ಗೋಉತ್ಪನ್ನಗಳ ಸಂಶೋಧನೆಗೆ ಆರ್ಥಿಕ ಅಡಚಣೆ: ಪ್ರಗತಿ ಕಾಣದ ಕೇಂದ್ರದ ‘ಪಂಚಗವ್ಯ’ ಯೋಜನೆ

Update: 2019-08-11 15:52 GMT

 ಹೊಸದಿಲ್ಲಿ,ಆ.11: ಗೋ ಮೂತ್ರ ಸೇರಿದಂತೆ ಗೋಉತ್ಪನ್ನಗಳ ಕುರಿತು ವೈಜ್ಞಾನಿಕ ಸಂಶೋಧನೆ ನಡೆಸುವ ಉದ್ದೇಶದಿಂದ ಎರಡು ವರ್ಷಗಳ ಹಿಂದೆ ಕೇಂದ್ರ ಸರಕಾರ ಆರಂಭಿಸಿರುವ ಮಹತ್ವಾಕಾಂಕ್ಷಿ ಯೋಜನೆ ‘ಪಂಚಗವ್ಯ’ ಈವರೆಗೆ ಯಾವುದೇ ಪ್ರಗತಿಯನ್ನು ಸಾಧಿಸಿಲ್ಲ. ಈ ಯೋಜನೆಗಾಗಿ 100 ಕೋಟಿ ರೂ.ಗಳನ್ನು ನಿಗದಿಪಡಿಸಲಾಗಿದ್ದು, ನಾಲ್ಕು ಸಚಿವಾಲಯಗಳು ಒಟ್ಟಾಗಿ ಅದನ್ನು ಮಂಜೂರು ಮಾಡಬೇಕಾಗಿತ್ತು. ಆದರೆ ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವಾಲಯವು ಕೇವಲ 30 ಕೋಟಿರೂ. ಮಾತ್ರ ಮಂಜೂರು ಮಾಡಿದೆಯೆಂದು ದಿಲ್ಲಿ ಐಐಟಿಯ ಗ್ರಾಮೀಣ ಅಭಿವೃದ್ಧಿ ಹಾಗೂ ತಂತ್ರಜ್ಞಾನ ಕೇಂದ್ರದ ವರಿಷ್ಠ ಹಾಗೂ ಪಂಚಗವ್ಯ ಯೋಜನೆಯ ಸಂಶೋಧನೆ ಹಾಗೂ ವೈಜ್ಞಾನಿಕ ವೌಲ್ಯೀಕರಣ ಕುರಿತ ಸಂಚಾಲಕ ವಿ.ಕೆ. ವಿಜಯ್ ತಿಳಿಸಿದ್ದಾರೆ.

ಪಂಚಗವ್ಯ ಯೋಜನೆಯಲ್ಲಿ ಕೇಂದ್ರ ಕೃಷಿ ಸಚಿವಾಲಯ, ನವೀಕರಣಯೋಗ್ಯ  ಇಂಧನ, ಸಚಿವಾಲಯ, ಆಯುಶ್ ಸಚಿವಾಲಯ ಹಾಗೂ ಮಧ್ಯಮ, ಸಣ್ಣ ಹಾಗೂ ಕಿರು ಉದ್ಯಮಗಳ ಸಚಿವಾಲಯವು ಪಾಲ್ಗೊಂಡಿವೆಯಾದರೂ, ತಮ್ಮ ಪಾಲಿನ ಹಣವನ್ನು ಅವು ಇನ್ನಷ್ಟೇ ಮಂಜೂರುಗೊಳಿಸಬೇಕಾಗಿದೆಯೆಂದು ವಿಜಯ್ ತಿಳಿಸಿದರು.

