ಎರಡು ವರ್ಷಗಳ ಹಿಂದೆ ಡಿಲಿಟ್ ಮಾಡಿದ್ದ ಬೀಫ್ ಕುರಿತ ಫೇಸ್‌ಬುಕ್ ಪೋಸ್ಟ್‌ಗಾಗಿ ಮಹಿಳೆ ವಿರುದ್ಧ ಪ್ರಕರಣ

Update: 2019-08-16 18:26 GMT

ಹೊಸದಿಲ್ಲಿ, ಆ.16: ಎರಡು ವರ್ಷಗಳ ಹಿಂದಿನ ಫೇಸ್‌ಬುಕ್‌ನಲ್ಲಿಯ ಬೀಫ್ ಕುರಿತ ಪೋಸ್ಟ್‌ಗಾಗಿ ಸಂಶೋಧನಾ ವಿದ್ವಾಂಸೆಯೋರ್ವರ ವಿರುದ್ಧ ಅಸ್ಸಾಂ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಮಹಿಳೆ ತಾನು ಫೇಸ್‌ ಬುಕ್ ‌ನಲ್ಲಿ ಪೋಸ್ಟ್ ಮಾಡಿದ್ದ ಬೆನ್ನಿಗೇ ಅದನ್ನು ಅಳಿಸಿಹಾಕಿದ್ದರು.

2017,ಜೂನ್‌ನಲ್ಲಿ ಭಾರತ-ಪಾಕಿಸ್ತಾನ ನಡುವೆ ಕ್ರಿಕೆಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಔಟ್ ಆದ ಬಳಿಕ ಹತಾಶೆಗೊಂಡು ತಾನು ಈ ಬರಹವನ್ನು ಫೇಸ್‌ಬುಕ್ ಪೇಜ್‌ಗೆ ಪೋಸ್ಟ್ ಮಾಡಿದ್ದೆ. ಆದರೆ ಅದನ್ನು ತಪ್ಪಾಗಿ ವ್ಯಾಖ್ಯಾನಿಸಲಾಗಿದ್ದರಿಂದ ತಾನು ಕೆಲವೇ ನಿಮಿಷಗಳಲ್ಲಿ ಅದನ್ನು ಅಳಿಸಿದ್ದೆ ಎಂದು ರೆಹಾನಾ ಸುಲ್ತಾನಾ ಅವರು ಹೇಳಿದ್ದನ್ನು ಸುದ್ದಿಸಂಸ್ಥೆಯು ಉಲ್ಲೇಖಿಸಿದೆ.

“ಅದೊಂದು ಹಳೆಯ ಪೋಸ್ಟ್,ನಿಜ. ಆದರೆ ಅದು ಮತ್ತೊಮ್ಮೆ ಕಾಣಿಸಿಕೊಂಡಿದೆ. ಇದನ್ನು ನಾವು ಗಂಭೀರವಾಗಿ ಪರಿಗಣಿಸಿದ್ದು,ಸ್ವಯಂಪ್ರೇರಿತ ಪ್ರಕರಣವನ್ನು ದಾಖಲಿಸಿಕೊಂಡಿದ್ದೇವೆ” ಎಂದು ಗುವಾಹಟಿ ಡಿಸಿಪಿ ಕೆ.ಕೆ.ಚೌಧುರಿ ಅವರು ತಿಳಿಸಿದ್ದಾರೆ.

ರೆಹಾನಾ ಅಸ್ಸಾಮಿ ಭಾಷೆಯಲ್ಲಿನ ತನ್ನ ಮೂಲ ಪೋಸ್ಟ್‌ನಲ್ಲಿ “ಪಾಕಿಸ್ತಾನದ ಸಂಭ್ರಮಾಚರಣೆಯನ್ನು ಬೆಂಬಲಿಸಲು ಇಂದು ಬೀಫ್ ತಿಂದಿದ್ದೇನೆ. ನಾನು ಏನನ್ನು ತಿನ್ನುತ್ತೇನೋ ಅದು ನನ್ನ ರುಚಿಯನ್ನು ಅವಲಂಬಿಸಿದೆ. ಆದರೆ ವಿವಾದವನ್ನು ಸೃಷ್ಟಿಸಬೇಡಿ ಮತ್ತು ಬೀಫ್ ಕುರಿತು ನಿಮ್ಮ ವಿಚಾರಣೆ ಪ್ರವೃತ್ತಿಯನ್ನು ತೋರಿಸಬೇಡಿ” ಎಂದು ಬರೆದಿದ್ದರು.

