ಮಾನವ ಘನತೆಯ ಚಳವಳಿ

Update: 2019-08-15 18:31 GMT

ಗುರುವಿಂದಾಯಿತ್ತೆಂಬೆನೆ?
ಗುರುವಿಂದಾಗದು.
ಲಿಂಗದಿಂದಾಯಿತ್ತೆಂಬೆನೆ?
ಲಿಂಗದಿಂದಾಗದು.
ಜಂಗಮದಿಂದಾಯಿತ್ತೆಂಬೆನೆ?
ಜಂಗಮದಿಂದಾಗದು.
ಪಾದೋದಕದಿಂದಾಯಿತ್ತೆಂಬೆನೆ?
ಪಾದೋದಕದಿಂದಾಗದು.
ಪ್ರಸಾದದಿಂದಾಯಿತ್ತೆಂಬೆನೆ?
ಪ್ರಸಾದದಿಂದಾಗದು.
ತನ್ನಿಂದ ಅಹುದು, ತನ್ನಿಂದ
ಹೋಹುದು ಕಾಣಾ
ಕೂಡಲಚೆನ್ನಸಂಗಮದೇವಾ.
                             -ಚೆನ್ನಬಸವಣ್ಣ

ವಚನ ಚಳವಳಿ ಮಾನವಘನತೆಯ ಚಳವಳಿಯಾಗಿದೆ. ಈ ಘನತೆಯ ಮೂಲ ಕಾಯಕದಲ್ಲಿದೆ ಮತ್ತು ಕಾಯಕದಿಂದ ಬಂದದ್ದನ್ನು ಮಾತ್ರ ಸ್ವೀಕರಿಸುವುದರಲ್ಲಿದೆ. ಹೀಗಾಗಿ ಶರಣರು ದೇವರಿಗೂ ಬೇಡುವವರಲ್ಲ. ಬೇಡುವುದು ಕಾಯಕಕ್ಕೆ ಮಾಡುವ ಅಪಮಾನ. ಆ ಮೂಲಕ ಮಾನವಘನತೆಯನ್ನು ಎತ್ತಿಹಿಡಿದಿದ್ದರು. ಐಹಿಕ ಬದುಕಿನ ವಿಚಾರ ಬಂದಾಗ ಶರಣರು ಎಂದೂ ದೇವರ ಮೇಲೆ ಅವಲಂಬಿತ ರಾದವರಲ್ಲ. ‘‘ವ್ಯಾಧಿ ಬಂದಡೆ ನರಳು, ಬೇನೆ ಬಂದಡೆ ಒರಲು, ಜೀವ ಹೋದಡೆ ಸಾಯಿ, ಇದಕ್ಕಾ ದೇವರ ಹಂಗೇಕೆ?’’ ಎಂದು ಲದ್ದೆಯ ಸೋಮಣ್ಣ ಪ್ರಶ್ನಿಸಿದ್ದಾರೆ.
ದೈನಂದಿನ ಬದುಕಿನ ಆಗುಹೋಗುಗಳೆಲ್ಲ ಆಯಾ ವ್ಯಕ್ತಿಯಿಂದಲೇ ನೆರವೇರುವಂಥವು ಹೊರತಾಗಿ ಗುರು, ಲಿಂಗ, ಜಂಗಮ, ಪಾದೋದಕ ಮತ್ತು ಪ್ರಸಾದದಿಂದ ಆಗುವುದಿಲ್ಲ ಎಂದು ಚೆನ್ನಬಸವಣ್ಣನವರು ತಿಳಿಸಿದ್ದಾರೆ.
‘‘ಶಿವಶಕ್ತಿ ಸಂಪುಟವೆಂಬುದೆಂತು ಹೇಳಿರಣ್ಣಾ
ಶಿವನೇ ಚೈತನ್ಯಾತ್ಮಕನು. ಶಕ್ತಿಯೆ ಚಿತ್ತು.
ಇಂತು ಚೈತನ್ಯಾತ್ಮಕನೆ ಚಿತ್‌ಸ್ವರೂಪನೆಂದರಿಯಬಲ್ಲಡೆ
ಆತನೆ ಶರಣ ಗುಹೇಶ್ವರಾ.’’
