ಕುಸಿದ ನ್ಯೂಝಿಲ್ಯಾಂಡ್ಗೆ ಬಿ.ಜೆ. ವಾಟ್ಲಿಂಗ್ ಆಸರೆ

Update: 2019-08-16 17:39 GMT

ಗಾಲೆ, ಆ.16: ಔಟಾಗದೆ 63 ರನ್ ಗಳಿಸಿದ ಬಿಜೆ ವಾಟ್ಲಿಂಗ್ ಶ್ರೀಲಂಕಾ ವಿರುದ್ಧ ಮೊದಲ ಟೆಸ್ಟ್‌ನಲ್ಲಿ ನ್ಯೂಝಿಲ್ಯಾಂಡ್ ತಂಡವನ್ನು ಬ್ಯಾಟಿಂಗ್ ಕುಸಿತದಿಂದ ಪಾರು ಮಾಡಿದರು.

  ಮೂರನೇ ದಿನದಾಟದಂತ್ಯಕ್ಕೆ ನ್ಯೂಝಿಲ್ಯಾಂಡ್ ಎರಡನೇ ಇನಿಂಗ್ಸ್‌ನಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 195 ರನ್ ಗಳಿಸಿದೆ. ಮೊದಲ ಇನಿಂಗ್ಸ್‌ನಲ್ಲಿ ಲಂಕಾಕ್ಕೆ 18 ರನ್ ಮುನ್ನಡೆ ಬಿಟ್ಟುಕೊಟ್ಟ ಪ್ರವಾಸಿ ನ್ಯೂಝಿಲ್ಯಾಂಡ್ ತಂಡ ಒಂದು ಹಂತದಲ್ಲಿ 25 ರನ್‌ಗೆ 3 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಆರಂಭಿಕ ಬ್ಯಾಟ್ಸ್ ಮನ್ ಜೀತ್ ರಾವಲ್(4),ನಾಯಕ ಕೇನ್ ವಿಲಿಯಮ್ಸನ್ (4) ಹಾಗೂ ರಾಸ್ ಟೇಲರ್(3) ಅಲ್ಪ ಮೊತ್ತಕ್ಕೆ ಔಟಾದರು.ಟಾಮ್ ಲಥಾಮ್(45, 81 ಎಸೆತ, 3 ಬೌಂಡರಿ, 1 ಸಿಕ್ಸರ್)ಹಾಗೂ ವಾಟ್ಲಿಂಗ್(ಔಟಾಗದೆ 63, 138 ಎಸೆತ, 5 ಬೌಂಡರಿ)ಹೋರಾಟಕಾರಿ ಪ್ರದರ್ಶನ ನೀಡಿ ತಂಡ 177 ರನ್ ಮುನ್ನಡೆ ಸಾಧಿಸಲು ನೆರವಾಗಿದ್ದಾರೆ.

ನಿಕೊಲ್ಸ್(26) ಹಾಗೂ ಸೌಥಿ(23) ಎರಡಂಕೆಯ ಸ್ಕೋರ್ ಗಳಿಸಿದರು. ಲಂಕಾದ ಪರ ಲಸಿತ್ ಎಂಬುಲ್‌ಡೆನಿಯಾ(4-71) ಹಾಗೂ ಧನಂಜಯ ಡಿಸಿಲ್ವಾ(2-16)ಆರು ವಿಕೆಟ್ ಹಂಚಿಕೊಂಡರು. ಮಂದಬೆಳಕಿನಿಂದಾಗಿ ಪಂದ್ಯ ಕೊನೆಗೊಂಡಾಗ ವಿಲಿಯಮ್ ಸೊಮೆರ್‌ವಿಲ್ಲೆ ಔಟಾಗದೆ 5 ರನ್ ಗಳಿಸಿದ್ದರು. ಇದಕ್ಕೂ ಮೊದಲು 7 ವಿಕೆಟ್‌ಗಳ ನಷ್ಟಕ್ಕೆ 227 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ಶ್ರೀಲಂಕಾ ನಿನ್ನೆಯ ಮೊತ್ತಕ್ಕೆ 40 ರನ್ ಸೇರಿಸಿ ಕೊನೆಯ 3 ವಿಕೆಟ್‌ಗಳನ್ನು ಕಳೆದುಕೊಂಡು 267 ರನ್‌ಗೆ ಆಲೌಟಾಯಿತು.

ಔಟಾಗದೆ 39 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ಡಿಕ್ವೆಲ್ಲಾ 109 ಎಸೆತಗಳಲ್ಲಿ 61 ರನ್ ಗಳಿಸಿದರು. 28 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ಲಕ್ಮಲ್ 40 ರನ್ ಗಳಿಸಿ ಔಟಾದರು. ನ್ಯೂಝಿಲ್ಯಾಂಡ್ ಪರ ಪಟೇಲ್(5-89) ಯಶಸ್ವಿ ಬೌಲರ್ ಎನಿಸಿಕೊಂಡರು. ಸೊಮೆರ್‌ವಿಲ್ಲೆ(3-83) ಹಾಗೂ ಬೌಲ್ಟ್(2-45)ಐದು ವಿಕೆಟ್‌ಗಳನ್ನು ಹಂಚಿಕೊಂಡರು.

ಸಂಕ್ಷಿಪ್ತ ಸ್ಕೋರ್

ನ್ಯೂಝಿಲ್ಯಾಂಡ್ ಮೊದಲ ಇನಿಂಗ್ಸ್: 249

 ಶ್ರೀಲಂಕಾ ಮೊದಲ ಇನಿಂಗ್ಸ್: 93.2 ಓವರ್‌ಗಳಲ್ಲಿ 267ಕ್ಕೆ ಆಲೌಟ್(ಡಿಕ್ವೆಲ್ಲಾ 61, ಮೆಂಡಿಸ್ 53, ಮ್ಯಾಥ್ಯೂಸ್ 50, ಲಕ್ಮಲ್ 40, ಕರುಣರತ್ನೆ 39, ಪಟೇಲ್ 5-89, ಸೊಮರ್‌ವಿಲ್ಲೆ 3-83, ಬೌಲ್ಟ್ 2-45)

 ನ್ಯೂಝಿಲ್ಯಾಂಡ್ 2ನೇ ಇನಿಂಗ್ಸ್: 76 ಓವರ್‌ಗಳಲ್ಲಿ 195/7

(ವಾಟ್ಲಿಂಗ್ ಔಟಾಗದೆ 63, ಲಥಾಮ್ 45, ನಿಕೊಲ್ಸ್ 26, ಎಂಬುಲ್‌ಡೆನಿಯಾ 4-71, ಧನಂಜಯ ಡಿಸಿಲ್ವಾ 2-16)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News