ಸಾನಿಯಾ ಮಿರ್ಝಾ ಸೆಕೆಂಡ್ ಇನಿಂಗ್ಸ್?

Update: 2019-08-16 04:12 GMT

ಹೊಸದಿಲ್ಲಿ, ಆ.16: ಎರಡು ವರ್ಷಗಳಿಂದ ಟೆನಿಸ್ ಅಂಕಣದಿಂದ ಮರೆಯಾಗಿದ್ದ ಭಾರತದ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಝಾ  ಮುಂದಿನ ಜನವರಿ ವೇಳೆಗೆ ಅಂತಾರಾಷ್ಟ್ರೀಯ ಸರ್ಕ್ಯೂಟ್‌ಗೆ ಮರಳುವ ಸಾಧ್ಯತೆ ನಿಚ್ಚಳವಾಗಿದೆ. ಸಾನಿಯಾ ಎನ್‌ಡಿಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಸ್ವತಃ ಈ ಅಂಶ ಬಹಿರಂಗಪಡಿಸಿದ್ದಾರೆ.

ಸಾನಿಯ ಮಿರ್ಝಾ 2017ರಲ್ಲಿ ಚೀನಾ ಓಪನ್‌ನಲ್ಲಿ ಕೊನೆಯ ಪಂದ್ಯವಾಡಿದ್ದರು. "ನಾನೀಗ ಅಭ್ಯಾಸ ಆರಂಭಿಸಿದ್ದೇನೆ ಹಾಗೂ ಜನವರಿಯಲ್ಲಿ ವಾಪಸಾಗುವ ಪ್ರಯತ್ನ ನಡೆಸಿದ್ದೇನೆ. ಬಹುಶಃ ನನ್ನ ದೇಹ ಇದಕ್ಕೆ ಸಹಕರಿಸಬಹುದು. ನನ್ನ ಶರೀರ ಅವಕಾಶ ನೀಡಿದರೆ ಹಾಗೂ ನನ್ನ ಅತ್ಯುತ್ತಮ ಮಟ್ಟವನ್ನು ಮತ್ತೆ ನಾನು ತಲುಪಿದ್ದೇನೆ ಎಂದು ನನಗೆ ಅನಿಸಿದರೆ, ಖಚಿತವಾಗಿಯೂ ಮತ್ತೆ ಕಣಕ್ಕೆ ಇಳಿಯುತ್ತೇನೆ" ಎಂದು ಸ್ಪಷ್ಟಪಡಿಸಿದರು.

ಈ ನಿಟ್ಟಿನಲ್ಲಿ ಮುಂದಿನ ಕೆಲ ತಿಂಗಳು ಮಹತ್ವದ್ದು ಎಂದು ಅವರು ಹೇಳಿದರು. "ಮುಂದಿನ ಕೆಲ ತಿಂಗಳ ಕಾಲ ನಾವು ಕಾದು ನೋಡಬೇಕು. ನಾನು ದೈಹಿಕವಾಗಿ ಯಾವ ಹಂತದಲ್ಲಿದ್ದೇನೆ ಎಂದು ತಿಳಿದುಕೊಳ್ಳಲು ಮುಂದಿನ ಕೆಲ ತಿಂಗಳುಗಳು ಪ್ರಮುಖ" ಎಂದು ವಿವರಿಸಿದರು.

ಆದರೆ ಎರಡನೇ ಇನಿಂಗ್ಸ್‌ನಲ್ಲಿ ಯಾವುದೇ ನಿರ್ದಿಷ್ಟ ಗುರಿಗಳಿಲ್ಲ ಎಂದು ಸ್ಪಷ್ಟಪಡಿಸಿದರು. 2015ರಲ್ಲಿ ವಿಶ್ವ ಮಹಿಳಾ ಡಬಲ್ಸ್‌ನಲ್ಲಿ ಅಗ್ರ ರ್ಯಾಂಕಿಂಗ್ ಗಳಿಸಿದ ಕೀರ್ತಿ ಇವರದ್ದು. ಎರಡು ವರ್ಷಗಳ ಬಳಿಕ ಕಣಕ್ಕೆ ಮರಳುವ ಯೋಚನೆ ಏಕೆ ಎಂದು ಕೇಳಿದಾಗ "ಮತ್ತಷ್ಟು ಸಾಧಿಸುವ ಬಯಕೆ ನನ್ನದು" ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News