ಹೋರಾಟದ ಸಂಕೇತ ಅರ್ಕುಳದ ಡಾ.ಎಫ್.ಎಚ್.ಒಡೆಯರ್

Update: 2019-08-15 08:19 GMT

ಬಂಟ್ವಾಳ, ಆ.14: ಒಡೆಯರ್ ಮೈಸೂರು ಸಂಸ್ಥಾನವನ್ನು ಆಳಿದ ರಾಜವಂಶ. ಸ್ವಾತಂತ್ರದ ನಂತರ ಭಾರತದ ಗಣರಾಜ್ಯಕ್ಕೆ ಮೈಸೂರು ಸಂಸ್ಥಾನ ಸೇರಿದ ಬಳಿಕ ಒಡೆಯರ್ ವಂಶದ ಆಡಳಿತ ಕೊನೆಗೊಂಡಿತು. ದಕ್ಷಿಣ ಭಾರತದಲ್ಲಿ ಸ್ವಾತಂತ್ರಕ್ಕಾಗಿ ಹೋರಾಟ ಮಾಡಿದವರಲ್ಲಿ ಹಲವರು ಇತಿಹಾಸದ ಪುಟ ಸೇರಿದರೆ, ಇನ್ನು ಸ್ಥಳೀಯ ಸ್ವಾತಂತ್ರ ಹೋರಾಟಗಾರರನ್ನು ಗುರುತಿಸಲು ಸಾಧ್ಯವಾಗಿಲ್ಲ. ಇತಿಹಾಸ ಪುಟಕ್ಕೆ ಸೇರದವರಲ್ಲಿ ಸಾಮಾಜಿಕ ಸಮನ್ವಯತೆಯ ಸ್ವಾತಂತ್ರ ಹೋರಾಟದ ಸಂಕೇತವಾಗಿದ್ದ ಅರ್ಕುಳದ ಡಾ.ಎಫ್.ಎಚ್.ಒಡೆಯರ್ ಕೂಡಾ ಒಬ್ಬರು.

1920ರಲ್ಲಿ ಮಹಾತ್ಮ ಗಾಂಧೀಜಿ (ಮಂಗಳೂರಿನ ಮೊದಲ ಭೇಟಿ) ಮತ್ತು ಶೌಕತ್ ಅಲಿ ಅವರ ಮಂಗಳೂರಿನ ಮೊದಲ ಭೇಟಿಯು ತುಳುನಾಡಿನಲ್ಲಿ ದೇಶಪ್ರೇಮ, ಸ್ವಾತಂತ್ರದ ಕಿಚ್ಚನ್ನು ಹಚ್ಚಿತ್ತು. ಗಾಂಧೀಜಿಯವರ ಐತಿಹಾಸಿಕ ಭಾಷಣದಿಂದ ಪ್ರೇರಿತರಾಗಿ ಸ್ವಾತಂತ್ರ ಹೋರಾಟಕ್ಕೆ ಧುಮುಕಿದ ಮುಸ್ಲಿಮ್ ಯುವಕರ ಪೈಕಿ ಎಫ್.ಎಚ್. ಒಡೆಯರ್ ಕೂಡಾ ಒಬ್ಬರಾಗಿದ್ದಾರೆ. ಒಡೆಯರ್ ಕರ್ನಾಟಕದ ಬಹುತೇಕ ಪ್ರದೇಶಗಳಲ್ಲಿ ಓಡಾಡಿ ತನ್ನ ಭಾಷಣದ ಮೂಲಕ ಸ್ವಾತಂತ್ರ ಹೋರಾಟದಲ್ಲಿ ನೇರವಾಗಿ ಪಾಲ್ಗೊಂಡಿದ್ದರು. ವೃತ್ತಿಯಲ್ಲಿ ವೈದ್ಯರಾಗಿದ್ದ ಡಾ.ಒಡೆಯರ್, ಸ್ವಾತಂತ್ರ ಹೋರಾಟದ ಜೊತೆಗೆ ಹಾಸನ ಹಾಗೂ ಮಂಗಳೂರಿನಲ್ಲಿ ಚಿಕಿತ್ಸಾಲಯವನ್ನೂ ತೆರೆದು ಜನಸೇವೆ ಮಾಡುತ್ತಿದ್ದರು. ಅದಲ್ಲದೆ, ತುಳುನಾಡಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಧೈರ್ಯವಾಗಿ ಎದುರಿಸುವ ಮೂಲಕ ಸ್ವಾತಂತ್ರ ಹೋರಾಟದ ಸಂಕೇತವಾಗಿದ್ದರು.