‘‘ಈ ಯೋಜನೆಯಲ್ಲಿ ಯಾವುದೇ ಪ್ರಗತಿಯುಂಟಾಗಿಲ್ಲ. ಇದೀಗ ಗಿರಿರಾಜ್‌ಸಿಂಗ್ ನೇತೃತ್ವದಲ್ಲಿ ನೂತನ ಸಚಿವಾಲಯ (ಪಶುಸಂಗೋಪನೆ,ಡೈರಿ ಹಾಗೂ ಮೀನುಗಾರಿಕೆ) ಕಾರ್ಯಾರಂಭಿಸಿದೆ. ಅವರು ಯೋಜನೆಗೆ ಚಾಲನೆ ನೀಡಲಿದ್ದಾರೆಂದು ನಾನು ಭಾವಿಸುತ್ತೇನೆ’ ಎಂದವರು ಹೇಳಿದರು.

  ‘‘ಈ ಯೋಜನೆಗಾಗಿ ನಾವು 100 ಕೋಟಿ ರೂ. ನಿಗದಿಪಡಿಸಿದ್ದೇವೆ. ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆಯು 30 ಕೋಟಿ ರೂ. ಅನುಮೋದನೆ ನೀಡಿದೆ. ಆದರೆ ಇತರ ಸಚಿವಾಲಯಗಳು ನಿಧಿಗಳನ್ನು ಬಿಡುಗಡೆಗೊಳಿಸದೆ ಹೋದಲ್ಲಿ , ಅದು ಅನುಮೋದನೆ ನೀಡಲಾರದು. ಎಲ್ಲಾ ಸಚಿವಾಲಯಗಳು ಸಮಾನವಾಗಿ ದೇಣಿಗೆ ನೀಡಬೇಕಾಗಿದೆ ’’ ಎಂದು ವಿಜಯ್ ಹೇಳಿದರು.

    2017ರ ಎಪ್ರಿಲ್‌ನಲ್ಲಿ ಕೇಂದ್ರ ಸರಕಾರವು ಗೋಮೂತ್ರ ಸೇರಿದಂತೆ ಗೋ ಉತ್ಪನ್ನಗಳ ವೈಜ್ಞಾನಿಕ ಮೌಲ್ಯೀಕರಣವನ್ನು ನಡೆಸಲು ಆರೆಸ್ಸೆಸ್ ಹಾಗೂ ವಿಎಚ್‌ಪಿ ಜೊತೆ ಸಂಪರ್ಕ ಹೊಂದಿರುವ ಮೂವರು ಸದಸ್ಯರ ಸಮಿತಿಯನ್ನು ಸ್ಥಾಪಿಸಿತ್ತು.

 ಪೌಷ್ಟಿಕತೆ, ಆರೋಗ್ಯ ಹಾಗೂ ಕೃಷಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗೋವಿನ ಸಗಣಿ, ಗೋಮೂತ್ರ, ಹಾಲು, ಮೊಸರು ಹಾಗೂ ತುಪ್ಪ ಇವುಗಳ ಸಮ್ಮಿಶ್ರಣವಾದ ಪಂಚಗವ್ಯದ ವೈಜ್ಞಾನಿಕ ಮೌಲ್ಯೀಕರಣವನ್ನು ನಡೆಸುವ ಉದ್ದೇಶದಿಂದ ವಿವಿಧ ಯೋಜನೆಗಳನ್ನು ರೂಪಿಸುವುದಕ್ಕಾಗಿ ವಿಜ್ಞಾನ ಹಾಗೂ ತಂತ್ರಜ್ಞಾನ ಖಾತೆ ಸಚಿವರಾಗಿದ್ದ ಹರ್ಷವರ್ಧನ್ ನೇತತ್ವದಲ್ಲಿ ಸಮಿತಿಯ ರಚನೆಯಾಗಿತ್ತು.

 ಈ ಸಮಿತಿಯಲ್ಲಿ ಆರೆಸ್ಸೆಸ್ ಹಾಗೂ ವಿಶ್ವಹಿಂದೂಪರಿಷತ್‌ನ ಸಹಸಂಘಟನೆಗಳಾದ ವಿಜ್ಞ್ಞಾನ್ ಭಾರತಿ ಹಾಗೂ ಗೋ-ವಿಜ್ಞಾನ ಅನುಸಂಧಾನ ಕೇಂದ್ರದ ಮೂವರು ಸದಸ್ರು ಕೂಡಾ ಒಳಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News