ಗುಬ್ಬಿ ಮೇಲೆ ಬ್ರಹ್ಮಾಸ್ತ್ರ

Update: 2019-08-17 18:22 GMT

ಪ್ರೇಕ್ಷಕರ ಮೇಲೆ


ನಗುವಿನ ಅಸ್ತ್ರ ‘ಒಂದು ಮೊಟ್ಟೆಯ ಕತೆ’ ಚಿತ್ರದ ಬಳಿಕ ಅದೇ ಇಮೇಜ್ ಇರಿಸಿಕೊಂಡೇ, ಫ್ಯಾಂಟಸಿ ತುಂಬಿದ ಹಾಸ್ಯದ ಮೂಲಕ ನಗಿಸಲು ಬಂದಿದ್ದಾರೆ ರಾಜ್ ಬಿ. ಶೆಟ್ಟಿ. ವಿಶೇಷ ಏನು ಎಂದರೆ ಈ ಬಾರಿ ನಿರ್ದೇಶನದ ಜವಾಬ್ದಾರಿ ವಹಿಸಿರುವುದು ಬೇರೊಬ್ಬರು.

‘ಶ್ರೀನಿವಾಸ ಕಲ್ಯಾಣ’ ಖ್ಯಾತಿಯ ನಟ, ನಿರ್ದೇಶಕ ಎಂ.ಬಿ. ಶ್ರೀನಿವಾಸ್ ಚಿತ್ರಗಳಲ್ಲಿ ನಟರಾಗಿ ಅದರಲ್ಲಿಯೂ ಹಾಸ್ಯದ ಮೂಲಕ ಗುರುತಿಸಿಕೊಂಡಿದ್ದ ಸುಜಯ್ ಶಾಸ್ತ್ರಿ ನಿರ್ದೇಶಿಸಿದ್ದಾರೆ. ನಿರ್ದೇಶನದ ಜತೆಗೆ ಇಲ್ಲಿಯೂ ಅವರು ನಾಯಕನ ಸ್ನೇಹಿತನಾಗಿ ಹಾಸ್ಯ ಪಾತ್ರವನ್ನೇ ನಿಭಾಯಿಸಿದ್ದಾರೆ.

ಚಿತ್ರದಲ್ಲಿ ತನ್ನನ್ನು ತಾನು ಕ್ರಿಶ್ ಎಂದು ಕರೆದುಕೊಳ್ಳುವ, ಪರಿಚಯ ಪಡಿಸುವ ಯುವಕ ವೆಂಕಟ ಕೃಷ್ಣ ಗುಬ್ಬಿ. ಒಂದೂವರೆ ಲಕ್ಷ ಸಂಬಳ ಪಡೆಯುವ ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ಆತನಿಗೆ ಮದುವೆ ಮಾಡುವುದೇ ತಂದೆ ತಾಯಿಗೆ ದೊಡ್ಡ ಸಮಸ್ಯೆಯಾಗಿರುತ್ತದೆ. ಯಾಕೆಂದರೆ ಪ್ರೀತಿಸಿ ಮದುವೆಯಾಗುವ ಕನಸಲ್ಲಿ ಕ್ರಿಶ್ ಇರುತ್ತಾನೆ. ಹಾಗಾಗಿ ಪಾಲಕರು ಹುಡುಕುವ ಪ್ರತಿ ಹುಡುಗಿಯನ್ನೂ ಅವನು ನಿರಾಕರಿಸುತ್ತಾನೆ. ಇಂತಹ ಸಮಯದಲ್ಲಿ ಮ್ಯಾಟ್ರಿಮೋನಿ ಸೈಟ್‌ನಲ್ಲಿ ಆತನಿಗೆ ಹುಡುಗಿಯೊಬ್ಬಳ ಪರಿಚಯವಾಗಿ, ಇಷ್ಟವಾಗುತ್ತಾಳೆ. ಮನೆಯವರೂ ಒಪ್ಪಿ ಇನ್ನೇನು ನಿಶ್ಚಿತಾರ್ಥ ನಡೆಯಬೇಕು ಎನ್ನುವಷ್ಟರಲ್ಲಿ ಅಡ್ಡಿ ಆತಂಕಗಳು ಸೃಷ್ಟಿಯಾಗುತ್ತವೆ. ಅವುಗಳು ಯಾರಿಂದ ಆಗುತ್ತವೆ ಮತ್ತು ಅವೆಲ್ಲವನ್ನು ಆತ ಹೇಗೆ ದಾಟುತ್ತಾನೆ ಎನ್ನುವುದೇ ಸಿನೆಮಾದ ಮುಖ್ಯ ಎಳೆ.

