ದಿಲ್ಲಿ-ಲಾಹೋರ್ ಬಸ್ ಸಂಚಾರ ರದ್ದು

Update: 2019-08-12 14:14 GMT

ಹೊಸದಿಲ್ಲಿ, ಆ.12: ಭಾರತ ಹಾಗೂ ಪಾಕಿಸ್ತಾನದ ಮಧ್ಯೆ ಸ್ನೇಹದ ಸಂಕೇತವಾಗಿ ಸಂಚರಿಸುತ್ತಿದ್ದ ದಿಲ್ಲಿ-ಲಾಹೋರ್ ಬಸ್ ಸೇವೆಯನ್ನು ಸೋಮವಾರದಿಂದ ಸ್ಥಗಿತಗೊಳಿಸಲಾಗಿದೆ.

ಸೋಮವಾರದಿಂದ ಫ್ರೆಂಡ್‌ಶಿಪ್ ಬಸ್‌ನ್ನು ರದ್ದುಪಡಿಸುವುದಾಗಿ ಪಾಕಿಸ್ತಾನದ ಹಿರಿಯ ಸಚಿವರೊಬ್ಬರು ಘೋಷಿಸಿದ್ದರು. ದಿಲ್ಲಿ ಸಾರಿಗೆ ಸಂಸ್ಥೆಯ ಬಸ್ ಸೋಮವಾರ ಬೆಳಗ್ಗೆ 6 ಗಂಟೆಗೆ ಲಾಹೋರ್‌ಗೆ ತೆರಳಬೇಕಾಗಿತ್ತು. ಆದರೆ, ಪಾಕಿಸ್ತಾನ ಬಸ್ ಸೇವೆಯನ್ನು ಸ್ಥಗಿತಗೊಳಿಸುವ ನಿರ್ಧಾರ ಕೈಗೊಂಡ ಕಾರಣ ಭಾರತ ಕೂಡ ತನ್ನ ಬಸ್ ಸಂಚಾರವನ್ನು ರದ್ದುಪಡಿಸಿದೆ.

ಕೇಂದ್ರ ಸರಕಾರವು ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ ಹಿನ್ನೆಲೆಯಲ್ಲಿ ಪಾಕಿಸ್ತಾನ ಲಾಹೋರ್-ದಿಲ್ಲಿ ಬಸ್ ಸೇವೆಯನ್ನು ರದ್ದುಪಡಿಸಿತ್ತು.

 ಶನಿವಾರ ಬೆಳಗ್ಗೆ ದಿಲ್ಲಿಯಿಂದ ಲಾಹೋರ್‌ಗೆ ಇಬ್ಬರು ಪ್ರಯಾಣಿಕರನ್ನು ಹೊತ್ತ ಬಸ್ ತೆರಳಿತ್ತು. ಅದೇ ದಿನ ಸಂಜೆ ಲಾಹೋರ್‌ನಿಂದ 12 ಪ್ರಯಾಣಿಕರನ್ನು ಹೊತ್ತ ಬಸ್ ದಿಲ್ಲಿಗೆ ತಲುಪಿತ್ತು. ರವಿವಾರ ಬಸ್ ಸಂಚಾರ ಇರಲಿಲ್ಲ.

1999ರ ಫೆಬ್ರವರಿಯಲ್ಲಿ ಮೊದಲ ಬಾರಿ ಉಭಯ ದೇಶಗಳ ಮಧ್ಯೆ ಬಸ್ ಸೇವೆ ಆರಂಭವಾಗಿತ್ತು. 2001ರಲ್ಲಿ ಸಂಸತ್ ಮೇಲೆ ಉಗ್ರರ ದಾಳಿ ನಡೆದ ಬಳಿಕ ಬಸ್ ಸಂಚಾರ ನಿಲ್ಲಿಸಲಾಗಿತ್ತು. 2003ರ ಜುಲೈನಲ್ಲಿ ಮತ್ತೆ ಆರಂಭವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News