ಕುಸ್ತಿತಾರೆ ಬಬಿತಾ ಫೋಗಾಟ್ ಬಿಜೆಪಿಗೆ ಸೇರ್ಪಡೆ

Update: 2019-08-12 09:07 GMT

 ಹೊಸದಿಲ್ಲಿ, ಆ.12: ಭಾರತದ ಕುಸ್ತಿತಾರೆ ಬಬಿತಾ ಫೋಗಾಟ್ ಹಾಗೂ ಅವರ ತಂದೆ ಹಾಗೂ ಕೋಚ್ ಮಹಾವೀರ್ ಫೋಗಾಟ್ ತಮ್ಮ ತವರು ರಾಜ್ಯ ಹರ್ಯಾಣದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಸೋಮವಾರ ಬಿಜೆಪಿಗೆ ಸೇರ್ಪಡೆಯಾದರು.

 ಮೂರು ಬಾರಿ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನ ಹಾಗೂ ಒಂದು ಬಾರಿ ಬೆಳ್ಳಿ ಪದಕ ಜಯಿಸಿರುವ 29ರ ಹರೆಯದ ಬಬಿತಾ ಹಾಗೂ ಆಕೆಯ ತಂದೆಯಿಂದ ಪ್ರೇರಿತ ಆಮಿರ್ ಖಾನ್ ನಟನೆಯ ಬಾಲಿವುಡ್ ಚಿತ್ರ ‘ದಂಗಲ್’ ಭಾರೀ ಯಶಸ್ಸು ಕಂಡಿತ್ತು. ಬಬಿತಾ ಹಾಗೂ ಆಕೆಯ ಹಿರಿಯ ಸಹೋದರಿ ಪುರುಷರ ಪ್ರಾಬಲ್ಯದ ಕುಸ್ತಿಯಲ್ಲಿ ವಿಶ್ವಮಟ್ಟದಲ್ಲಿ ಪ್ರಾಬಲ್ಯ ಮೆರೆದಿದ್ದರು. ಮಹಾವೀರ್ ಫೋಗಾಟ್ ಈ ಇಬ್ಬರಿಗೆ ಕೋಚ್ ಆಗಿದ್ದರು.

ಈ ವರ್ಷ ರಾಜ್ಯದಲ್ಲಿ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಫೋಗಾಟ್ ಸೇರ್ಪಡೆ ಪಕ್ಷಕ್ಕೆ ಲಾಭವಾಗಲಿದೆ ಎನ್ನುವುದು ಬಿಜೆಪಿಯ ಲೆಕ್ಕಾಚಾರವಾಗಿದೆ. ಫೋಗಾಟ್ ಅವರು ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದುಪಡಿಸಿರುವ ವಿಚಾರವೂ ಸೇರಿದಂತೆ ಕೇಂದ್ರದ ಎಲ್ಲ ಹೆಜ್ಜೆಗೆ ಬೆಂಬಲ ವ್ಯಕ್ತಪಡಿಸಿದ್ದರು.

ದ್ರೋಣಾಚಾರ್ಯ ಪ್ರಶಸ್ತಿ ವಿಜೇತ ಮಹಾವೀರ್ ಫೋಗಾಟ್ ಕೂಡ ಬಿಜೆಪಿಗೆ ಸೇರ್ಪಡೆಯಾದರು. ಮಹಾವೀರ್ ಈ ಹಿಂದೆ ಮಾಜಿ ಮುಖ್ಯಮಂತ್ರಿ ಒ.ಪಿ. ಚೌಟಾಲರ ಪುತ್ರ ಅಜಯ್ ಚೌಟಾಲರ ಪಕ್ಷಕ್ಕೆ ಸೇರಿದ್ದರು. 90 ಸದಸ್ಯರ ಬಲ ಹೊಂದಿರುವ ಹರ್ಯಾಣ ವಿಧಾನಸಭಾ ಚುನಾವಣೆ ಈ ವರ್ಷಾಂತ್ಯದಲ್ಲಿ ನಡೆಯಲಿದೆ. ಪ್ರಸ್ತುತ ಮನೋಹರ ಖಟ್ಟರ್ ನೇತೃತ್ವದ ಬಿಜೆಪಿ ಸರಕಾರ ಅಧಿಕಾರದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News