ಇಂದಿನಿಂದ ಭಾರತ-ವಿಂಡೀಸ್ ಮಂಡಳಿ ಅಧ್ಯಕ್ಷರ ಇಲೆವೆನ್ ತಂಡಗಳ ತ್ರಿದಿನ ಪಂದ್ಯ

Update: 2019-08-16 17:44 GMT

ಪೋರ್ಟ್ ಆಫ್ ಸ್ಪೇನ್, ಆ.16: ಏಕದಿನ ಮತ್ತು ಟ್ವೆಂಟಿ-20 ಸರಣಿಯನ್ನು ವಶಪಡಿಸಿಕೊಂಡಿರುವ ಟೀಮ್ ಇಂಡಿಯಾ ಶನಿವಾರ ಮೂರು ದಿನಗಳ ಅಭ್ಯಾಸ ಪಂದ್ಯದಲ್ಲಿ ವಿಂಡೀಸ್ ಮಂಡಳಿ ಅಧ್ಯಕ್ಷರ ಇಲೆವೆನ್ ತಂಡವನ್ನು ಎದುರಿಸಲಿದೆ.

ಆ.22ರಿಂದ ವೆಸ್ಟ್‌ಇಂಡೀಸ್ ವಿರುದ್ಧ ಮೊದಲ ಟೆಸ್ಟ್ ಪಂದ್ಯ ಆರಂಭಗೊಳ್ಳಲಿದ್ದು, ಇದಕ್ಕೂ ಮೊದಲು ಭಾರತಕ್ಕೆ ಅಭ್ಯಾಸ ಪಂದ್ಯದಲ್ಲಿ ಟೆಸ್ಟ್‌ಗೆ ಅಭ್ಯಾಸ ನಡೆಸುವ ಅವಕಾಶ ಒದಗಿ ಬಂದಿದೆ.

 ಟೆಸ್ಟ್ ತಜ್ಞರಾದ ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ಬೌಲರ್ ಜಸ್‌ಪ್ರೀತ್ ಬುಮ್ರಾ ಅಭ್ಯಾಸ ಪಂದ್ಯದಲ್ಲಿ ಆಡಲಿದ್ದಾರೆ.

 ನಾಯಕ ವಿರಾಟ್ ಕೊಹ್ಲಿ ಕೈ ಬೆರಳಿಗೆ ಮೂರನೇ ಏಕದಿನ ಪಂದ್ಯದ ವೇಳೆ ಗಾಯವಾಗಿತ್ತು. ಈ ಕಾರಣದಿಂದಾಗಿ ಅವರಿಗೆ ಅಭ್ಯಾಸ ಪಂದ್ಯದಲ್ಲಿ ವಿಶ್ರಾಂತಿ ನೀಡುವ ಸಾಧ್ಯತೆ ಇದೆ.

ಕೊಹ್ಲಿ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಉತ್ತಮ ಫಾರ್ಮ್‌ನಲ್ಲಿದ್ದಾರೆ. ವಿಂಡೀಸ್ ವಿರುದ್ಧ ಎರಡು ಪಂದ್ಯಗಳಲ್ಲಿ ಸತತ ಶತಕ ದಾಖಲಿಸಿದ್ದರು. ಮೊದಲ ಪಂದ್ಯ ಮಳೆಯಿಂದ ಕೊಚ್ಚಿಹೋಗಿತ್ತು. ಎರಡನೇ ಪಂದ್ಯದಲ್ಲಿ ಶತಕ ದಾಖಲಿಸಿದ್ದರು. ಮೂರನೇ ಏಕದಿನ ಪಂದ್ಯದಲ್ಲಿ 106 ರನ್ ಗಳಿಸಿದ್ದ ಅವರು ಮೂರು ಪಂದ್ಯಗಳಲ್ಲಿ ಒಟ್ಟು 234 ರನ್ ಕಲೆ ಹಾಕಿದ್ದಾರೆ. ಟ್ವೆಂಟಿ-20ಯಲ್ಲಿ 3-0 ಕ್ಲೀನ್ ಸ್ವೀಪ್ ಸಾಧಿಸಿದ್ದ ಭಾರತ ಏಕದಿನ ಕ್ರಿಕೆಟ್‌ನಲ್ಲಿ 2-0 ಜಯ ಗಳಿಸಿತ್ತು. ಭಾರತ ಕೆರಿಬಿಯನ್ ನೆಲದಲ್ಲಿ ಟೆಸ್ಟ್ ಸರಣಿಯಲ್ಲೂ ಕ್ಲೀನ್ ಸ್ವೀಪ್ ಸಾಧಿಸಲು ಎದುರು ನೋಡುತ್ತಿದೆ. ಚೇತೇಶ್ವರ ಪೂಜಾರ ಬಹಳ ಸಮಯಗಳ ಬಳಿಕ ಟೆಸ್ಟ್‌ನಲ್ಲಿ ಆಡುತ್ತಿದ್ದಾರೆ. ಆರು ತಿಂಗಳ ಹಿಂದೆ ಅಂದರೆ ಫೆಬ್ರವರಿಯಲ್ಲಿ ಸೌರಾಷ್ಟ್ರ ವಿರುದ್ಧ ರಣಜಿ ಟ್ರೋಫಿಯಲ್ಲಿ ಆಡಿದ್ದರು. ಉಪನಾಯಕ ರಹಾನೆ ಇಂಗ್ಲಿಷ್ ಕೌಂಟಿಯಲ್ಲಿ 7 ಪಂದ್ಯಗಳಲ್ಲಿ 307 ರನ್ ಗಳಿಸಿದ್ದರು. 1 ಶತಕ ಮತ್ತು 1 ಅರ್ಧಶತಕ ದಾಖಲಿಸಿದ್ದರು.

