ಸಂಪತ್ತು ಸೃಷ್ಟಿಕರ್ತರನ್ನು ಗೌರವಿಸುವಂತೆ ಪ್ರಧಾನಿಯ ಕರೆ ವಿತ್ತಸಚಿವರಿಗೆ ಕೇಳಿಸಿದೆ ಎಂದು ಆಶಿಸಿದ್ದೇನೆ:ಪಿ.ಚಿದಂಬರಂ

Update: 2019-08-16 14:54 GMT

ಹೊಸದಿಲ್ಲಿ, ಆ.16: ಪ್ರಧಾನಿ ನರೇಂದ್ರ ಮೋದಿ ಅವರು ತನ್ನ ಸ್ವಾತಂತ್ರ್ಯದಿನ ಭಾಷಣದಲ್ಲಿ ಕುಟುಂಬ ಕಲ್ಯಾಣ,ಸಂಪತ್ತು ಸೃಷ್ಟಿಸುವವರಿಗೆ ಗೌರವ ಮತ್ತು ಒಂದು ಬಾರಿ ಬಳಕೆಯ ಪ್ಲಾಸ್ಟಿಕ್ ನಿಷೇಧಕ್ಕೆ ಒತ್ತು ನೀಡಿರುವುದನ್ನು ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಅವರು ಸ್ವಾಗತಿಸಿದ್ದಾರೆ.

‘ಪ್ರಧಾನಿಯವರ ಮೂರು ಸಲಹೆಗಳ ಪೈಕಿ ಎರಡನೆಯದನ್ನು ವಿತ್ತಸಚಿವೆ ಮತ್ತು ಅವರ ತೆರಿಗೆ ಅಧಿಕಾರಿಗಳು ಹಾಗೂ ತನಿಖಾಧಿಕಾರಿಗಳ ತಂಡವು ಸರಿಯಾಗಿ ಮತ್ತು ಸ್ಪಷ್ಟವಾಗಿ ಕೇಳಿಸಿಕೊಂಡಿದೆ ಎಂದು ನಾನು ಆಶಿಸಿದ್ದೇನೆ ’ಎಂದು ಚಿದಂಬರಂ ಶುಕ್ರವಾರ ಟ್ವೀಟಿಸಿದ್ದಾರೆ.

ಸಂಪತ್ತನ್ನು ಸೃಷ್ಟಿಸುವವರು ದೇಶದ ಸಂಪತ್ತಾಗಿದ್ದಾರೆ ಎಂದು ತನ್ನ ಭಾಷಣದಲ್ಲಿ ಹೇಳಿದ್ದ ಮೋದಿ,ಸಂಪತ್ತು ಸೃಷ್ಟಿಯು ಪ್ರಮುಖ ರಾಷ್ಟ್ರೀಯ ಸೇವೆಯಾಗಿದೆ. ಸಂಪತ್ತನ್ನು ಸೃಷ್ಟಿಸುವವರನ್ನು ಸಂಶಯದ ದೃಷ್ಟಿಯಿಂದ ನೋಡುವುದು ಬೇಡ. ಅವರು ಗೌರವಕ್ಕ್ಕೆ ಅರ್ಹರಾಗಿದ್ದಾರೆ. ಸಂಪತ್ತು ಸೃಷ್ಟಿಯಾದಾಗಲೇ ಸಂಪತ್ತು ಹಂಚಲ್ಪಡುತ್ತದೆ ಎಂದು ಒತ್ತಿ ಹೇಳಿದ್ದರು.

 ಆದಾಯ ತೆರಿಗೆ ಅಧಿಕಾರಿಗಳ ಕಿರುಕುಳದಂತಹ ವಿಷಯಗಳ ಬಗ್ಗೆ ಮಾತನಾಡದಂತೆ ಸರಕಾರಿ ಅಧಿಕಾರಿಯೋರ್ವರು ತನಗೆ ಸೂಚಿಸಿದ್ದರು ಎಂದು ಖ್ಯಾತ ಉದ್ಯಮಿ ಕಿರಣ ಮಝುಮ್ದಾರ್ ಶಾ ಅವರು ಇತ್ತೀಚಿಗೆ ತಿಳಿಸಿದ್ದರು. ಕಾಫಿ ಡೇ ಸ್ಥಾಪಕ ವಿ.ಜಿ.ಸಿದ್ದಾರ್ಥ ಅವರು,ಆದಾಯ ತೆರಿಗೆ ಇಲಾಖೆಯ ಮಾಜಿ ಮಹಾ ನಿರ್ದೇಶಕರು ತನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಕಂಪನಿಯ ಆಡಳಿತ ಮಂಡಳಿಗೆ ಬರೆದಿದ್ದ ಪತ್ರದಲ್ಲಿ ತಿಳಿಸಿದ್ದರು.

‘ಪ್ರಧಾನಿಯವರ ಮೊದಲ ಮತ್ತು ಮೂರನೇ ಸಲಹೆಗಳು ಜನತೆಯ ಚಳವಳಿಗಳಾಗಬೇಕು. ಸ್ಥಳೀಯ ಮಟ್ಟಗಳಲ್ಲಿ ಈ ಚಳವಳಿಗಳನ್ನು ಮುನ್ನಡೆಸಲು ನೂರಾರು ಸ್ವಯಂಸೇವಾ ಸಂಸ್ಥೆಗಳು ಸಿದ್ಧವಾಗಿವೆ ’ಎಂದೂ ಚಿದಂಬರಂ ತನ್ನ ಟ್ವೀಟ್‌ನಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News