ಕಾಶ್ಮೀರ ಕುರಿತು ಚಿದಂಬರಂ ಹೇಳಿಕೆ ಪ್ರಚೋದನಕಾರಿ: ಬಿಜೆಪಿ

Update: 2019-08-12 11:52 GMT

ಹೊಸದಿಲ್ಲಿ, ಆ.12: ಮುಸ್ಲಿಂ ಬಾಹುಳ್ಯದ ರಾಜ್ಯವಾಗಿರುವ ಕಾರಣ ಕೇಂದ್ರ ಸರಕಾರವು ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದೆ ಎಂಬ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಹೇಳಿಕೆಯು ಅತ್ಯಂತ ಬೇಜವಾಬ್ದಾರಿತನದ ಹಾಗೂ ಪ್ರಚೋದನಕಾರಿಯಾಗಿದೆ ಎಂದು ಬಿಜೆಪಿ ಸೋಮವಾರ ವಾಗ್ದಾಳಿ ನಡೆಸಿದೆ.

ಮಾಜಿ ಗೃಹ ಸಚಿವರಾದ ಚಿದಂಬರಂ ಅತ್ಯಂತ ಬೇಜವಾಬ್ದಾರಿತನದ ಹಾಗೂ ಪ್ರಚೋದನಕಾರಿಯ ಹೇಳಿಕೆ ನೀಡಿದ್ದಾರೆ ಎಂದು ಕಾನೂನು ಸಚಿವ ಹಾಗೂ ಬಿಜೆಪಿ ನಾಯಕ ರವಿ ಶಂಕರ್ ಪ್ರಸಾದ್ ಹೇಳಿದ್ದಾರೆ.

"ದಶಕಗಳ ಹಿಂದೆ ಕಾಂಗ್ರೆಸ್ ಮಾಡಿದ್ದ ದೊಡ್ಡ ತಪ್ಪನ್ನು ಸರಕಾರ ಸರಿಪಡಿಸಿದೆ. ರಾಷ್ಟ್ರೀಯ ಹಿತದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಂಡಿದ್ದರೂ, ಚಿದಂಬರಂ ಅವರ ಹೇಳಿಕೆ ಕಾಶ್ಮೀರ ವಿಚಾರಕ್ಕೆ ಕೋಮು ಬಣ್ಣ ಹಚ್ಚುವ ಪ್ರಯತ್ನದಂತೆ ಕಾಣುತ್ತಿದೆ'' ಎಂದು ಬಿಜೆಪಿ ನಾಯಕ, ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ.

ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿರುವ ಕೇಂದ್ರದ ನಿರ್ಧಾರವನ್ನು ಚೆನ್ನೈನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಚಿದಂಬರಂ ಖಂಡಿಸಿದ್ದರು.

‘‘ಒಂದು ವೇಳೆ ಜಮ್ಮು-ಕಾಶ್ಮೀರ ಹಿಂದೂ ಬಾಹುಳ್ಯದ ರಾಜ್ಯವಾಗಿದ್ದರೆ ಇಂತಹ ಹೆಜ್ಜೆ ಇಡುತ್ತಿರಲಿಲ್ಲ. ಆ ರಾಜ್ಯ ಮುಸ್ಲಿಂ ಬಾಹುಳ್ಯದಿಂದ ಕೂಡಿದೆ ಎಂಬ ಕಾರಣಕ್ಕೆ ಈ ನಿರ್ಧಾರ ತಾಳಿದೆ’’ ಎಂದು ಚಿದಂಬರಂ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News