ಬುಡಕಟ್ಟು ಸಮುದಾಯದ ಹಾಕಿ ಆಟಗಾರ್ತಿಯರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

Update: 2019-08-13 15:52 GMT

ರಾಂಚಿ, ಆ.13: ಜಾರ್ಖಂಡ್‌ನ ಸಿಮ್ಡೇಗಾ ಜಿಲ್ಲೆಯಲ್ಲಿ ಬುಡಕಟ್ಟು ಸಮುದಾಯದ ಇಬ್ಬರು ಹಾಕಿ ಆಟಗಾರ್ತಿಯರ ಮೃತದೇಹ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಸುನಂದಿನಿ ಬಾಗೆ(23 ವರ್ಷ) ಹಾಗೂ ಶ್ರದ್ಧಾ ಸೊರೆಂಗ್(18 ವರ್ಷ) ಶನಿವಾರದಿಂದ ನಾಪತ್ತೆಯಾಗಿದ್ದರು. ರವಿವಾರ ಮೃತದೇಹ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇವರನ್ನು ಕೊಲೆ ಮಾಡಲಾಗಿದೆ ಎಂದು ಕುಟುಂಬದ ಸದಸ್ಯರು ದೂರಿದ್ದಾರೆ.

ಶ್ರದ್ಧಾ ಜಾರ್ಖಂಡ್ ನಿವಾಸಿಯಾಗಿದ್ದರೆ, ಸುನಂದಿನಿ ಒಡಿಶಾ ಮೂಲದವರು. ಇವರಿಬ್ಬರೂ ಜೊತೆಯಾಗಿ ರೂರ್ಕೆಲಾದಲ್ಲಿರುವ ಹಾಕಿ ತರಬೇತಿ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದರು. ಶನಿವಾರ ಸಂಜೆ ತರಬೇತಿ ಮುಗಿಸಿ ಹೊರಟವರು ಮನೆಗೆ ಮರಳಿರಲಿಲ್ಲ ಎಂದು ದೂರು ನೀಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಹಲವರನ್ನು ವಿಚಾರಣೆ ನಡೆಸಿದ್ದು ಮಹತ್ವದ ಮಾಹಿತಿ ಕಲೆಹಾಕಿದ್ದೇವೆ. ಮರಣೋತ್ತರ ಪರೀಕ್ಷೆಯ ವರದಿ ಕೈಸೇರಿದ ಬಳಿಕ ಇನ್ನಷ್ಟು ಸ್ಪಷ್ಟ ಚಿತ್ರಣ ದೊರಕಲಿದೆ ಎಂದು ಪೊಲೀಸ್ ಅಧೀಕ್ಷಕ ಸಂಜೀವ್ ಕುಮಾರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News