ಹಿಂಜರಿತದ ಕಳವಳಗಳ ನಡುವೆ ಆರ್ಥಿಕತೆಯನ್ನು ಪುನರ್‌ಪರಿಶೀಲಿಸಿದ ಪ್ರಧಾನಿ ಮೋದಿ

Update: 2019-08-16 16:26 GMT

ಹೊಸದಿಲ್ಲಿ, ಆ.16: ಸಂಪತ್ತು ಕುಸಿತ ಮತ್ತು ಉದ್ಯೋಗ ನಷ್ಟಕ್ಕೆ ಕಾರಣವಾಗಿರುವ ವಿವಿಧ ಕ್ಷೇತ್ರಗಳಲ್ಲಿಯ ಹಿಂಜರಿತಕ್ಕೆ ಪರಿಹಾರವನ್ನು ಕಂಡುಕೊಳ್ಳುವ ತನ್ನ ಸರಕಾರದ ಪರದಾಟದ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರು ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರ ಜೊತೆ ಆರ್ಥಿಕತೆ ಸ್ಥಿತಿಯ ಸಮಗ್ರ ಪರಿಶೀಲನೆ ನಡೆಸಿದ್ದಾರೆ.

ಗುರುವಾರ ತನ್ನ ಸ್ವಾತಂತ್ರೋತ್ಸವ ದಿನದ ಭಾಷಣವನ್ನು ಮುಗಿಸಿದ ಬಳಿಕ ಮೋದಿ ಅವರು ಆರ್ಥಿಕ ಹಿಂಜರಿತದ ಸ್ವರೂಪ ಮತ್ತು ಅದರ ದೀರ್ಘಾವಧಿ ಪರಿಣಾಮಗಳ ಬಗ್ಗೆ ಸೀತಾರಾಮನ್ ಮತ್ತು ವಿತ್ತ ಸಚಿವಾಲಯದ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು ಎಂದು ಬೆಳವಣಿಗೆಯನ್ನು ಹತ್ತಿರದಿಂದ ಬಲ್ಲ ಮೂಲಗಳು ತಿಳಿಸಿದವು.

ಸರಕಾರವು ಶೀಘ್ರವೇ ಕ್ಷೇತ್ರವಾರು ಉತ್ತೇಜಕ ಕ್ರಮಗಳನ್ನು ಪ್ರಕಟಿಸುವ ನಿರೀಕ್ಷೆಯಿದೆ.

 ಭಾರತದ ಆರ್ಥಿಕ ಬೆಳವಣಿಗೆಯು 2018-19ರಲ್ಲಿ ಶೇ.6.8ರಷ್ಟಾಗಿದ್ದು,ಇದು 2014-15ರ ಬಳಿಕ ಅತ್ಯಂತ ನಿಧಾನಗತಿಯ ಬೆಳವಣಿಗೆಯಾಗಿದೆ. ಬಳಕೆದಾರ ವಿಶ್ವಾಸವು ಕ್ಷೀಣಿಸುತ್ತಿದ್ದು,ವಿದೇಶಿ ನೇರ ಹೂಡಿಕೆ ಸ್ಥಿತಿಯು ಯಾವುದೇ ಬದಲಾವಣೆಗಳಿಲ್ಲದೆ ನಿಂತ ನೀರಿನಂತಾಗಿದೆ. ಅಂತರರಾಷ್ಟ್ರೀಯ ವ್ಯಾಪಾರ ಮತ್ತು ಕರೆನ್ಸಿ ಸಮರಗಳು ಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತಿವೆ.

ಆರ್ಥಿಕತೆಯನ್ನು ಸಂಕಷ್ಟದಿಂದ ಪಾರು ಮಾಡಲು ಚಿಂತನೆ ನಡೆಸಲಾಗುತ್ತಿರುವ ಕ್ರಮಗಳ ಬಗ್ಗೆ ವಿತ್ತ ಸಚಿವಾಲಯವು ತುಟಿಪಿಟಕ್ಕೆನ್ನುತ್ತಿಲ್ಲ. ಆರ್ಥಿಕ ಹಿಂಜರಿತವು ಆವರ್ತಿತ ಚಕ್ರವಾಗಿದ್ದು,ನಾಲ್ಕನೇ ತ್ರೈಮಾಸಿಕದ ವೇಳೆ ಚೇತರಿಸಿಕೊಳ್ಳುವ ನಿರೀಕ್ಷೆಯಿದೆ ಎಂದು ಆರ್‌ಬಿಐ ಕಳೆದ ತಿಂಗಳು ಹೇಳಿತ್ತು.

 ಆದರೆ ಆರ್ಥಿಕ ಹಿಂಜರಿತವು ಇನ್ನಷ್ಟು ತೀವ್ರಗೊಳ್ಳಬಹುದಾದ ಲಕ್ಷಣಗಳು ಕಂಡುಬರುತ್ತಿವೆ. ವಾಹನ ತಯಾರಿಕೆ ಕ್ಷೇತ್ರವು ಕಳೆದೆರಡು ದಶಕಗಳಲ್ಲಿಯೇ ಅತ್ಯಂತ ದುರ್ದೆಶೆಯಲ್ಲಿದ್ದು,ಆಟೊಮೊಬೈಲ್ ಮತ್ತು ಪೂರಕ ಉದ್ಯಮಗಳಲ್ಲಿ ಸಹಸ್ರಾರು ಜನರು ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ. ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಮಾರಾಟವಾಗದೇ ಉಳಿದುಕೊಂಡಿರುವ ಮನೆಗಳ ಸಂಖ್ಯೆ ದಿನೇದಿನೇ ಹೆಚ್ಚುತ್ತಿದ್ದರೆ,ಎಫ್‌ಎಂಜಿಸಿ ಕಂಪನಿಗಳು ಮೊದಲ ತ್ರೈಮಾಸಿಕದಲ್ಲಿ ಕುಸಿತವನ್ನು ದಾಖಲಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News