ಒಬ್ಬರಿಗೆ ಒಂದೇ ಹುದ್ದೆ: ಬೇಡಿಕೆ ಬಗ್ಗೆ ಶೀಘ್ರ ಸೋನಿಯಾ ನಿರ್ಧಾರ

Update: 2019-08-13 16:31 GMT

ಹೊಸದಿಲ್ಲಿ, ಆ.13: ಕಾಂಗ್ರೆಸ್ ಪಕ್ಷದಲ್ಲಿ ಒಬ್ಬ ವ್ಯಕ್ತಿ ಹಲವು ಹುದ್ದೆಗಳನ್ನು ಹೊಂದಿರುವ ವಿಷಯದಲ್ಲಿ ಕೆಲವರು ಅಸಮಾಧಾನ ಸೂಚಿಸಿ ಎಲ್ಲರಿಗೂ ಅವಕಾಶ ದೊರಕಬೇಕು ಎಂಬ ಬೇಡಿಕೆ ಮುಂದಿರಿಸಿದ ಹಿನ್ನೆಲೆಯಲ್ಲಿ ಈ ಕುರಿತು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಶೀಘ್ರ ನಿರ್ಧರಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಸಮತೋಲನ ರೂಪಿಸಿ, ಪಕ್ಷಕ್ಕಾಗಿ ದಣಿವಿಲ್ಲದೆ ದುಡಿದಿರುವ ಇತರ ನಾಯಕರಿಗೂ ಹೆಚ್ಚಿನ ಅವಕಾಶ ಒದಗಿಸುವ ನಿಟ್ಟಿನಲ್ಲಿ ಸೋನಿಯಾ ಗಾಂಧಿ ನಿರ್ಧಾರವೊಂದನ್ನು ಕೈಗೊಳ್ಳಲಿದ್ದಾರೆ ಎಂದು ಪಕ್ಷದ ಮುಖಂಡರೊಬ್ಬರು ಹೇಳಿದ್ದಾರೆ. ರಾಜ್ಯ ಸಭಾ ಸದಸ್ಯ ಗುಲಾಂ ನಬಿ ಆಝಾದ್, ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ, ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ನಿತಿನ್ ರಾವತ್, ರಾಜಸ್ತಾನದ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಸೇರಿದಂತೆ ಹಲವು ಪ್ರಮುಖರು ಈಗ ಒಂದಕ್ಕಿಂತ ಹೆಚ್ಚಿನ ಹುದ್ದೆ ಹೊಂದಿದ್ದಾರೆ.

ಆಝಾದ್ ರಾಜ್ಯಸಭೆಯಲ್ಲಿ ವಿಪಕ್ಷ ನಾಯಕನ ಜೊತೆಗೆ, ಪ್ರಧಾನ ಕಾರ್ಯದರ್ಶಿ ಹಾಗೂ ಹರ್ಯಾಣ ರಾಜ್ಯದ ಉಸ್ತುವಾರಿಯಾಗಿದ್ದಾರೆ. ಸಚಿನ್ ಪೈಲಟ್ ಉಪಮುಖ್ಯಮಂತ್ರಿ ಜೊತೆಗೆ ರಾಜಸ್ತಾನ ಕಾಂಗ್ರೆಸ್‌ನ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಮಲನಾಥ್ ಮಧ್ಯಪ್ರದೇಶದ ಮುಖ್ಯಮಂತ್ರಿಯ ಜೊತೆಗೆ ಮಧ್ಯಪ್ರದೇಶ ಕಾಂಗ್ರೆಸ್‌ನ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಪಟೋಲೆ ಕಿಸಾನ್ ಕಾಂಗ್ರೆಸ್ ಅಧ್ಯಕ್ಷತೆಯ ಜೊತೆಗೆ ಮಹಾರಾಷ್ಟ್ರ ದಲ್ಲಿ ಪ್ರಚಾರ ಸಮಿತಿಯ ಸದಸ್ಯನಾಗಿದ್ದಾರೆ. ರಾವತ್ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷತೆಯ ಜೊತೆಗೆ ಮಹಾರಾಷ್ಟ್ರ ಕಾಂಗ್ರೆಸ್‌ನ ಉಸ್ತುವಾರಿಯಾಗಿದ್ದಾರೆ. ಮಧ್ಯಪ್ರದೇಶ ಸರಕಾರದಲ್ಲಿ ಸಚಿವರಾಗಿರುವ ಉಮಾರ್ ಸಿಂಗಾರ್ , ರಾಜ್ಯ ಕಾಂಗ್ರೆಸ್‌ನ ಉಪ ಉಸ್ತುವಾರಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News