ವಿಧಿ 370 ರದ್ದು ಅತಿ ದೊಡ್ಡ ಮೈಲಿಗಲ್ಲು: ಅಮಿತ್ ಶಾ

Update: 2019-08-16 16:14 GMT

ಜಿಂದ್ (ಹರ್ಯಾಣ), ಆ. 16: ಜಮ್ಮು ಹಾಗೂ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370 ವಿಧಿ ರದ್ದುಗೊಳಿಸಿರುವುದು ‘ದೇಶದ ಏಕತೆ ಹಾಗೂ ಸಮಗ್ರತೆಯಲ್ಲಿ ಅತಿ ದೊಡ್ಡ ಮೈಲುಗಲ್ಲು. ಇದು ರಾಜ್ಯಕ್ಕೆ ಅಭಿವೃದ್ಧಿಯ ಖಾತರಿ ನೀಡಲಿದೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಪ್ರತಿಪಾದಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾತಂತ್ರ ದಿನಾಚರಣೆ ಭಾಷಣದಲ್ಲಿ ರಕ್ಷಣಾ ಪಡೆಗಳ ದಂಡನಾಯಕ (ಮೂರು ಪಡೆಗಳಿಗೆ ಓರ್ವ ಮುಖ್ಯಸ್ಥ) ನ ಹುದ್ದೆ ಸೃಷ್ಟಿಸುವುದಾಗಿ ಹೇಳಿದ್ದಾರೆ. ಇದರಿಂದ ದೇಶದ ರಕ್ಷಣಾ ಕ್ಷೇತ್ರ ಬಲಗೊಳ್ಳಲಿದೆ ಎಂದು ಶಾ ಹೇಳಿದರು.

1999ರ ಕಾರ್ಗಿಲ್ ಯುದ್ಧದ ಬಳಿಕ ಈ ಹುದ್ದೆ ಸೃಷ್ಟಿಸುವ ಶಿಫಾರಸು ಮಾಡಲಾಗಿತ್ತು. ಮೂರು ಸೇನಾ ಪಡೆಗಳ ನಡುವೆ, ಸರಕಾರ ಹಾಗೂ ಸೇನೆಯ ನಡುವೆ ಸಂವಹನ ನಡೆಸುವ ಉದ್ದೇಶವನ್ನು ಇದು ಹೊಂದಿದೆ. ರಕ್ಷಣಾ ಪಡೆಗಳ ದಂಡನಾಯಕ ರಕ್ಷಣೆ ಹಾಗೂ ವ್ಯೆಹಾತ್ಮಕ ವಿಷಯಗಳಲ್ಲಿ ಪ್ರಧಾನಿ ಅವರಿಗೆ ಸಲಹೆ ನೀಡಲಿದ್ದಾರೆ.

ಹರ್ಯಾಣ ಚುನಾವಣೆ ಹಿನ್ನೆಲೆಯಲ್ಲಿ ಜಾಟ್ ಸಮುದಾಯ ಪ್ರಾಬಲ್ಯ ಹೊಂದಿರುವ ಜಿಂದ್‌ನಲ್ಲಿ ಸಾರ್ವಜನಿಕ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, 370 ವಿಧಿ ರದ್ದುಗೊಳಿಸಿರುವುದು ಜಮ್ಮು, ಕಾಶ್ಮೀರ ಹಾಗೂ ಲಡಾಖ್‌ನ ಅಭಿವೃದ್ಧಿಗೆ ನೆರವಾಗಲಿದೆ ಹಾಗೂ ಈ ವಲಯ ಭಯೋತ್ಪಾದನೆ ಮುಕ್ತವಾಗಲಿದೆ ಎಂದರು.

ಎರಡನೇ ಅವಧಿಗೆ ಅಧಿಕಾರಕ್ಕೆ ಬಂದ 75 ದಿನಗಳಲ್ಲಿ ಮೋದಿ ನೇತೃತ್ವದ ಸರಕಾರ 270ನೇ ವಿಧಿಯನ್ನು ರದ್ದುಗೊಳಿಸಿತು. ಆದರೆ, ಈ ಹಿಂದಿನ ಕಾಂಗ್ರೆಸ್ ನೇತೃತ್ವದ ಸರಕಾರ 75 ವರ್ಷಗಳ ಆಡಳಿತ ನಡೆಸಿದರು ಇದನ್ನು ಮಾಡಲಿಲ್ಲ. ಯಾಕೆಂದರೆ, ಅದಕ್ಕೆ ಮತ ಬ್ಯಾಂಕ್ ಮುಖ್ಯವಾಯಿತು ಎಂದು ಅವರು ಹೇಳಿದರು.

ಕಾಶ್ಮೀರ ಭಾರತದ ಅಂತರ್ಗತ ಭಾಗ ಎಂದು ನಾವು ಹೇಳುತ್ತಿದ್ದೆವು. ಆದರೆ, 370 ವಿಧಿ ಯಾವುದೋ ವಿಷಯ ಇನ್ನು ಕೂಡ ಅಪೂರ್ಣವಾಗಿದೆ ಎಂಬ ಸಂದೇಶ ನೀಡುತ್ತಿತ್ತು ಎಂದು ಅಮಿತ್ ಶಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News