'ದಾಭೋಲ್ಕರ್ ಹತ್ಯೆ ಸಂಚು ಹೂಡುವಲ್ಲಿ ಸನಾತನ ಸಂಸ್ಥೆಯ ಸದಸ್ಯ ವಿಕ್ರಮ್ ಭಾವೆ ಪ್ರಮುಖ ಪಾತ್ರ ವಹಿಸಿದ್ದ'

Update: 2019-08-14 08:25 GMT
ನರೇಂದ್ರ ದಾಭೋಲ್ಕರ್

ಪುಣೆ, ಆ. 14 : ವಿಚಾರವಾದಿ ನರೇಂದ್ರ ದಾಭೋಲ್ಕರ್  ಹತ್ಯೆಗೆ ಸಂಚು ಹೂಡುವಲ್ಲಿ ಸನಾತನ ಸಂಸ್ಥೆಯ ಸದಸ್ಯ ವಿಕ್ರಮ್ ಭಾವೆ  ಪ್ರಮುಖ ಪಾತ್ರ ವಹಿಸಿದ್ದ ಹಾಗೂ ಹಂತಕರಿಗೆ ಸ್ಥಳಾನ್ವೇಷಣೆ ನಡೆಸಿ ಪರಾರಿಯಾಗುವ ದಾರಿ ಕಂಡುಕೊಳ್ಳಲು ಸಹಾಯ ಮಾಡಿದ್ದ ಎಂದು ಪುಣೆ ನ್ಯಾಯಾಲಯದ ಮುಂದೆ ಮಂಗಳವಾರ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಶನ್ ಪ್ರಕಾಶ್ ಸೂರ್ಯವಂಶಿ ಹೇಳಿದರು.

ಮೇ ತಿಂಗಳಲ್ಲಿ ಮುಂಬೈ ಮೂಲದ ವಕೀಲ ಸಂಜೀವ್ ಪುನಲೇಕರ್ (54) ಜತೆಗೆ ಬಂಧನಕ್ಕೊಳಗಾಗಿದ್ದ ಭಾವೆ (34) ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ಸಂಬಂಧ ಸೂರ್ಯವಂಶಿ ಮೇಲಿನ ಮಾಹಿತಿ ನೀಡಿದರು. ಪುನಲೇಕರ್ ಗೆ  ನ್ಯಾಯಾಲಯ ಜುಲೈ 5ರಂದು ಜಾಮೀನು ನೀಡಿತ್ತೆಂಬುದನ್ನು ಇಲ್ಲಿ ಸ್ಮರಿಸಬಹುದು.

''ಭಾವೆ ಇಬ್ಬರು ಶಂಕಿತ ಹಂತಕರಾದ ಸಚಿನ್ ಅಂದೂರೆ ಹಾಗೂ ಶರದ್ ಕಲಸ್ಕರ್ ಜತೆ ಬೈಕಿನಲ್ಲಿ ತೆರಳಿ ಸ್ಥಳ ಪರಿಶೀಲನೆ ನಡೆಸಲು ಸಹಕರಿಸಿದ್ದಲ್ಲದೆ ಕೊಲೆ ನಡೆಸಿ ಪರಾರಿಯಾಗುವ ದಾರಿಯ ಬಗ್ಗೆ ಹಾಗೂ ವಾಹನವನ್ನು ಎಲ್ಲಿ ತ್ಯಜಿಸಿ ಪರಾರಿಯಾಗಬೇಕೆಂಬ ಬಗ್ಗೆಯೂ ಅವರಿಗೆ ಸಹಾಯ ಮಾಡಿದ್ದರಿಂದ ಈ ಹತ್ಯೆಗೆ ಸಂಚು ಹೂಡುವಲ್ಲಿ ಭಾವೆ ಪಾಲುದಾರನಾದಂತಾಗಿದೆ'' ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ವಾದಿಸಿದ್ದಾರೆ.

''ಭಾವೆ ಬಾಂಬ್ ಸ್ಪೋಟ ಪ್ರಕರಣವೊಂದರಲ್ಲೂ ಆರೋಪಿಯಾಗಿದ್ದು, ಈ ಪ್ರಕರಣದಲ್ಲಿ ಜಾಮೀನು ದೊರೆತ ನಂತರ ದಾಭೋಲ್ಕರ್ ಹತ್ಯೆ ಷಡ್ಯಂತ್ರ ಹೂಡುವಲ್ಲಿ ಶಾಮೀಲಾಗಿದ್ದ'' ಎಂದೂ ಅವರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲೂ ಆರೋಪಿಯಾಗಿರುವ ಶರದ್ ಕಲಸ್ಕರ್ ಕರ್ನಾಟಕ ಪೊಲೀಸರಿಗೆ ವಿಚಾರಣೆ ವೇಳೆ ನೀಡಿದ ಮಾಹಿತಿಯನ್ನಾಧರಿಸಿ ಸಿಬಿಐ ಭಾವೆ ಹಾಗೂ ಪುನಲೇಕರ್ ಅವರನ್ನು ಬಂಧಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News