ಎಂದು ಪ್ರಭುದೇವರು ತಿಳಿಸಿದ್ದಾರೆ. ಶಿವನೇ ಚೈತನ್ಯನಾದ ಕಾರಣ ಮತ್ತು ಆತನೆ ಚಿತ್‌ಸ್ವರೂಪನೆಂದು ಅರಿತಾಗ ನಾವು ಮಾಡುವ ಕಾಯಕಕ್ಕೂ ಆತನೇ ಮೂಲವಾಗಿರುವನು. ಆದ್ದರಿಂದ ಮಾನವರು ಕಾಯಕವನ್ನು ಅವಲಂಬಿಸಿದಾಗ ಭೌತಿಕ ಜಗತ್ತಿನ ಅವಶ್ಯಕತೆಗಳಿಗಾಗಿ ದೇವರಿಗಾಗಲಿ, ಇನ್ನೊಬ್ಬರಿಗಾಗಲಿ ಕೇಳುವ ಅವಶ್ಯಕತೆ ಇರುವುದಿಲ್ಲ.
‘‘ಹಸಿದಾಗ ಒಂದು ತುತ್ತು ಓಗರವನಿಕ್ಕುವೆ. ನಾ ದೇವ ಕಾಣಾ ಗುಹೇಶ್ವರಾ!’’ ಎಂದು ಪ್ರಭುದೇವರು ಇನ್ನೊಂದು ವಚನದಲ್ಲಿ ಮಾನವನ ಮಹತ್ವವನ್ನು ಸಾರಿದ್ದಾರೆ.
‘‘ತನುವ ಬೇಡಿದಡೀವೆ, ಮನವ ಬೇಡಿದಡೀವೆ, ಧನವ ಬೇಡಿದಡೀವೆ, ಬೇಡು ಬೇಡೆಲೆ ಹಂದೆ’’ ಎಂದು ಬಸವಣ್ಣನವರು ದೇವರಿಗೆ ಹೇಳಿದ್ದಾರೆ. ಹೀಗೆ ದೇವರನ್ನು ಹೇಡಿ ಎಂದು ಕರೆಯುವ ಮೂಲಕ ಮಾನವಕುಲಕ್ಕೆ ಧೈರ್ಯ ತುಂಬಿದ್ದಾರೆ. ‘‘ಮನುಷ್ಯರು ದುಡಿಯಬೇಕು ಮತ್ತು ಕೊಡಬೇಕು’’ ಎಂಬುದರ ಕಡೆಗೆ ಒತ್ತು ನೀಡಿದ್ದಾರೆ. ಹೀಗೆ ಶರಣರು ವ್ಯಷ್ಟಿ, ಸಮಷ್ಟಿ ಮತ್ತು ಇವುಗಳಿಗೆ ಕಾರಣವಾದ ಸೃಷ್ಟಿಕರ್ತನ ಮಧ್ಯೆ ಇರುವ ಸಾಮರಸ್ಯವನ್ನು ಕಾಯಕ, ದಾಸೋಹದ ಮೂಲಕ ಎತ್ತಿ ತೋರಿಸಿದ್ದಾರೆ.
‘‘ಬ್ರಹ್ಮನ ನಾವು ಬಲ್ಲೆವು, ವಿಷ್ಣುವ ನಾವು ಬಲ್ಲೆವು
ತೆತ್ತೀಸಕೋಟಿ ದೇವತೆಗಳ ನಾವು ಬಲ್ಲೆವು
ಅದೇನು ಕಾರಣವೆಂದಡೆ;
ಇವರು ಹಲವು ಕಾಲ ನಮ್ಮ ನೆರೆಮನೆುಲ್ಲಿದ್ದರಾಗಿ
ಇವರು ದೇವರೆಂಬುದ ನಾ ಬಲ್ಲೆನಾಗಿ

ಒಲ್ಲೆನೆಂದಾತನಂಬಿಗ ಚೌಡಯ್ಯ.’’ ಎಂದು ಅಂಬಿಗರ ಚೌಡಯ್ಯನವರು ಹೇಳಿದ್ದಾರೆ. 33 ಕೋಟಿ ದೇವತೆಗಳು ಮಾನವ ನಿರ್ಮಿತವಾಗಿವೆ. ಆದ್ದರಿಂದ ಇವು ಕಣ್ಣಿಗೆ ಕಾಣುತ್ತವೆ. ಜಗತ್ತನ್ನು ಸೃಷ್ಟಿಸಿದ ಸೃಷ್ಟಿಕರ್ತ ಅಗೋಚರನಾಗಿದ್ದಾನೆ. ಇದೆಲ್ಲವನ್ನು ಬಲ್ಲ ಅಂಬಿಗರ ಚೌಡಯ್ಯನವರು ಮಾನವ ನಿರ್ಮಿತ ದೇವರುಗಳನ್ನು ತಿರಸ್ಕರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News