಜಯನ್ ತಿಳಿಸಿದ್ದನ್ನು ಆಂಗ್ಲ ಮಾಧ್ಯಮವೊಂದು ಉಲ್ಲೇಖಿಸಿದೆ.

ಭಾರತೀಯ ಸೇನೆ,ನೌಕಾಪಡೆ,ತಟರಕ್ಷಣಾ ಪಡೆ,ಎನ್‌ಡಿಆರ್‌ಎಫ್ ಮತ್ತು ಪೊಲೀಸ್ ತಂಡಗಳು ಸ್ವಯಂಸೇವಕರು ಮತ್ತು ಮೀನುಗಾರರ ನೆರವಿನೊಂದಿಗೆ ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸುತ್ತಿವೆ. ಶನಿವಾರ ಸಂಜೆಯವರೆಗೆ ರಾಜ್ಯಾದ್ಯಂತ 1.65 ಲಕ್ಷಕ್ಕೂ ಅಧಿಕ ಜನರನ್ನು ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ.

ವಯನಾಡ್,ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಭಾರತೀಯ ಹವಾಮಾನ ಇಲಾಖೆಯು ಹೊರಡಿಸಿರುವ ರೆಡ್ ಅಲರ್ಟ್ ರವಿವಾರವೂ ಮುಂದುವರಿದಿದೆ. ಇಲಾಖೆಯು ಮುಂದಿನ ವಾರಕ್ಕಾಗಿ ರೆಡ್ ಅಲರ್ಟ್ ಹೊರಡಿಸಿಲ್ಲ, ಹೀಗಾಗಿ ಮಳೆಯ ಪ್ರಮಾಣವು ಸೋಮವಾರದಿಂದ ಕಡಿಮೆಯಾಗುವ ನಿರೀಕ್ಷೆಯಿದೆ. ಇಲಾಖೆಯು ಸೋಮವಾರಕ್ಕಾಗಿ ಆರು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಹೊರಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News