ಗಾಯಕ ಮಿಕಾ ಸಿಂಗ್ ಮೇಲೆ ನಿಷೇಧ ಹೇರಿದ ಸಿನೆಮಾ ಉದ್ಯೋಗಿಗಳ ಸಂಘ

Update: 2019-08-14 05:59 GMT

ಹೊಸದಿಲ್ಲಿ: ಪಾಕಿಸ್ತಾನದ ಕರಾಚಿಯಲ್ಲಿ ಪ್ರದರ್ಶನ ನೀಡಿದ ಗಾಯಕ ಮಿಕಾ ಸಿಂಗ್ ಅವರಿಗೆ ಅಖಿಲ ಭಾರತ ಸಿನೆಮಾ ಉದ್ಯೋಗಿಗಳ ಸಂಘ ಬಹಿಷ್ಕಾರ ಹೇರಿದೆ. ಪಾಕಿಸ್ತಾನದ ಮಾಜಿ ಅಧ್ಯಕ್ಷ ಜನರಲ್ ಪರ್ವೆಝ್ ಮುಷರಫ್ ಅವರ ಹತ್ತಿರದ ಸಂಬಂಧಿಯೊಬ್ಬರು ಪಾಕಿಸ್ತಾನದಲ್ಲಿ ಮಿಕಾ ಸಿಂಗ್ ಕಾರ್ಯಕ್ರಮ ಆಯೋಜಿಸಿದ್ದರು.

"ಎಲ್ಲಾ ಚಿತ್ರ ನಿರ್ಮಾಣ ಸಂಸ್ಥೆಗಳು, ಸಂಗೀತ ಕಂಪೆನಿಗಳು ಹಾಗೂ ಆನ್ಲೈನ್ ಮ್ಯೂಸಿಕ್ ಕಂಟೆಂಟ್ ಪೂರೈಕೆದಾರರ ಜತೆಗೆ ಅವರಿಗಿರುವ ನಂಟನ್ನು ಸಂಘವು ಬಹಿಷ್ಕರಿಸುತ್ತದೆ,'' ಎಂದು  ಸಂಘದ ಅಧ್ಯಕ್ಷ  ಸುರೇಶ್ ಶ್ಯಾಮಲಾಲ್ ಗುಪ್ತಾ ಹೇಳಿದ್ದಾರೆ.

ಸಂಘವು  ಗಾಯಕನ ವಿರುದ್ಧ ಬೇಷರತ್ ನಿಷೇಧ ಹೇರಿತಲ್ಲದೆ ಮನರಂಜನಾ ಸಂಸ್ಥೆಗಳ ಜತೆ ಅವರಿಗಿರುವ ಎಲ್ಲಾ ಚಲನಚಿತ್ರ ಹಾಗೂ ಸಂಗೀತ ಕಾಂಟ್ರಾಕ್ಟ್ ಗಳಿಂದಲೂ ಅವರನ್ನು ಬಹಿಷ್ಕರಿಸಲು ನಿರ್ಧರಿಸಿದೆ.

"ಮಿಕಾ ಸಿಂಗ್ ಜತೆ ಯಾರೂ ಕೆಲಸ ಮಾಡದಂತೆ ಸಂಘ ನೋಡಿಕೊಳ್ಳುವುದು, ಒಂದು ವೇಳೆ ಯಾರಾದರೂ ಅವರ ಜತೆ ಕೆಲಸ ಮಾಡಿದರೆ ಕಾನೂನು ಕ್ರಮ ಎದುರಿಸಬೇಕಾಗಬಹುದು,'' ಎಂದು ಸಂಘ ಎಚ್ಚರಿಸಿದೆ.

"ಭಾರತ ಮತ್ತು ಪಾಕಿಸ್ತಾನ ದೇಶಗಳ ನಡುವೆ ಉದ್ವಿಗ್ನತೆಯಿರುವಾಗ ದೇಶದ ಮೇಲಿನ ಅಭಿಮಾನಕ್ಕಿಂತ ಹಣವೇ ಮಿಕಾ ಸಿಂಗ್ ಅವರಿಗೆ ಮುಖ್ಯವಾಗಿ ಹೋಯಿತು,'' ಎಂದೂ ಸಂಘ ಹೇಳಿತಲ್ಲದೆ ಈ ವಿಚಾರದಲ್ಲಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಹಸ್ತಕ್ಷೇಪಕ್ಕೂ ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News