ಜಮ್ಮು-ಕಾಶ್ಮೀರ ದಲ್ಲಿ ಪೊಲೀಸ್, ಕಾನೂನು ಮತ್ತು ಸುವ್ಯವಸ್ಥೆ ಕೇಂದ್ರದ ಅಧೀನದಲ್ಲಿ
ಹೊಸದಿಲ್ಲಿ, ಆ.11: ಕೇಂದ್ರ ಸರಕಾರವು ಲೆಫ್ಟಿನೆಂಟ್ ಗವರ್ನರ್ (ಎಲ್-ಜಿ) ಮೂಲಕ ಕೇಂದ್ರಾಡಳಿತ ಪ್ರದೇಶ ಜಮ್ಮು-ಕಾಶ್ಮೀರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಪೊಲೀಸ್ ವ್ಯವಸ್ಥೆಯ ಮೇಲೆ ನೇರ ನಿಯಂತ್ರಣವನ್ನು ಹೊಂದಿರಲಿದೆ ಮತ್ತು ಭೂಮಿಯು ಚುನಾಯಿತ ಸರಕಾರದ ಅಧಿಕಾರ ವ್ಯಾಪ್ತಿಗೊಳಪಟ್ಟಿರುತ್ತದೆ ಎಂದು ಅಧಿಕಾರಿಗಳು ರವಿವಾರ ಇಲ್ಲಿ ತಿಳಿಸಿದರು.
ಜಮ್ಮು-ಕಾಶ್ಮೀರ ಪುನರ್‌ರಚನೆ ಕಾಯ್ದೆಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಶುಕ್ರವಾರ ಅಂಕಿತ ಹಾಕಿದ್ದು, ಜಮ್ಮು-ಕಾಶ್ಮೀರ ಮತ್ತು ಲಡಾಖ್ ಎರಡು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶಗಳಾಗಿ ಅ.31ರಂದು ಅಸ್ತಿತ್ವಕ್ಕೆ ಬರಲಿವೆ.
ಜಮ್ಮು-ಕಾಶ್ಮೀರದಲ್ಲಿ ಭೂಮಿಯ ಮೇಲೆ ಚುನಾಯಿತ ಸರಕಾರವು ನಿಯಂತ್ರಣ ಹೊಂದಿರಲಿದೆ. ಆದರೆ ಕೇಂದ್ರಾಡಳಿತ ಪ್ರದೇಶವಾಗಿರುವ ದಿಲ್ಲಿಯಲ್ಲಿ ಎಲ್-ಜಿ ಕೇಂದ್ರ ಸರಕಾರದ ಅಧೀನದಲ್ಲಿರುವ ದಿಲ್ಲಿ ಅಭಿವೃದ್ಧಿ ಪ್ರಾಧಿಕಾರದ ಮೂಲಕ ಭೂಮಿಯ ಮೇಲೆ ನಿಯಂತ್ರಣವನ್ನು ಹೊಂದಿದ್ದಾರೆ.
ಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶವು ಲೆಫ್ಟಿನೆಂಟ್ ಗವರ್ನರ್ ಅನ್ನು ಹೊಂದಿರಲಿದ್ದು, ಅದರ ವಿಧಾನಸಭೆಯ ಸದಸ್ಯ ಬಲ 107 ಆಗಿರುತ್ತದೆ. ಕ್ಷೇತ್ರ ಪುನರ್‌ವಿಂಗಡನೆಯ ಬಳಿಕ ಈ ಸಂಖ್ಯೆ 114ಕ್ಕೇರಲಿದೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ 24 ವಿಧಾನಸಭಾ ಸ್ಥಾನಗಳು ತೆರವಾಗಿಯೇ ಉಳಿಯಲಿವೆ.
ಜಮ್ಮು-ಕಾಶ್ಮೀರ ಪುನರ್‌ರಚನೆ ಕಾಯ್ದೆಯಂತೆ ವಿಧಾನಸಭೆಯು ಸಾರ್ವಜನಿಕ ಸುವ್ಯವಸ್ಥೆ ಮತ್ತು ಪೊಲೀಸ್ ವಿಷಯಗಳನ್ನು ಹೊರತುಪಡಿಸಿ ಇಡೀ ಅಥವಾ ಭಾಗಶಃ ಕೇಂದ್ರಾಡಳಿತ ಪ್ರದೇಶಕ್ಕಾಗಿ ಕಾನೂನುಗಳನ್ನು ರೂಪಿಸುವ ಅಧಿಕಾರವನ್ನು ಹೊಂದಿದೆ. ವಿಧಾನಸಭೆಗಳಿರುವ ದಿಲ್ಲಿ ಮತ್ತು ಪುದುಚೇರಿಗಳಲ್ಲಿಯೂ ಪೊಲೀಸ್ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಕೇಂದ್ರ ಸರಕಾರದ ಅಧೀನದಲ್ಲಿವೆ.
ಕೇಂದ್ರಾಡಳಿತ ಪ್ರದೇಶ ಲಡಾಖ್‌ನಲ್ಲಿ ಚುನಾಯಿತ ವಿಧಾನಸಭೆ ಇರುವುದಿಲ್ಲ. ಪೊಲೀಸ್,ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಭೂಮಿ ಎಲ್-ಜಿ ಅವರ ನೇರ ನಿಯಂತ್ರಣದಲ್ಲಿರುತ್ತವೆ.
ಅ.31ರಿಂದ ಜಮ್ಮು-ಕಾಶ್ಮೀರ ಉಚ್ಚ ನ್ಯಾಯಾಲಯವು ಉಭಯ ಕೇಂದ್ರಾಡಳಿತ ಪ್ರದೇಶಗಳಿಗೆ ಸಾಮಾನ್ಯ ಉಚ್ಚ ನ್ಯಾಯಾಲಯವಾಗಿ ಕಾರ್ಯ ನಿರ್ವಹಿಸಲಿದೆ.
ಜಮ್ಮ-ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ ಐಎಎಸ್ ಮತ್ತು ಐಪಿಎಸ್‌ನಂತಹ ಅಖಿಲ ಭಾರತ ಸೇವೆಗಳು ಮತ್ತು ಭ್ರಷ್ಟಾಚಾರ ನಿಗ್ರಹ ಘಟಕ (ಎಸಿಬಿ) ಎಲ್-ಜಿ ನಿಯಂತ್ರಣದಲ್ಲಿರುತ್ತವೆ. ಇವುಗಳ ಮೇಲೆ ಚುನಾಯಿತ ಸರಕಾರದ ಅಧಿಕಾರವಿರುವುದಿಲ್ಲ.