370ನೆ ವಿಧಿ ರದ್ದು: ವಿಶ್ವಸಂಸ್ಥೆಯ ರಹಸ್ಯ ಸಭೆ ಆರಂಭ

Update: 2019-08-16 17:41 GMT

ವಿಶ್ವಸಂಸ್ಥೆ, ಆ.16: ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿರುವ ಭಾರತ ಸರಕಾರದ ಕ್ರಮವನ್ನು ಚರ್ಚಿಸಲು ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ರಹಸ್ಯ ಸಭೆ ಶುಕ್ರವಾರ ಆರಂಭವಾಗಿದೆ.

ಪಾಕಿಸ್ತಾನದ ಕೋರಿಕೆಗೆ ಚೀನಾ ಬೆಂಬಲ ಸೂಚಿಸಿದ ಹಿನ್ನೆಲೆಯಲ್ಲಿ ಈ ಸಭೆ ನಡೆಯುತ್ತಿದೆ. ಚರ್ಚೆ ಅನೌಪಚಾರಿಕ ಕಾರಣ ಈ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರಗಳನ್ನು ಅಧಿಕೃತವಾಗಿ ಘೋಷಿಸಲಾಗುವುದಿಲ್ಲ. ಈ ಸಭೆಯಲ್ಲಿ ಭಾರತ ಮತ್ತು ಪಾಕಿಸ್ತಾನ ಪಾಲ್ಗೊಳ್ಳುತ್ತಿಲ್ಲ. ಭದ್ರತಾ ಸಮಿತಿಯ ಐದು ಖಾಯಂ ಪ್ರತಿನಿಧಿ ರಾಷ್ಟ್ರಗಳಿಗೆ ಹಾಘೂ 10 ಖಾಯಂ ಪ್ರತಿನಿಧಿಗಳಲ್ಲದ ರಾಷ್ಟ್ರಗಳಿಗೆ ಮಾತ್ರ ಸಭೆಯಲ್ಲಿ ಪಾಲ್ಗೊಳ್ಳಲು ಅವಕಾಶವಿದೆ.

  ಈ ವಿಷಯ ಭಾರತ ಮತ್ತು ಪಾಕಿಸ್ತಾನದ ದ್ವಿಪಕ್ಷೀಯ ವಿಷಯವಾಗಿದೆ ಎಂದು ಸಭೆಯಲ್ಲಿ ಪಾಲ್ಗೊಳ್ಳುವ ಮುನ್ನ ರಷ್ಯಾದ ಸಹಾಯಕ ಖಾಯಂ ಪ್ರತಿನಿಧಿ ಡಿಮಿಟ್ರಿ ಪೊಲ್ಯಾಂಕ್ಸಿ ಹೇಳಿದ್ದಾರೆ. ಕಾಶ್ಮೀರದಲ್ಲಿ ಏನಾಗುತ್ತಿದೆ ಎಂದು ಸಭೆಯಲ್ಲಿ ಚರ್ಚೆ ನಡೆಯಲಿದೆ. ಮುಂದಿನ ಕ್ರಮಗಳನ್ನು ಭಾರತ ಪಾಕಿಸ್ತಾನ ಚರ್ಚಿಸಿ ನಿರ್ಧರಿಸಬೇಕು ಎಂದವರು ಹೇಳಿದ್ದಾರೆ. ಭಾರತ- ಪಾಕ್ ನಡುವಿನ ಉದ್ವಿಗ್ನ ಸ್ಥಿತಿಯ ಬಗ್ಗೆ ರಶ್ಯಾಕ್ಕೆ ಕಳವಳವಿದ್ದು ಈ ಪರಿಸ್ಥಿತಿ ತಿಳಿಯಾಗಬೇಕು ಎಂಬುದು ನಮ್ಮ ನಿಲುವಾಗಿದೆ ಎಂದವರು ಹೇಳಿದ್ದಾರೆ. ಮೊದಲು ಈ ವಿಷಯವನ್ನು ಚರ್ಚಿಸುತ್ತೇವೆ. ಆ ಬಳಿಕ ಮುಂದಿನ ವಿಚಾರ ಎಂದವರು ಹೇಳಿದ್ದಾರೆ.

 ಪಾಕಿಸ್ತಾನದ ಕೋರಿಕೆಗೆ ಚೀನಾ ಬೆಂಬಲ ಸೂಚಿಸಿದ ಹಿನ್ನೆಲೆಯಲ್ಲಿ ಈ ಅಪರೂಪದ ರಹಸ್ಯ ಸಭೆ ಸಭೆ ನಡೆಯುತ್ತಿದೆ. 370ನೇ ವಿಧಿಯನ್ನು ರದ್ದುಗೊಳಿಸಿರುವುದು ತನ್ನ ಆಂತರಿಕ ವಿಷಯವಾಗಿದೆ ಎಂದು ಭಾರತವು ವಿಶ್ವ ಸಮುದಾಯಕ್ಕೆ ಸ್ಪಷ್ಟ ಮಾತುಗಳಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News