ಧ್ವಜಾರೋಹಣದ ಸಿದ್ಧತೆ ಸಂದರ್ಭ ವಿದ್ಯುತ್ ಆಘಾತ: ಇಬ್ಬರು ವಿದ್ಯಾರ್ಥಿಗಳು ಮೃತ್ಯು

Update: 2019-08-15 14:56 GMT
ಸಾಂದರ್ಭಿಕ ಚಿತ್ರ

ಗಾಂಧೀನಗರ, ಆ.15: ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣಕ್ಕೆ ಸಿದ್ಧತೆ ನಡೆಸುತ್ತಿದ್ದ ಸಂದರ್ಭ ವಿದ್ಯುತ್ ಆಘಾತಕ್ಕೆ ಒಳಗಾಗಿ 10ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟ ಘಟನೆ ಗುಜರಾತ್‌ನ ಮಹಿಸಾಗರ ಜಿಲ್ಲೆಯಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಧ್ವಜವನ್ನು ಹಾರಿಸಲು ಬಳಸುವ ಲೋಹದ ಕಂಬಿ ವಿದ್ಯುತ್ ತಂತಿಗೆ ತಾಗಿ ಈ ದುರಂತ ಸಂಭವಿಸಿದೆ. ಸಂತ್ರಮ್‌ಪುರ ತಾಲೂಕಿನ ಕೇನ್‌ಪುರ ಗ್ರಾಮದಲ್ಲಿರುವ ಸರಕಾರಿ ಶಾಲೆಯಲ್ಲಿ ಗುರುವಾರ ಬೆಳಿಗ್ಗೆ ಸ್ವಾತಂತ್ರ ದಿನಾಚರಣೆಗೆ ಸಿದ್ಧತೆ ನಡೆಯುತ್ತಿತ್ತು. ಧ್ವಜ ಹಾರಿಸಲು ಬಳಸುವ ಲೋಹದ ಕಂಬಿಯನ್ನು ಶಾಲೆಯ ಟೆರೇಸ್ ಮೇಲಿಡಲಾಗಿತ್ತು. ಅದನ್ನು ತರಲು ಹೋದ 10ನೇ ತರಗತಿಯ ವಿದ್ಯಾರ್ಥಿಗಳಾದ ದಿಲೀಪ್ ರಾಣಾ ಮತ್ತು ಗಣಪತ್ ವಲ್ವಾಯ್ ಕಂಬಿಯನ್ನು ಮೇಲೆತ್ತಿದಾಗ ಮೇಲಿನಿಂದ ಹಾದುಹೋಗಿದ್ದ ವಿದ್ಯುತ್ ತಂತಿಗೆ ತಗಲಿ ವಿದ್ಯುತ್ ಆಘಾತವಾಗಿದೆ.

ನೆಲಕ್ಕೆ ಕುಸಿದುಬಿದ್ದ ಬಾಲಕರನ್ನು ಶಾಲೆಯ ಸಿಬ್ಬಂದಿಗಳು ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರೂ ಅದಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ಎಂವಿ ಕಾಂತ್ ಹೇಳಿದ್ದಾರೆ. ದುರ್ಘಟನೆಗೆ ಶಾಲಾಡಳಿತದ ನಿರ್ಲಕ್ಷವೇ ಕಾರಣ ಎಂದು ಮೃತ ಬಾಲಕರ ಕುಟುಂಬದವರು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News