ವೆಂಕಟಕೃಷ್ಣ ಗುಬ್ಬಿ ಯಾನೇ ಕ್ರಿಶ್ ಆಗಿ ರಾಜ್ ಬಿ. ಶೆಟ್ಟಿ ಅಭಿನಯ ಸರಳ, ಆತ್ಮೀಯ. ಅವರ ಪ್ರೇಯಸಿಯಾಗಿ ನಟಿ ಕವಿತಾ ಗೌಡರಿಗೆ ಅಭಿನಯಕ್ಕೆ ವಿಶೇಷ ಅವಕಾಶಗಳಿಲ್ಲ. ಆದರೆ ಆಕೆಯ ನಗು, ಸೌಂದರ್ಯ ಮತ್ತು ಸಿಕ್ಕ ಅವಕಾಶಗಳಲ್ಲಿ ನೀಡಿರುವ ನಟನೆ ಖಂಡಿತವಾಗಿ ಮನ ಸೆಳೆಯುವಂತಿದೆ. ನಾಯಕನ ತಂದೆಯಾಗಿ ಮಂಜುನಾಥ್ ಹೆಗಡೆ ಮತ್ತು ತಾಯಿಯಾಗಿ ಅರುಣಾ ಬಾಲರಾಜ್ ತಮ್ಮ ಎಂದಿನ ಲವಲವಿಕೆಯ ನಟನೆಯನ್ನು ಮುಂದುವರಿಸಿದ್ದಾರೆ. ನಿರ್ದೇಶಕ ಸುಜಯ್ ಶಾಸ್ತ್ರಿ ಅವರ ಪಾಲಿನ ಗಂಭೀರವಾದ ಮಾತುಗಳೇ ಪ್ರೇಕ್ಷಕರ ಪಾಲಿಗೆ ಹಾಸ್ಯದ ಹೊನಲಾಗುವುದು ವಿಶೇಷ. ಸಂಭಾಷಣೆಯ ವಿಚಾರಕ್ಕೆ ಬಂದರೆ ಪ್ರತಿಯೊಬ್ಬರ ಮಾತುಗಳು ಕೂಡ ಸರಣಿ ನಗುವಿಗೆ ಪ್ರೇರಣೆಯಾಗುತ್ತದೆ. ಶುದ್ಧ ಹಾಸ್ಯವೇ ಇದೆ ಎಂದರೂ ಮಧ್ಯದಲ್ಲೊಮ್ಮೆ ನಾಯಕನ ಗಂಡಸುತನದ ಬಗ್ಗೆ ಬರುವ ಮಾತುಗಳು ಎಲ್ಲೋ ಸ್ವಲ್ಪಗಡಿದಾಟಿ ಕಚಗುಳಿ ಇಡುತ್ತವೆ. ಆ ಕುರಿತಾದ ಮಾತುಗಳನ್ನು, ಆಂಗಿಕ ಸನ್ನೆಯನ್ನು ಹೊರತು ಪಡಿಸಿ ಕೂಡ ಇನ್ ಸ್ಪೆೆಕ್ಟರ್ ಪಾತ್ರದಲ್ಲಿ ಗೋಧೂಳಿ ಗಿರಿ ನೀಡಿರುವ ಅಭಿನಯ ಪ್ರಶಂಸಾರ್ಹ ಎನಿಸುತ್ತದೆ.

ಬಹಳ ಸಮಯದ ಬಳಿಕ ಅವರಿಗೆ ಗಂಭೀರವಾಗಿದ್ದುಕೊಂಡೇ ನಗಿಸುವಂಥ ಒಂದು ಒಳ್ಳೆಯ ಪಾತ್ರ ದೊರಕಿದೆ ಎನ್ನಬಹುದು. ಡಾನ್ ಆಗಿ ಪ್ರಮೋದ್ ಶೆಟ್ಟಿ ಪಾತ್ರ ಕೂಡ ನಗಿಸಲೆಂದೇ ಸೃಷ್ಟಿಯಾಗಿರುವುದು ಸ್ಪಷ್ಟ. ಆದರೆ ನಗಿಸುವಲ್ಲಿ ಶ್ರಮ ನೀಡುವುದು ವಿಪರ್ಯಾಸ. ಮತ್ತೋರ್ವ ಡಾನ್ ಶೋಭರಾಜ್ ಅವರು ಕ್ಲೈಮ್ಯಾಕ್ಸ್‌ಗೆ ಹಿಡಿತ ನೀಡುವಂಥ ಪಾತ್ರವನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಖಳ ಮತ್ತು ಹಾಸ್ಯ ಎರಡನ್ನೂ ಸಮರ್ಥವಾಗಿ ನಿಭಾಯಿಸಬಲ್ಲ ಅವರ ಚಾಕಚಕ್ಯತೆಯಿಂದಲೇ ಅದು ಸಾಧ್ಯವಾಗಿದೆ.

ಛಾಯಾಗ್ರಾಹಕ ಸುನೀತ್ ಹಲಗೇರಿ ದೃಶ್ಯಗಳಲ್ಲೇ ಕಾವ್ಯ ಮೂಡಿಸಿದ್ದಾರೆ. ಮಣಿಕಾಂತ್ ಕದ್ರಿಯವರು ಸಂಯೋಜಿಸಿರುವ ಹಾಡುಗಳು ಆ ಕ್ಷಣದಲ್ಲಿ ಕೇಳಲು ಇಂಪಾಗಿವೆ. ಸಂಕಲನ ಚೆನ್ನಾಗಿದೆ. ಆದರೆ ಚಿತ್ರಕ್ಕೆ ಎರಡನೇ ಭಾಗ ಸೃಷ್ಟಿಸುವ ಮಾದರಿಯಲ್ಲಿ ಕೊನೆ ನೀಡಿದ್ದಾರೆ. ಒಟ್ಟಿನಲ್ಲಿ ಮನರಂಜನೆಗೆಂದೇ ಚಿತ್ರಮಂದಿರಕ್ಕೆ ಹೋಗುವವರು ಕುಟುಂಬ ಸಮೇತ ನೋಡಿ ನಗಬಹುದಾದ ಅಪರೂಪದ ಸಿನೆಮಾ ಇದು ಎಂದು ಹೇಳಬಹುದು.

ತಾರಾಗಣ: ರಾಜ್ ಬಿ. ಶೆಟ್ಟಿ, ಕವಿತಾ ಗೌಡ
ನಿರ್ದೇಶನ: ಸುಜಯ್ ಶಾಸ್ತ್ರಿ
ನಿರ್ಮಾಣ: ಟಿ. ಆರ್. ಚಂದ್ರಶೇಖರ್

Writer - ಶಶಿಕರ ಪಾತೂರು

contributor

Editor - ಶಶಿಕರ ಪಾತೂರು

contributor

Similar News