ಜಸ್ಟಿಸ್ ಕುರೇಶಿ ಪದೋನ್ನತಿ ಬಗ್ಗೆ ವಾರದೊಳಗೆ ನಿರ್ಧಾರ: ಕೇಂದ್ರ

Update: 2019-08-16 15:53 GMT

ಹೊಸದಿಲ್ಲಿ, ಆ.16: ನ್ಯಾಯಾಧೀಶ ಕುರೇಶಿ ಅವರನ್ನು ಮಧ್ಯ ಪ್ರದೇಶ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರನ್ನಾಗಿ ನೇಮಕ ಮಾಡುವ ಕೊಲಿಜಿಯಂನ ಮೇ 10ರ ಸಲಹೆಯ ಬಗ್ಗೆ ಒಂದು ವಾರದೊಳಗೆ ನಿರ್ಧಾರ ತೆಗೆದುಕೊಳ್ಳುವುದಾಗಿ ಕೇಂದ್ರ ಸರಕಾರ ಸರ್ವೋಚ್ಚ ನ್ಯಾಯಾಲಯಕ್ಕೆ ಶುಕ್ರವಾರ ತಿಳಿಸಿದೆ.

ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಮುಖ್ಯ ನ್ಯಾಯಾಧೀಶ ರಂಜನ್ ಗೊಗೊಯಿ ಮತ್ತು ನ್ಯಾಯಾಧೀಶರಾದ ಎಸ್.ಎ ಬೊಬ್ಡೆ ಮತ್ತು ಎಸ್. ಅಬ್ದುಲ್ ನಝೀರ್ ಅವರನ್ನೊಳಗೊಂಡ ಪೀಠಕ್ಕೆ ಈ ವಿಷಯವನ್ನು ತಿಳಿಸಿದರು. ಈ ಹಿನ್ನೆಲೆಯಲ್ಲಿ ಈ ವಿಷಯದ ಆಲಿಕೆಯನ್ನು ಮುಂದೂಡಿದ ನ್ಯಾಯಾಲಯ ಮುಂದಿನ ದಿನಾಂಕವನ್ನು ಆಡಳಿತ ಕಡೆಯಿಂದ ನಿಗದಿಪಡಿಸಲಾಗುವುದು ಎಂದು ತಿಳಿಸಿದೆ.

 ಕೊಲಿಜಿಯಂನ ಪ್ರಸ್ತಾವ ಪರಿಗಣನೆಯಲ್ಲಿದೆ ಎಂದು ಮೆಹ್ತಾ ಅವರು ಪೀಠಕ್ಕೆ ತಿಳಿಸಿದ್ದ ಹಿನ್ನೆಲೆಯಲ್ಲಿ ಆಗಸ್ಟ್ 14ರಂದು ಈ ಬಗ್ಗೆ ಕೇಂದ್ರ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಘನ ನ್ಯಾಯಾಲಯ ಆಗಸ್ಟ್ 2ರಂದು ತಿಳಿಸಿತ್ತು. ನ್ಯಾಯಾಧೀಶ ಕುರೇಶಿ ಅವರಿಗೆ ಪದೋನ್ನತಿ ನೀಡಬೇಕೆಂದು ಕೇಂದ್ರಕ್ಕೆ ನಿರ್ದೇಶನ ನೀಡುವಂತೆ ಗುಜರಾತ್ ಉಚ್ಚ ನ್ಯಾಯಾಲಯದ ವಕೀಲರ ಸಂಘ ಸರ್ವೊಚ್ಚ ನ್ಯಾಯಾಲಯದಲ್ಲಿ ಮನವಿ ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News