ಇವಿಎಂ ತಿರುಚುವಿಕೆಯ ಆರೋಪದ ಹಿಂದೆ ಕ್ರಿಮಿನಲ್ ಉದ್ದೇಶ: ಮುಖ್ಯ ಚುನಾವಣಾ ಆಯುಕ್ತ ಅರೋರಾ ಅಸಮಾಧಾನ

Update: 2019-08-11 16:59 GMT

ಕೋಲ್ಕತಾ,ಆ.11: ಇವಿಎಂ ಯಂತ್ರಗಳನ್ನು ತಿರುಚಲಾಗುತ್ತಿದೆಯೆಂಬ ಆರೋಪಗಳು ನ್ಯಾಯಯುತವಾದುದಲ್ಲ ಹಾಗೂ ಕ್ರಿಮಿನಲ್ ಉದ್ದೇಶದಿಂದ ಕೂಡಿರುವುದಾಗಿ ಮುಖ್ಯ ಚುನಾವಣಾ ಆಯುಕ್ತ ಸುನೀಲ್ ಅರೋರಾ ರವಿವಾರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 ಇತರ ಉದ್ದೇಶಗಳಿಗೆ ಬಳಕೆಯಾಗುವ ಉಪಕರಣಗಳಂತೆಯೇ, ಇವಿಎಂ ಯಂತ್ರಗಳು ಕೂಡಾ ಕೆಲವೊಮ್ಮೆ ಸಮರ್ಪಕವಾಗಿ ಕಾರ್ಯನಿರ್ವಹಿಸದೇ ಇರುವ ಸಾಧ್ಯತೆ ಇದೆ. ಆದರೆ ಅದನ್ನು ತಿರುಚಲು ಸಾಧ್ಯವೇ ಇಲ್ಲವೆಂದು ಅರೋರಾ ತಿಳಿಸಿದರು.

     ಕೋಲ್ಕತಾದ ಐಐಎಂ (ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್)ನಲ್ಲಿ ನಡೆದ ವಾರ್ಷಿಕ ಔದ್ಯಮಿಕ ಶೃಂಗಸಭೆಯಲ್ಲಿ ಮಾತನಾಡುತ್ತಿದ್ದ ಅವರು, ‘‘ ಮತಯಂತ್ರ ದ ಅಸಮರ್ಪಕ ಕಾರ್ಯನಿರ್ವಹಣೆಗೂ, ಮತಯಂತ್ರ ತಿರುಚುವಿಕೆಗೂ ತುಂಬಾ ವ್ಯತ್ಯಾಸವಿದೆ. ಇಲೆಕ್ಟ್ರಾನಿಕ್ ಮತಯಂತ್ರವನ್ನು ನೀವು ತಿರುಚಲು ಸಾಧ್ಯವಿಲ್ಲ. ಆದರೆ ಕ್ರಿಮಿನಲ್ ಉದ್ದೇಶದೊಂದಿಗೆ ಇಂತಹ ಆರೋಪವನ್ನು ಮಾಡಿದಲ್ಲಿ ನಾವು ಅದನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದು ಅವರು ಹೇಳಿದರು.

      ಉನ್ನತ ಮಟ್ಟದ ಪ್ರತಿಷ್ಠೆಯನ್ನು ಹೊಂದಿರುವ ಸಾರ್ವಜನಿಕ ರಂಗದ ಸಂಸ್ಥೆಗಳು ಇವಿಎಂಗಳನ್ನು ರೂಪಿಸಿವೆಯೆಂದು ಆರೋರಾ ಹೇಳುತ್ತಾರೆ. ‘‘ ಇವಿಎಂಗಳನ್ನು ಸುರಕ್ಷಿತವಾದ ವಾತಾವರಣದಲ್ಲಿ ತಯಾರಿಸಲಾಗುತ್ತದೆ ಹಾಗೂ ಇಡೀ ನಿರ್ಮಾಣ ಪ್ರಕ್ರಿಯೆಯ ಮೇಲ್ವಿಚಾರಣೆಯನ್ನು ಪ್ರತಿಷ್ಠಿತ ಸಂಸ್ಥೆಗಳ ಉನ್ನತ ಮಟ್ಟದ ಪ್ರೊಫೆಸರ್‌ಗಳು ವಹಿಸಿದ್ದಾರೆ ’’ಎಂದವರು ಹೇಳಿದರು.

    ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕವೇ ಇವಿಎಂ ಮತಯಂತ್ರಗಳನ್ನು ತಿರುಚಲಾಗಿದೆಯೆಂಬ ಟಿಎಂಸಿ ಹಾಗೂ ಕಾಂಗ್ರೆಸ್ ಪಕ್ಷಗಳು ಸೇರಿದಂತೆ ಪ್ರತಿಪಕ್ಷಳನ್ನು ಆರೋಪಗಳ ಬಗ್ಗೆ ಪ್ರಸ್ತಾವಿಸಿದ ಅವರು, ‘‘ ಇದು ತೀರಾ ಅನ್ಯಾಯ. ನೀವು ಚುನಾವಣೆಯಲ್ಲಿ ಸೋತಾಗ, ಯಾಕೆ ಇವಿಎಂನ್ನು ಅಸ್ತ್ರವಾಗಿ ಮಾಡಿಕೊಳ್ಳುತ್ತೀರಿ ’’ಎಂದು ರ್ಮಾ ಚಾಟಿ ಬೀಸಿದರು.

 ‘‘ ಇಂತಹ ಆರೋಪಗಳು ಚುನಾವಣಾ ಆಯೋಗದ ಪ್ರಾಮಾಣಿಕತೆಯನ್ನು ಹಾಗೂ ಮತಯಂತ್ರಗಳನ್ನು ತಯಾರಿಸುವ ಪ್ರಕ್ರಿಯೆಯಲ್ಲಿ ಪಾಲ್ಗೊಂಡವರಿಗೆ ಘಾಸಿಯುಂಟು ಮಾಡುತ್ತವೆ. ಇವಿಎಂಗಳನ್ನು ತಿರುಚಲು ಸಾಧ್ಯವಿಲ್ಲ. ಆದರೆ ದೈನಂದಿನ ಬದುಕಿನಲ್ಲಿ ಬಳಕೆಯಾಗುವ ಇತರ ಯಾವುದೇ ಉಪಕರಣದ ಅವು ಕೂಡಾ ಸಮರ್ಪಕವಾಗಿ ಕಾರ್ಯನಿರ್ವಹಿಸದೆ ಇರಬಹುದು’’ ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News