ಪ್ರವಾಹ: ಸಹಜ ಸ್ಥಿತಿಗೆ ಮರಳುತ್ತಿರುವ ಕೇರಳ

Update: 2019-08-15 17:03 GMT

ತಿರುವನಂತಪುರ, ಆ. 15: ಕೇರಳದಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯ ತೀವ್ರತೆ ಗುರುವಾರ ಕಡಿಮೆಯಾಗಿದೆ. ಯಾವುದೇ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಿಲ್ಲ. ಮಲಪ್ಪುರಂ, ಕೋಝಿಕ್ಕೋಡ್, ಕಣ್ಣೂರು ಜಿಲ್ಲೆಗಳಲ್ಲಿ ಗುರುವಾರ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ವಯನಾಡ್, ಕಾಸರಗೋಡು ಜಿಲ್ಲೆಗಳು ವ್ಯಾಪಕ ಮಳೆಗೆ ಸಾಕ್ಷಿಯಾಗಿತ್ತು. ಇಡುಕ್ಕಿ, ಮಲಪ್ಪುರ, ಕಣ್ಣೂರು ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿ ಶುಕ್ರವಾರ ವ್ಯಾಪಕ ಮಳೆ ಸುರಿಯಲಿದೆ. ಶುಕ್ರವಾರದ ಬಳಿಕ ಮಳೆಯ ತೀವ್ರತೆ ಕಡಿಮೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆ ತಿಳಿಸಿದೆ.

ರಾಜ್ಯದಲ್ಲಿ ಮಳೆ ಸಂಬಂಧಿ ದುರ್ಘಟನೆಗಳಲ್ಲಿ ಮೃತಪಟ್ಟವರ ಸಂಖ್ಯೆ 105ಕ್ಕೆ ಏರಿಕೆಯಾಗಿದೆ. ಕಳೆದ ವಾರ ಭೂಕುಸಿತ ಸಂಭವಿಸಿದ ಮಲಪ್ಪುರಂ ಜಿಲ್ಲೆಯ ಕವಳಪಾರದಲ್ಲಿ ಮತ್ತೆ 7 ಮೃತದೇಹಗಳು ಪತ್ತೆಯಾಗಿವೆ. ಈ ವಲಯದಲ್ಲಿ 30 ಮಂದಿ ಮೃತಪಟ್ಟಿದ್ದಾರೆ ಎಂದು ದೃಢಪಟ್ಟಿದೆ. ಅಲ್ಲದೆ, 29 ಮಂದಿ ನಾಪತ್ತೆಯಾಗಿದ್ದಾರೆ. ವಯನಾಡ್ ಜಿಲ್ಲೆಯ ಪುದುಮಲದಲ್ಲಿ ಸಂಭವಿಸಿದ ಭೂಕುಸಿತದ ಬಳಿಕ ನಾಪತ್ತೆಯಾಗಿರುವ 7 ಮಂದಿಯನ್ನು ಪತ್ತೆ ಹಚ್ಚಲು ಅಧಿಕಾರಿಗಳು ಮ್ಯಾಪಿಂಗ್ ತಜ್ಞರ ನೆರವು ಪಡೆದಿದ್ದಾರೆ. ಈ ನಡುವೆ ರಾಜ್ಯದಲ್ಲಿ ಪರಿಹಾರ ಕಾರ್ಯಾಚರಣೆ ಸಮರೋಪಾದಿಯಲ್ಲಿ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News