 ರೋಹಿತ್ ಶರ್ಮಾ ಮತ್ತು ರಿಷಭ್ ಪಂತ್ ವಿಂಡೀಸ್ ವಿರುದ್ಧ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಅಷ್ಟೇನೂ ಮಿಂಚಲಿಲ್ಲ. ವೃದ್ಧಿಮಾನ್ ಸಹಾ ಈಗಾಗಲೇ ಎರಡು ಅರ್ಧಶತಕಗಳನ್ನು ದಾಖಲಿಸಿದ್ದಾರೆ. ಮಾಯಾಂಕ್ ಅಗರ್‌ವಾಲ್ ಟೆಸ್ಟ್‌ನಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ಆಗಿ ಕಣಕ್ಕಿಳಿಯಲು ಯೋಚಿಸುತ್ತಿದ್ದಾರೆ. ಹನುಮ ವಿಹಾರಿ ಮತ್ತು ಲೋಕೇಶ್ ರಾಹುಲ್ ಇವರಲ್ಲಿ ಯಾರು ಕಣಕ್ಕಿಳಿಯುತ್ತಾರೆ ಎನ್ನುವುದು ಸ್ಪಷ್ಟಗೊಂಡಿಲ್ಲ.

ವೇಗಿಗಳಾದ ಉಮೇಶ್ ಯಾದವ್ ಮತ್ತು ಇಶಾಂತ್ ಶರ್ಮಾ ಟೆಸ್ಟ್‌ಗಾಗಿ ಚೆನ್ನಾಗಿ ತಯಾರಿ ನಡೆಸುವ ವಿಶ್ವಾಸದಲ್ಲಿದ್ದಾರೆ. ಸ್ಪಿನ್ ವಿಭಾಗವನ್ನು ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಮತ್ತು ಎಡಗೈ ಸ್ಪಿನ್ನರ್ ರವೀಂದ್ರ ಜಡೇಜ ಮುನ್ನಡೆಸುವರು.

ಟೆಸ್ಟ್ ಚಾಂಪಿಯನ್‌ಶಿಪ್ ಲೀಗ್ ಈಗಾಗಲೇ ಆರಂಭಗೊಂಡಿದೆ. ಎಜ್‌ಬಾಸ್ಟನ್‌ನಲ್ಲಿ ಆಸ್ಟ್ರೇಲಿಯ- ಇಂಗ್ಲೆಂಡ್ ತಂಡಗಳ ನಡುವಿನ ಆ್ಯಶಸ್ ಸರಣಿಯ ಮೊದಲ ಟೆಸ್ಟ್ ಆರಂಭದೊಂದಿಗೆ ಟೆಸ್ಟ್ ಚಾಂಪಿಯನ್‌ಶಿಪ್ ಪಂದ್ಯಗಳಿಗೆ ಚಾಲನೆ ದೊರೆತಿದೆ. ಮಾರ್ಚ್ 31 ,2021ರಂದು ಕೊನೆಗೊಳ್ಳಲಿದೆ. ಅಗ್ರ ಎರಡು ತಂಡಗಳು ಫೈನಲ್ ಪ್ರವೇಶಿಸಲಿವೆ. 12 ತಂಡಗಳು ಫೈನಲ್‌ಗೇರಲು ಹಣಾಹಣಿ ನಡೆಸಲಿವೆ. ಭಾರತ ಫೈನಲ್ ಪ್ರವೇಶಿಸುವ ಫೇವರಿಟ್ ತಂಡಗಳಲ್ಲಿ ಒಂದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News