ನಾವು ರಾಮಪುತ್ರ ಕುಶನ ವಂಶಸ್ಥರು ಎಂದ ಬಿಜೆಪಿ ಸಂಸದೆ!

Update: 2019-08-12 05:28 GMT

ಜೈಪುರ, ಆ. ೧೨: ರಘುವಂಶದ ಯಾರಾದರೂ ಇನ್ನೂ ಅಯೋಧ್ಯೆಯಲ್ಲಿ ವಾಸವಿದ್ದಾರೆಯೇ ಎಂದು ಸುಪ್ರೀಂಕೋರ್ಟ್ ಪ್ರಶ್ನಿಸಿದ ಬೆನ್ನಲ್ಲೇ, "ನಾವು ರಾಮನ ಮಗ ಕುಶನ ವಂಶಸ್ಥರು" ಎಂದು ಜೈಪುರ ರಾಜವಂಶದ ಕುಡಿ, ಬಿಜೆಪಿ ಸಂಸದೆ ದಿಯಾ ಕುಮಾರಿ ಹೇಳಿಕೊಂಡಿದ್ದಾರೆ.
ರಾಮನ ವಂಶಸ್ಥರು ವಿಶ್ವದ ಎಲ್ಲೆಡೆ ಇದ್ದಾರೆ ಹಾಗೂ ಅಯೋಧ್ಯೆ ವಿವಾದವನ್ನು ಶೀಘ್ರವಾಗಿ ಬಗೆಹರಿಸಬೇಕು ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.
"ರಾಮವಶಂಸ್ಥರು ಎಲ್ಲಿದ್ದಾರೆ ಎಂದು ನ್ಯಾಯಾಲಯ ಪ್ರಶ್ನಿಸಿದೆ...ರಾಮನ ಪುತ್ರ ಕುಶನ ಕುಟುಂಬಸ್ಥರಾದ ನಾವು ಸೇರಿದಂತೆ ರಾಮವಂಶಸ್ಥರು ವಿಶ್ವದ ಎಲ್ಲೆಡೆ ಇದ್ದಾರೆ" ಎಂದು ರಾಜಸಮಂದ್ ಸಂಸದೆಯಾಗಿರುವ ಅವರು ಹೇಳಿದ್ದಾರೆ. ರಾಜಕುಟುಂಬದಲ್ಲಿ ಲಭ್ಯವಿರುವ ಹಸ್ತಪ್ರತಿಗಳು, ವಂಶವೃಕ್ಷ ಹಾಗೂ ದಾಖಲೆಗಳ ಆಧಾರದಲ್ಲಿ ಈ ಪ್ರತಿಪಾದನೆ ಮಾಡುತ್ತಿರುವುದಾಗಿ ಸಮರ್ಥಿಸಿಕೊಂಡಿದ್ದಾರೆ.
ರಾಜಕೀಯವಾಗಿ ಅತ್ಯಂತ ಸೂಕ್ಷ್ಮವಾಗಿರುವ ಅಯೋಧ್ಯೆ ಪ್ರಕರಣದ ವಿಚಾರಣೆ ನಡೆಸುತ್ತಿರುವ ಐವರು ನ್ಯಾಯಾಧೀಶರ ಸುಪ್ರೀಂಕೋರ್ಟ್ ಪೀಠ ಶುಕ್ರವಾರ, ರಾಮ್ ಲಲ್ಲಾ ವಿರಾಜಮಾನ್ ಪರ ವಕೀಲ ಕೆ.ಪರಾಶರನ್ ಅವರನ್ನು, "ರಾಮವಂಶಸ್ಥರು ಇನ್ನೂ ಅಯೋಧ್ಯೆಯಲ್ಲಿ ಇದ್ದಾರೆಯೇ" ಎಂದು ಪ್ರಶ್ನಿಸಿತ್ತು. "ಈ ಬಗ್ಗೆ ನನಗೆ ಮಾಹಿತಿ ಇಲ್ಲ; ಪತ್ತೆ ಮಾಡುತ್ತೇನೆ" ಎಂದು ಪರಾಶರನ್ ಇದಕ್ಕೆ ಉತ್ತರಿಸಿದ್ದರು.
"ಪ್ರತಿಯೊಬ್ಬರಿಗೂ ರಾಮನ ಬಗ್ಗೆ ನಿಷ್ಠೆ ಇದೆ. ರಾಮಮಂದಿರ ಪ್ರಕರಣವನ್ನು ತ್ವರಿತವಾಗಿ ಇತ್ಯರ್ಥಪಡಿಸಿ ತೀರ್ಪು ನೀಡಬೇಕು ಎಂದು ಮನವಿ ಮಾಡುತ್ತಿದ್ದೇನೆ" ಎಂದು ದಿಯಾಕುಮಾರಿ ಹೇಳಿದ್ದಾರೆ. ಅಯೋಧ್ಯೆ ಪ್ರಕರಣದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಆದರೆ ಅಗತ್ಯಬಿದ್ದರೆ ನಾವು ರಾಮವಂಶಸ್ಥರು ಎನ್ನುವುದನ್ನು ನಿರೂಪಿಸಲು ಪೂರಕವಾದ ದಾಖಲೆಗಳನ್ನು ಪ್ರಸ್ತುತಪಡಿಸುತ್ತೇನೆ ಎಂದು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News