ಅಸ್ಸಾಮಿನಲ್ಲಿ ಬೀಫ್ ಸೇವನೆ ಕಾನೂನು ಬಾಹಿರವಲ್ಲ.

ತನ್ನ ವಿರುದ್ಧ ಪ್ರಕರಣ ದಾಖಲಾದ ಬಳಿಕ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ರೆಹಾನಾ, ”ಪೋಸ್ಟ್‌ನ್ನು ನಾನು ಈ ಬಕ್ರೀದ್ ಸಂದರ್ಭದಲ್ಲಿ ಬರೆದಿದ್ದೇನೆ ಎಂಬ ವಿವಾದವೆದ್ದಿದೆ. ಆದರೆ ಅದನ್ನು ನಾನು ಎರಡು ವರ್ಷಗಳ ಹಿಂದೆ 2017,ಜೂನ್‌ನಲ್ಲಿ ಬರೆದಿದ್ದೆ. ಅದರೆ ನನ್ನ ಹೇಳಿಕೆಯು ತಪ್ಪುವ್ಯಾಖ್ಯಾನಕ್ಕೊಳಗಾಗಿತ್ತು ಮತ್ತು ಜನರು ನನ್ನನ್ನು ಗುರಿಯಾಗಿಸಿಕೊಳ್ಳಲು ಆರಂಭಿಸಿದಾಗ ಅದನ್ನು ಅಳಿಸಿದ್ದೆ. ನನ್ನ ವ್ಯಂಗ್ಯಾತ್ಮಕ ಹೇಳಿಕೆಯನ್ನು ತಪ್ಪಾಗಿ ಗ್ರಹಿಸಲಾಗಿದೆ ಎಂದು ಸ್ಪಷ್ಟನೆಯನ್ನೂ 2017,ಜೂ.19ರಂದು ಪೋಸ್ಟ್ ಮಾಡಿದ್ದೆ” ಎಂದು ತಿಳಿಸಿದರು.

“ಪಾಕಿಸ್ತಾನದ ಜೊತೆ ಕ್ರಿಕೆಟ್ ಪಂದ್ಯದಲ್ಲಿ ಭಾರತ ಕೆಟ್ಟದಾಗಿ ಆಡಿತ್ತು ಮತ್ತು ಕೊಹ್ಲಿ ಸೊನ್ನೆಗೆ ಔಟ್ ಆಗಿದ್ದರು. ಆ ಬಗ್ಗೆ ನನ್ನ ನೋವನ್ನು ವ್ಯಕ್ತಪಡಿಸಲು ವ್ಯಂಗ್ಯವಾಗಿ ಬರೆದಿದ್ದೆ. ಆ ಸಮಯದಲ್ಲಿ ಬೀಫ್ ಸೇವನೆ ಕುರಿತ ವಿವಾದ ಮತ್ತು ಬೀಫ್ ಸೇವನೆಗಾಗಿ ಜನರ ಮೇಲಿನ ಹಲ್ಲೆಗಳು ದೇಶಾದ್ಯಂತ ಸುದ್ದಿಯಾಗಿದ್ದರಿಂದ ನಾನು ಆ ರೀತಿ ಬರೆದಿದ್ದೆ. ಸಂದರ್ಭಕ್ಕೆ ಹೊರತಾಗಿ ಈಗ ನನ್ನ ಮೇಲೆ ಪ್ರಕರಣ ದಾಖಲಾಗಿದ್ದು ಹೇಗೆ ಎನ್ನುವುದು ನನಗೆ ಅರ್ಥವಾಗುತ್ತಿಲ್ಲ” ಎಂದು ರೆಹಾನಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News