ಸುಂದರ ವಿನ್ಯಾಸದ ಮಹಡಿ ಮನೆ:

ಡಾ.ಎಫ್.ಎಚ್.ಒಡೆಯರ್ 1903 ಮಾರ್ಚ್ 15ರಂದು ಬಂಟ್ವಾಳ ತಾಲೂಕಿನ ಫರಂಗಿಪೇಟೆ ಸಮೀಪದ ಮಂಗಳೂರು ಹೊರವಲಯದ ಅರ್ಕುಳ ಎಂಬಲ್ಲಿ ಶ್ರೀಮಂತ ಬ್ಯಾರಿ ಸಮುದಾಯದ ಮನೆತನದಲ್ಲಿ ಜನಿಸಿದವರು. ಅರ್ಕುಳದಲ್ಲೇ ಪ್ರಾಥಮಿಕ ವಿದ್ಯಾಭ್ಯಾಸವನ್ನು ಪೂರೈಸಿದ್ದರು. ಸದ್ಯ ಅವರ ನೆನಪಿಗಾಗಿ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬಂಟ್ವಾಳ ದಾರಿಯ ಅರ್ಕುಳ ಎಂಬಲ್ಲಿ ಬಳಿ ಒಡೆಯರ್‌ಗೆ ಸೇರಿದ ಮನೆಯೊಂದಿದೆ. ಇದು ಅತ್ಯಂತ ಹಳೆಯ, ಸುಂದರವಾದ ವಿನ್ಯಾಸದ ಮಹಡಿ ಮನೆಯಾಗಿದ್ದು, ಇದು ಒಡೆಯರ್ ಅವರ ಹುಟ್ಟು ಮನೆಯೂ ಹೌದು. ಅಲ್ಲದೆ, ಇವರ ಮನೆತನಕ್ಕೆ ಸೇರಿದ 16 ಮನೆಗಳು ಮಂಗಳೂರಿನ ಬಂದರ್ ಪ್ರದೇಶಗಳಲ್ಲಿವೆ ಎಂದು ಮಾಹಿತಿ ನೀಡುತ್ತಾರೆ ಒಡೆಯರ್ ಮನೆತನದ ಸದಸ್ಯ ಸಾಜಿದ್ ಒಡೆಯರ್ ಅರ್ಕುಳ.


ನನ್ನ ಅಪ್ಪನ ಅಜ್ಜ ಒಡೆಯರ್ ಅವರು ಸ್ವಾತಂತ್ರ ಹೋರಾಟದ ಜೊತೆಗೆ ಶಿಕ್ಷಣ, ಆಯುರ್ವೇದ ವೈದರಾಗಿ ಸೇವೆ ಸಲ್ಲಿಸಿದ್ದಾರೆ. ಯೋಗ ಬಲ್ಲವರಾಗಿದ್ದ ಅವರು ಯಕ್ಷಗಾನ ಕಲಾರಾಧಕರೂ ಆಗಿದ್ದರು ಎಂದು ಉದ್ಧರಿಸಿರುವ ದಾಖಲೆಗಳಿವೆ. ಅದಲ್ಲದೆ, ಈ ಮನೆತನದ ಹಿರಿಯರಾದ ಇದಿನಬ್ಬ ಒಡೆಯರ್ ಅವರೂ ಸ್ವಾತಂತ್ರ ಯೋಧರೂ ಹಾಗೂ ಶಿಕ್ಷಣಕ್ಕಾಗಿ ದುಡಿದವರು. ಈ ಮನೆಯನ್ನು ಇಂದಿನವರೆಗೂ ಕಾಪಾಡಿಕೊಂಡು ಬರಲಾಗಿದ್ದು, ಆ ಕಾಲದ ಕೆಲವೊಂದು ನೆನಪುಗಳನ್ನು ಈ ಮನೆಯಲ್ಲಿ ಸಂಗ್ರಹಿಸಿಡಲಾಗಿದೆ. ಅದಲ್ಲದೆ, ಫರಂಗಿಪೇಟೆ ಶ್ರೀರಾಮ ಶಾಲೆಯಲ್ಲಿ ಒಡೆಯರ್ ಅವರ ಭಾವಚಿತ್ರವಿದೆ. -

ಸಾಜಿದ್ ಒಡೆಯರ್ ಅರ್ಕುಳ, ಒಡೆಯರ್ ಮನೆತನದ ಕುಟುಂಬಸ್ಥ

Writer - ಅಬ್ದುಲ್ ರಹ್ಮಾನ್ ತಲಪಾಡಿ

contributor

Editor - ಅಬ್ದುಲ್ ರಹ್ಮಾನ್ ತಲಪಾಡಿ

contributor

Similar News