ಕ್ರಿಕೆಟ್: ವೆಸ್ಟ್‌ಇಂಡೀಸ್ ವಿರುದ್ಧ ಭಾರತಕ್ಕೆ ಸರಣಿ ಜಯ

Update: 2019-08-15 03:47 GMT

ಪೋರ್ಟ್ ಆಫ್ ಸ್ಪೇನ್: ಕ್ರಿಸ್ ಗೇಲ್ ಅವರ ಅಬ್ಬರವನ್ನು ಮಬ್ಬಾಗಿಸಿದ ವಿರಾಟ್ ಕೊಹ್ಲಿಯವರ ಭರ್ಜರಿ ಶತಕದ ನೆರವಿನಿಂದ ಅತಿಥೇಯ ವೆಸ್ಟ್‌ಇಂಡೀಸ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಭಾರತ ಆರು ವಿಕೆಟ್‌ಗಳ ಸುಲಭ ಗೆಲುವು ಸಾಧಿಸಿದೆ.

ಇದರೊಂದಿಗೆ ಮೂರು ಪಂದ್ಯಗಳ ಸರಣಿಯನ್ನು 2-0 ಅಂತರದಿಂದ ವಶಪಡಿಸಿಕೊಂಡಿದೆ. ಮೊದಲ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು.

ಟ್ರಿನಿಡಾಡ್‌ನ ಕ್ವೀನ್ಸ್ ಪಾರ್ಕ್‌ನಲ್ಲಿ ನಡೆದ ಮಳೆಯಿಂದ ಬಾಧಿತ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವಿಂಡೀಸ್ ತಂಡ ಕ್ರಿಸ್‌ಗೇಲ್ ಅವರ ಹೊಡಿಬಡಿಯ 72 ರನ್ ನೆರವಿನೊಂದಿಗೆ 35 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 240 ರನ್ ಗಳಿಸಿತು. ಡಿಎಲ್‌ಎಸ್ ನಿಯಮದಂತೆ ಭಾರತಕ್ಕೆ 255 ರನ್‌ಗಳ ಪರಿಷ್ಕೃತ ಗುರಿ ನಿಗದಿಪಡಿಸಲಾಯಿತು. ನಾಯಕನ ಆಟವಾಡಿದ ಕೊಹ್ಲಿ, ಸರಣಿಯಲ್ಲಿ ಸತತ ಎರಡನೇ ಶತಕ ದಾಖಲಿಸಿದರು. ನಾಯಕನ ಅಜೇಯ 114 ರನ್‌ಗಳ ನೆರವಿನೊಂದಿಗೆ 15 ಬಾಲ್‌ಗಳು ಇರುವಂತೆಯೇ ಭಾರತ ಗೆಲುವಿನ ಗುರಿ ತಲುಪಿತು.

ಎರಡನೇ ಪಂದ್ಯದಂತೆ ಈ ಪಂದ್ಯದಲ್ಲೂ ನಾಯಕನಿಗೆ ಉತ್ತಮ ಸಾಥ್ ನೀಡಿ ಮಿಂಚಿದ ಶ್ರೇಯಸ್ ಅಯ್ಯರ್ ಕೇವಲ 41 ಎಸೆತಗಳಲ್ಲಿ 65 ರನ್ ಗಳಿಸಿ ನಾಲ್ಕನೇ ವಿಕೆಟ್‌ಗೆ 120 ರನ್ ಸೇರಿಸಲು ನೆರವಾದರು.

ಇದಕ್ಕೂ ಮುನ್ನ ಎಡಗೈ ಸ್ಪಿನ್ನರ್ ಫಬಿಯಾನ್ ಅಲೆನ್ ಒಂದೇ ಓವರ್‌ನಲ್ಲಿ ಶಿಖರ್ ಧವನ್ ಹಾಗೂ ರಿಷಭ್ ಪಂತ್ ಅವರ ಬಲಿ ಪಡೆದು ಆತಂಕ ಮೂಡಿಸಿದ್ದರು. ರೋಹಿತ್ ಶರ್ಮಾ ಅವರ ರನೌಟ್‌ನಲ್ಲೂ ಅಲೆನ್ ಪ್ರಮುಖ ಪಾತ್ರ ವಹಿಸಿದ್ದರು. ಆದರೆ ಬೌಂಡರಿಗೆರೆಯಲ್ಲಿ ಫೀಲ್ಡಿಂಗ್ ಮಾಡುವ ವೇಳೆ ಆದ ಗಾಯದಿಂದ ತಮ್ಮ ಏಳು ಓವರ್ ಕೋಟಾ ಮುಗಿಸಲು ಅಲೆನ್‌ಗೆ ಸಾಧ್ಯವಾಗಲಿಲ್ಲ.

ವೆಸ್ಟ್‌ಇಂಡೀಸ್ ಇನಿಂಗ್ಸ್‌ನಲ್ಲಿ ಟಿ-ಟ್ವೆಂಟಿ ಮಾದರಿಯ ಆಟವಾಡಿ, ಭಾರತೀಯ ಬೌಲರ್‌ಗಳನ್ನು ದಂಡಿಸಿದ ಗೇಲ್, ಐದು ಸಿಕ್ಸ್ ಹಾಗೂ ಎಂಟು ಬೌಂಡರಿ ನೆರವಿನೊಂದಿಗೆ ಕೇವಲ 41 ಎಸೆತಗಳಲ್ಲಿ 72 ರನ್ ಗಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News