ನಾವು ಸ್ವಲ್ಪ ಸಮಯ ನೀಡಲು ಬಯಸುತ್ತೇವೆ: ಸುಪ್ರೀಂ ಕೋರ್ಟ್

Update: 2019-08-16 16:09 GMT

ಹೊಸದಿಲ್ಲಿ, ಆ. 16: ಜಮ್ಮು ಹಾಗೂ ಕಾಶ್ಮೀರದಲ್ಲಿ ಮಾಧ್ಯಮದ ಮೇಲೆ ವಿಧಿಸಲಾಗಿರುವ ನಿರ್ಬಂಧ ತೆಗೆದು ಹಾಕುವಂತೆ ಕೋರಿ ಸಲ್ಲಿಸಿದ ಮನವಿಗೆ ಯಾವುದೇ ನಿರ್ದೇಶನ ನೀಡುವ ಮೊದಲು ಸ್ಪಲ್ಪ ಸಮಯ ಕಾಯುವುದಾಗಿ ಸರ್ವೋಚ್ಚ ನ್ಯಾಯಾಲಯ ಶುಕ್ರವಾರ ಹೇಳಿದೆ.

ಈ ಮನವಿಯ ವಿಚಾರಣೆ ಸಂದರ್ಭ ಕೇಂದ್ರ ಸರಕಾರ, ಜಮ್ಮು ಹಾಗೂ ಕಾಶ್ಮೀರದಲ್ಲಿ ಪರಿಸ್ಥಿತಿ ಸುಧಾರಿಸುತ್ತಿದೆ. ನಿರ್ಬಂಧವನ್ನು ಕ್ರಮೇಣ ಹಿಂಪಡೆಯಲಾಗುತ್ತಿದೆ ಎಂದು ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿತು.

ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಹಾಗೂ ನ್ಯಾಯಮೂರ್ತಿಗಳಾದ ಎಸ್.ಎ. ಬೊಬ್ಡೆ, ಎಸ್.ಎ. ನಝೀರ್ ಅವನ್ನು ಒಳಗೊಂಡ ಪೀಠ, ‘‘ನಾವು ಕೇಂದ್ರ ಸರಕಾರಕ್ಕೆ ಸ್ಪಲ್ಪ ಸಮಯ ನೀಡಲು ಬಯಸುತ್ತೇವೆ. ಕಣಿವೆಯಲ್ಲಿ ಲ್ಯಾಂಡ್‌ಲೈನ್ ಹಾಗೂ ಬ್ರಾಡ್‌ಬ್ಯಾಂಡ್‌ನ್ನು ಇಂದು ಸಂಜೆ ಒಳಗೆ ಕ್ರಮೇಣ ಮರು ಸ್ಥಾಪಿಸಲಾಗುತ್ತ್ತಿದೆ ಎಂಬ ಮಾಧ್ಯಮ ವರದಿಯನ್ನು ನಾನು ಓದಿದೆ. ಆದುದರಿಂದ ಸಂಬಂಧಿತ ವಿಷಯಗಳೊಂದಿಗೆ ನಾವು ಈ ಅರ್ಜಿಯ ವಿಚಾರಣೆ ಕೈಗೆತ್ತಿಕೊಳ್ಳಲಿದ್ದೇವೆ’’ ಎಂದು ಹೇಳಿತು.

‘‘ಅಲ್ಲಿ ಲ್ಯಾಂಡ್‌ಲೈನ್ ಕಾರ್ಯಾಚರಿಸುತ್ತಿದೆ. ಇಂದು ಬೆಳಗ್ಗೆ ಜಮ್ಮು ಹಾಗೂ ಕಾಶ್ಮೀರದ ಉಚ್ಚ ನ್ಯಾಯಾಲಯದ ನ್ಯಾಯಾಧೀಶರು ಕರೆ ಮಾಡಿದ್ದರು’’ ಎಂದು ಪೀಠ ಹೇಳಿದೆ.

‘‘ಪ್ರಕರಣದ ವಿಚಾರಣೆಯನ್ನು ಯಾವಾಗ ಕೈಗೆತ್ತಿಕೊಳ್ಳಬಹುದು ಎಂದು ನಾವು ಪರಿಶೀಲಿಸುತ್ತೇವೆ. ಆಡಳಿತದ ಪರ ವಾದ ಆಲಿಸಿದ ಬಳಿಕ ದಿನಾಂಕ ನಿಗದಿಗೊಳಿಸಲಿದ್ದೇವೆ’’ ಎಂದು ಪೀಠ ಹೇಳಿದೆ.

 ‘ಕಾಶ್ಮೀರ್ ಟೈಮ್ಸ್’ನ ಕಾರ್ಯನಿರ್ವಾಹಕ ಸಂಪಾದಕಿ ಅನುರಾಧಾ ಭಾಸಿನ್ ಪರವಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದ ನ್ಯಾಯವಾದಿ ವೃಂದಾ ಗ್ರೋವರ್, ಪತ್ರಕರ್ತರಿಗೆ ತಮ್ಮ ಕೆಲಸಗಳನ್ನು ನಿರ್ವಹಿಸಲು ಕಷ್ಟವಾಗುತ್ತಿರುವುದರಿಂದ ಸಂವಹನವನ್ನು ಆದಷ್ಟು ಬೇಗ ಮರು ಸ್ಥಾಪಿಸುವ ಅಗತ್ಯ ಇದೆ ಎಂದರು.

ನನ್ನ ಮನವಿ ಪತ್ರಿಕಾ ಸ್ವಾತಂತ್ರಕ್ಕೆ ಸಂಬಂಧಿಸಿದ್ದು. ವಿಧಿ 370ನ್ನು ರದ್ದುಗೊಳಿಸಿರುವುದಕ್ಕೂ ಇದಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಗ್ರೋವರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News