ವಾಜಪೇಯಿ ಪುಣ್ಯತಿಥಿ ; ಪ್ರಮುಖರಿಂದ ಗೌರವಾರ್ಪಣೆ

Update: 2019-08-16 14:12 GMT

ಹೊಸದಿಲ್ಲಿ, ಆ.16: ಬಿಜೆಪಿಯ ಹಿರಿಯ ನಾಯಕ, ಸ್ಥಾಪಕ ಸದಸ್ಯ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಪ್ರಥಮ ವರ್ಷದ ಪುಣ್ಯತಿಥಿಯ ಸಂದರ್ಭದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಹಾಗೂ ಪ್ರಮುಖ ಬಿಜೆಪಿ ನಾಯಕರು ರಾಜ್‌ಘಾಟ್‌ನಲ್ಲಿರುವ ಅಟಲ್ ಸ್ಮಾರಕ ಸದೈವ ಅಟಲ್‌ಗೆ ಭೇಟಿ ನೀಡಿ ಗೌರವ ಸಲ್ಲಿಸಿದರು.

ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆಪಿ ನಡ್ಡಾ ಹಾಗೂ ಇತರ ನಾಯಕರು ವಾಜಪೇಯಿಯವರ ಸ್ಮಾರಕಕ್ಕೆ ಭೇಟಿ ನೀಡಿ ಶ್ರದ್ಧಾಂಜಲಿ ಸಲ್ಲಿಸಿದರು. ವಾಜಪೇಯಿಯವರ ಪುತ್ರಿ ನಮಿತಾ ಕೌಲ್ ಭಟ್ಟಾಚಾರ್ಯ ಮತ್ತು ಮೊಮ್ಮಗಳು ನಿಹಾರಿಕಾ ಪ್ರಾರ್ಥನಾ ಸಭೆಯಲ್ಲಿ ಉಪಸ್ಥಿತರಿದ್ದರು. ದೇಶದ ಅತ್ಯುನ್ನತ ಮುಖಂಡರಲ್ಲಿ ಒಬ್ಬರಾಗಿರುವ ವಾಜಪೇಯಿ ದೀರ್ಘಕಾಲದ ಅಸೌಖ್ಯದ ಬಳಿಕ 93ನೇ ವಯಸ್ಸಿನಲ್ಲಿ 2018ರ ಆಗಸ್ಟ್ 16ರಂದು ದಿಲ್ಲಿಯ ಎಐಐಎಂಎಸ್‌ನಲ್ಲಿ ನಿಧನರಾಗಿದ್ದರು.

ದೇಶದ ಪ್ರಧಾನಿ ಹುದ್ದೆಗೇರಿದ ಬಿಜೆಪಿಯ ಪ್ರಪ್ರಥಮ ಮುಖಂಡನಾಗಿರುವ ವಾಜಪೇಯಿ 1998ರಿಂದ 2004ರವರೆಗೆ ಎನ್‌ಡಿಎ ಸರಕಾರದ ನೇತೃತ್ವ ವಹಿಸಿದ್ದರು. 1996ರಲ್ಲಿ 13 ದಿನ , 1998ರಿಂದ 1999ರವರೆಗೆ 13 ತಿಂಗಳು ಹಾಗೂ 1999ರಿಂದ 2004ರವರೆಗೆ - ಹೀಗೆ 3 ಅವಧಿಯಲ್ಲಿ ಪ್ರಧಾನಿಯಾಗಿ ಕಾರ್ಯ ನಿರ್ವಹಿಸಿದ್ದರು. 2014ರಲ್ಲಿ ಅವರಿಗೆ ಭಾರತರತ್ನ ಪ್ರಶಸ್ತಿ ನೀಡಲಾಗಿತ್ತು.

ವಾಜಪೇಯಿಯವರ ಜನ್ಮ ದಿನವಾದ ಡಿಸೆಂಬರ್ 25ನ್ನು ಬಿಜೆಪಿಯು ಉತ್ತಮ ಆಡಳಿತ ದಿನವನ್ನಾಗಿ ಆಚರಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News